Site icon Vistara News

David Warner: ಟಿ20 ಕ್ರಿಕೆಟ್​ಗೂ ನಿವೃತ್ತಿ ಘೋಷಿಸಿದ ವಾರ್ನರ್​; ಈ ಟೂರ್ನಿಯೇ ಕೊನೆ

David Warner t20 retirement

ಸಿಡ್ನಿ: ಈಗಾಗಲೇ ಏಕದಿನ ಮತ್ತು ಟೆಸ್ಟ್​ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿರುವ ಆಸ್ಟ್ರೇಲಿಯಾ ಕ್ರಿಕೆಟ್​ ತಂಡದ ಡ್ಯಾಶಿಂಗ್​ ಆರಂಭಿಕ ಬ್ಯಾಟರ್​ ಡೇವಿಡ್​ ವಾರ್ನರ್(David Warner)​ ಅವರು ತಮ್ಮ ಟಿ20 ಕ್ರಿಕೆಟ್​ ವಿದಾಯದ(David warner Retirement) ಕುರಿತು ಮಾಹಿತಿ ನೀಡಿದ್ದಾರೆ. ಇದೇ ವರ್ಷ ನಡೆಯುವ ಟಿ20 ವಿಶ್ವಕಪ್​ ಟೂರ್ನಿಯ(T20 World Cup 2024) ಬಳಿಕ ವಿದಾಯ ಹೇಳುವುದಾಗಿ ತಿಳಿಸಿದ್ದಾರೆ.

ವೆಸ್ಟ್ ಇಂಡೀಸ್ ವಿರುದ್ಧ ಶುಕ್ರವಾರ ನಡೆದ ಮೊದಲ ಟಿ20 ಪಂದ್ಯದ ಬಳಿಕ ವಾರ್ನರ್​ ಅವರು ತಮ್ಮ ಟಿ20 ಕ್ರಿಕೆಟ್​ ನಿವೃತ್ತಿಯ ವಿಚಾರವನ್ನು ಖಚಿತಪಡಿಸಿದರು. “ನನ್ನ ಮುಂದಿರುವುದು ಕೆಲವೇ ತಿಂಗಳು ಮಾತ್ರ. ಏಕೆಂದರೆ ಟಿ20 ವಿಶ್ವಕಪ್​ ಬಳಿಕ ನಾನು ಎಲ್ಲ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತನಾಗಲಿದ್ದೇನೆ. ಅಲ್ಲಿಯ ವರೆಗೆ ಉತ್ತಮ ಬ್ಯಾಟಿಂಗ್​ ಫಾರ್ಮ್ ಕಂಡುಕೊಳ್ಳುವುದು ಮತ್ತು ಪ್ರೇಕ್ಷಕರನ್ನು ರಂಜಿಸುವುದು ನನ್ನ ಪ್ರಮುಖ ಗುರಿ” ಎಂದು ವಾರ್ನರ್​ ಹೇಳಿದರು.

ವಿಂಡೀಸ್​ ವಿರುದ್ಧದ ಪಂದ್ಯದಲ್ಲಿ ಡೇವಿಡ್‌ ವಾರ್ನರ್‌ ವಿಸ್ಫೋಟಕ ಬ್ಯಾಟಿಂಗ್​ ನಡೆಸಿ ಗಮನ ಸೆಳೆದಿದ್ದರು. 36 ಎಸೆತಗಳಿಂದ 70 ರನ್‌ ಸಿಡಿಸಿ ಪಂದ್ಯಶ್ರೇಷ್ಠರೆನಿಸಿದ್ದರು. ಇದು ವಾರ್ನರ್​ ಆಡಿದ 100ನೇ ಟಿ20 ಪಂದ್ಯ ಕೂಡ ಆಗಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಆಸ್ಟ್ರೇಲಿಯ 7 ವಿಕೆಟಿಗೆ 213 ರನ್‌ ಪೇರಿಸಿತು. ಬೃಹತ್​ ಮೊತ್ತವನ್ನು ದಿಟ್ಟ ರೀತಿಯಲ್ಲಿ ಬೆನ್ನಟ್ಟಿಕೊಂಡು ಹೋದ ವೆಸ್ಟ್‌ ಇಂಡೀಸ್‌ 8 ವಿಕೆಟಿಗೆ 202 ರನ್‌ ಮಾಡಿ ಕೇವಲ 12 ರನ್​ ಅಂತರದಲ್ಲಿ ಸೋಲು ಕಂಡಿತು.

ಇದನ್ನೂ ಓದಿ Virat Kohli: ವಿರಾಟ್​ ಕೊಹ್ಲಿಯ ಗೈರಿಗೆ ನಿಜವಾದ ಕಾರಣವೇನು?

ಡೇವಿಡ್​ ವಾರ್ನರ್​ ಅವರು 2009ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಆಡುವ ಮೂಲಕ ಟಿ20 ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದರು. ಈವರೆಗೆ ಅವರು ಆಸ್ಟ್ರೇಲಿಯಾ ಪರ 100 ಪಂದ್ಯಗಳನ್ನು ಆಡಿ 2964* ರನ್​ ಬಾರಿಸಿದ್ದಾರೆ. 1 ಶತಕ ಮತ್ತು 25 ಅರ್ಧಶತಕ ಒಳಗೊಂಡಿದೆ.

ಟಿ20 ವಿಶ್ವಕಪ್​ ಟೂರ್ನಿ ಜೂನ್​ 1ರಿಂದ ಆರಂಭಗೊಳ್ಳಲಿದೆ. ಆಸ್ಟ್ರೇಲಿಯಾ ತಂಡವು ಬಿ ಗ್ರೂಪ್​ನಲ್ಲಿದೆ. ಈ ಗುಂಪಿನಲ್ಲಿ ಇಂಗ್ಲೆಂಡ್, ನಮೀಬಿಯಾ, ಒಮಾನ್ ಮತ್ತು ಸ್ಕಾಟ್ಲೆಂಡ್​ ತಂಡಗಳಿವೆ. ಆಸ್ಟ್ರೇಲಿಯಾ ತನ್ನ ಮೊದಲ ಪಂದ್ಯವನ್ನು ಒಮಾನ್ ವಿರುದ್ಧ ಆಡುವ ಮೂಲಕ ತಮ್ಮ ಅಭಿಯಾನ ಆರಂಭಿಸಲಿದೆ. ಈ ಪಂದ್ಯ ಜೂನ್​ 6ರಂದು ನಡೆಯಲಿದೆ. ವಿದಾಯದ ಟೂರ್ನಿ ಆಡುತ್ತಿರುವ ವಾರ್ನರ್​ಗೆ ಗೆಲುವಿನ ವಿದಾಯ ಸಿಗಲಿದೆಯಾ ಎಂದು ಕಾದು ನೋಡಬೇಕಿದೆ.

Exit mobile version