Site icon Vistara News

David Warner: ವಿದಾಯ ಪಂದ್ಯ ಆಡಿದ ವಾರ್ನರ್​ಗೆ ವಿಶೇಷ ಉಡುಗೊರೆ ನೀಡಿದ ಪಾಕ್​ ತಂಡ

david warner

ಸಿಡ್ನಿ: ಅಂತಾರಾಷ್ಟ್ರಿಯ ಟೆಸ್ಟ್​ ಕ್ರಿಕೆಟ್​ಗೆ ವಿದಾಯ ಹೇಳಿದ ಡೇವಿಡ್​ ವಾರ್ನರ್​ಗೆ(David Warner) ಪಾಕಿಸ್ತಾನ ತಂಡದ ಆಟಗಾರರು ವಿಶೇಷ ಉಡುಗೊರೆ ನೀಡಿ ಗೌರವಿಸಿದ್ದಾರೆ. ಪಂದ್ಯ ಮುಗಿದ ಬಳಿಕ ಪಾಕ್​ ತಂಡದ ನಾಯಕ ಶಾನ್ ಮಸೂದ್ ಆಟಗಾರರ ಹಸ್ತಾಕ್ಷರವುಳ್ಳ ಜೆರ್ಸಿಯನ್ನು ಉಡುಗೊರೆಯಾಗಿ ನೀಡಿದರು.

ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ ವೇಳೆ ಮಾತನಾಡಿದ ಮಸೂದ್ “ನಾನು ಡೇವಿಡ್ ವಾರ್ನರ್‌ಗೆ ಸಣ್ಣ ಅಭಿನಂದನೆ ಹಾಗೂ ದೊಡ್ಡ ಉಡುಗೊರೆ ನೀಡಲು ಬಯಸುತ್ತೇನೆ. ನಿಮಗೆ ಪಾಕ್ ಆಟಗಾರರ ಸಹಿಯಿರುವ ಬಾಬರ್ ಅಜಂ ಅವರ ಜೆರ್ಸಿಯನ್ನು ನೀಡಲು ಬಯಸಿದ್ದು, ನಿಮ್ಮ ಮುಂದಿನ ಜೀವನ ಸುಖಕರವಾಗಿರಲಿ” ಎಂದು ಹೇಳಿ ಜೆರ್ಸಿ ನೀಡಿದರು. ವಾರ್ನರ್ ಈ ಜೆರ್ಸಿಯನ್ನು ಸಂತಸದಿಂದಲೇ ಸ್ವೀಕರಿಸಿ ಧನ್ಯವಾದ ತಿಳಿಸಿದರು.

ಸ್ಮರಣೀಯ ವಿದಾಯ


ವಿದಾಯದ ಪಂದ್ಯ ಆಡಿದ ಬಳಿಕ ತಮ್ಮ ಟೆಸ್ಟ್​ ಅನುಭವ ಹಂಚಿಕೊಂಡ ವಾರ್ನರ್​, “ನಾನು ಕಂಡ ಕನಸು ಸ್ಮರಣೀಯವಾಗಿ ಮುಕ್ತಾಯಕಂಡಿದೆ. ಅದರಲ್ಲೂ ಗೆಲುವಿನ ವಿದಾಯ ಸಿಕ್ಕಿರುವುದು ಮರೆಯಲು ಅಸಾಧ್ಯ. ಕಳೆದ 18 ತಿಂಗಳುಗಳಿಂದ ಆಸ್ಟ್ರೇಲಿಯಾ ಕ್ರಿಕೆಟ್​ನಲ್ಲಿ ಉತ್ತಮ ಸಾಧನೆ ಮಾಡಿದೆ. ಏಕದಿನ ಮತ್ತು ಟೆಸ್ಟ್​ ವಿಶ್ವಕಪ್​ ಗೆದ್ದ ಸಾಧನೆ ನಮ್ಮ ತಂಡದ್ದು. ಇಷ್ಟು ವರ್ಷಗಳ ಕಾಲ ಆಸೀಸ್​ ತಂಡದ ಪರ ಆಡಲು ಅವಕಾಶ ಸಿಕ್ಕಿದ್ದು ನನ್ನ ಸೌಭಾಗ್ಯ. ನನ್ನ ಎಲ್ಲ ಕಷ್ಟದ ಕಾಲದಲ್ಲಿ ಜತೆಗಿದ್ದ ತಂಡದ ಸಿಬ್ಬಂದಿ, ಆಟಗಾರರು ಹಾಗೂ ಕುಟುಂಬ ಸದಸ್ಯರಿಗೆ ವಿಶೇಷ ಧನ್ಯವಾದಗಳು” ಎಂದು ವಾರ್ನರ್​ ಹೇಳಿದರು.

ಇದನ್ನೂ ಓದಿ WTC 2023-25 Points Table: ಡಬ್ಲ್ಯುಟಿಸಿ​ ಅಂಕಪಟ್ಟಿಯಲ್ಲೂ ಭಾರತಕ್ಕೆ ಆಘಾತವಿಕ್ಕಿದ ಆಸ್ಟ್ರೇಲಿಯಾ

ವಾರ್ನರ್​ ಟೆಸ್ಟ್​ ಸಾಧನೆ


2011 ಜನವರಿ 4ರಂದು ಬ್ರಿಸ್ಬೇನ್‌ನಲ್ಲಿ ಕಿವೀಸ್​ ವಿರುದ್ಧದ ಪಂದ್ಯವನ್ನಾಡುವ ಮೂಲಕ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಡೇವಿಡ್ ವಾರ್ನರ್ ಒಟ್ಟು 205 ಇನಿಂಗ್ಸ್‌ಗಳಲ್ಲಿ 8,786 ರನ್ ಗಳಿಸಿದ್ದಾರೆ. 26 ಶತಕ ಹಾಗೂ 37 ಅರ್ಧಶತಕ ಬಾರಿಸಿದ್ದಾರೆ. ಅಜೇಯ 335 ಇವರ ವೈಯಕ್ತಿಕ ಗರಿಷ್ಠ ಮೊತ್ತವಾಗಿದೆ.

ಪಾಕ್​ಗೆ ಹೀನಾಯ ಸೋಲು


ಪಾಕಿಸ್ತಾನ ವಿರುದ್ಧದ ಅಂತಿಮ ಟೆಸ್ಟ್​ ಪಂದ್ಯದಲ್ಲಿ ಆಸ್ಟ್ರೇಲಿಯಾ 8 ವಿಕೆಟ್​ಗಳ ಗೆಲುವು ಸಾಧಿಸಿ 3-0 ಅಂತರದಲ್ಲಿ ಸರಣಿಯನ್ನು ಕ್ಲೀನ್​ಸ್ವೀಪ್​ ಮಾಡಿದೆ. ನಾಲ್ಕನೇ ದಿನದಾಟದಲ್ಲಿ ಗೆಲುವಿಗೆ 130 ರನ್​ಗಳ ಗುರಿ ಪಡೆದ ಆಸ್ಟ್ರೇಲಿಯಾ, ವಾರ್ನರ್​ ಮತ್ತು ಲಬುಶೇನ್​ ಅವರ ಅರ್ಧಶತಕ ಬಲದಿಂದ 2 ವಿಕೆಟ್​ ನಷ್ಟಕ್ಕೆ 130 ರನ್​ ಬಾರಿಸಿ ಗೆಲುವಿನ ನಗೆ ಬೀರಿತು. ವಿದಾಯ ಪಂದ್ಯ ಆಡಿದ ವಾರ್ನರ್​ ತಮ್ಮ ಕೊನೆಯ ಇನಿಂಗ್ಸ್​ನಲ್ಲಿ ಅರ್ಧಶತಕ ಬಾರಿಸುವ ಮೂಲಕ ನೆರದಿದ್ದ ತವರಿನ ಅಭಿಮಾನಿಗಳಿಗೆ ನಿರಾಸೆ ಮಾಡಲಿಲ್ಲ. 75 ಎಸೆತಗಳಲ್ಲಿ 57 ರನ್​ ಬಾರಿಸಿ ಮಿಂಚಿದರು.

Exit mobile version