Site icon Vistara News

David Warner: ವಾರ್ನರ್​ ಟೆಸ್ಟ್​ ಕ್ರಿಕೆಟ್​ ನಿವೃತ್ತಿಯ ಸುಳಿವು ನೀಡಿದ ಪತ್ನಿ ಕ್ಯಾಂಡಿಸ್‌

david warner

ಸಿಡ್ನಿ: ಆಸ್ಟ್ರೇಲಿಯನ್ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ ಡೇವಿಡ್ ವಾರ್ನರ್(David Warner) ಅವರು ಈ ಬಾರಿಯ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಪಂದ್ಯಕ್ಕೂ ಮುನ್ನವೇ ಕ್ರಿಕೆಟ್ ವಿದಾಯದ ಕುರಿತು ಮಹತ್ವದ ಹೇಳಿಕೆ ನೀಡಿದ್ದರು. ಆದರೆ ಇದೀಗ ಅವರ ಪತ್ನಿ ಕ್ಯಾಂಡಿಸ್‌ ವಾರ್ನರ್‌(Candice Warner) ಮಾಡಿರುವ ಒಂದು ಇನ್​ಸ್ಟಾಗ್ರಾಮ್​ ಪೋಸ್ಟ್​ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ.

ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ಪಂದ್ಯದ ವೇಳೆ ವಾರ್ನರ್ ತಮ್ಮ​ ಕ್ರಿಕೆಟ್​ನ ನಿವೃತ್ತಿಯ ಬಗ್ಗೆ ಸುಳಿವು ನೀಡಿದ್ದರು. ಜನವರಿ 2024ರ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ (ಎಸ್‌ಸಿಜಿ) ಪಾಕಿಸ್ತಾನ ವಿರುದ್ಧದ ಟೆಸ್ಟ್ ಸರಣಿಯು ತನ್ನ ಅಂತಿಮ ಟೆಸ್ಟ್ ಸರಣಿಯಾಗಲಿದೆ ಎಂದು ವಾರ್ನರ್ ಘೋಷಿಸಿದ್ದರು. ಆದಾಗ್ಯೂ, ಅವರು ವಿಶ್ವದಾದ್ಯಂತ ಫ್ರಾಂಚೈಸಿ ಕ್ರಿಕೆಟ್ ಆಡಲಿದ್ದಾರೆ ಎಂದಿದ್ದರು.

“ವಿಶ್ವಕಪ್ ಬಹುಶಃ ನನ್ನ ಅಂತಿಮ ಪಂದ್ಯ ಎಂದು ನಾನು ಹಿಂದೆಯೂ ಹೇಳಿದ್ದೇನೆ. ನಾನು ಬಹುಶಃ ನನಗೆ ಮತ್ತು ನನ್ನ ಕುಟುಂಬಕ್ಕೆ ಋಣಿಯಾಗಿದ್ದೇನೆ. ನಾನು ಇಲ್ಲಿ ರನ್ ಗಳಿಸಲು ಸಾಧ್ಯವಾದರೆ ಮತ್ತು ಆಸ್ಟ್ರೇಲಿಯಾದಲ್ಲಿ ಮತ್ತೆ ಆಡುವುದನ್ನು ಮುಂದುವರಿಸಿದರೆ, ನಾನು ವೆಸ್ಟ್ ಇಂಡೀಸ್ ಸರಣಿಯನ್ನು ಆಡುವುದಿಲ್ಲ ಎಂದು ಖಂಡಿತವಾಗಿ ಹೇಳಬಲ್ಲೆ. ಪಾಕಿಸ್ತಾನದ ಸರಣಿಯನ್ನು ಆಡಲು ಸಾಧ್ಯವಾದರೆ, ನಾನು ಖಂಡಿತವಾಗಿಯೂ ಅಲ್ಲಿಯೇ ಆಟ ಮುಗಿಸುತ್ತೇನೆ” ಎಂದು 36 ವರ್ಷದ ಡೇವಿಡ್ ವಾರ್ನರ್ ಹೇಳಿದ್ದರು. ಆದರೆ ಇದೀಗ ಅವರ ಪತ್ನಿ ಮಾಡಿರುವ ಪೋಸ್ಟ್​ ಎಲ್ಲಡೆ ಸಂಚಲನ ಮೂಡಿಸಿದೆ.

ಇದನ್ನೂ ಓದಿ Ashes 2023 : ಖವಾಜ, ವಾರ್ನರ್​ಗೆ ಅವಮಾನ; ಎಂಸಿಸಿಯ ಮೂವರು ಸದಸ್ಯರು ಅಮಾನತು

“ಟೆಸ್ಟ್‌ ಕ್ರಿಕೆಟ್‌ ಜತೆ ಪ್ರವಾಸ ಮಾಡುವ ನಮ್ಮ ಒಂದು ದಶಕದ ಪ್ರಯಾಣ ಅಂತ್ಯವಾಗಿದೆ. ಇದು ಮೋಜಿನಿಂದ ಕೂಡಿತ್ತು. ನಿಮ್ಮಗೆ ಅಪಾರ ಅಭಿಮಾನಿಗಳ ಬೆಂಬಲವಿದೆ. ನಿಮ್ಮನ್ನು ಪ್ರೀತಿಸುತ್ತೇನೆ ವಾರ್ನರ್‌” ಎಂದು ಕ್ಯಾಂಡಿಸ್‌ ವಾರ್ನರ್​ ಮತ್ತು ತಮ್ಮ ಮೂರು ಮಕ್ಕಳೊಂದಿಗಿನ ಫೋಟೊ ಹಂಚಿಕೊಂಡು ಈ ಶಿರ್ಷಿಕೆ ಬರೆದಿದ್ದಾರೆ. ಈ ಪೋಸ್ಟ್​ ಗಮನಿಸುವಾಗ ವಾರ್ನರ್​ ಅವರು ನಾಲ್ಕನೇ ಆ್ಯಶಸ್​ ಪಂದ್ಯಕ್ಕೂ ಮುನ್ನವೇ ಟೆಸ್ಟ್​ ಕ್ರಿಕೆಟ್​ಗೆ(Test format) ವಿದಾಯ ಹೇಳುವ ಸಾಧ್ಯತೆಯೊಂದು ದಟ್ಟವಾಗಿದೆ.

ಆ್ಯಶಸ್​ ಟೆಸ್ಟ್‌(The ashes 2023) ಸರಣಿಯ ಮೊದಲ ಮೂರು ಪಂದ್ಯಗಳಲ್ಲಿ ವಾರ್ನರ್​ ಸಂಪೂರ್ಣ ವಿಫಲರಾಗಿದ್ದರು. ಹೀಗಾಗಿ ಅವರು ನಾಲ್ಕನೇ ಟೆಸ್ಟ್​ ಪಂದ್ಯಕ್ಕೆ ಆಯ್ಕೆಯಾಗುವುದು ಅನುಮಾನ ಎನ್ನಲಾಗಿದೆ. ಮೂರನೇ ಟೆಸ್ಟ್‌ ಪಂದ್ಯದ ಬಳಿಕ ನಾಯಕ ಪ್ಯಾಟ್‌ ಕಮಿನ್ಸ್ ಕೂಡ ಮುಂದಿನ ಪಂದ್ಯಕ್ಕೆ ವಾರ್ನರ್‌ ಸ್ಥಾನವನ್ನು ಖಾತರಿಪಡಿಸಲು ನಿರಾಕರಿಸಿದ್ದರು. ಸದ್ಯ ಆ್ಯಶಸ್​ ಸರಣಿಯಲ್ಲಿ ಆಸೀಸ್​ ಪಡೆ 2-1 ಮುನ್ನಡೆ ಸಾಧಿಸಿದೆ. ನಾಲ್ಕನೇ ಟೆಸ್ಟ್​ ಪಂದ್ಯ ಜುಲೈ 19ರಿಂದ ಆರಂಭಗೊಳ್ಳಲಿದೆ. ಇದಕ್ಕೂ ಮುನ್ನ ವಾರ್ನರ್​ ಅವರು ಟೆಸ್ಟ್ ನಿವೃತ್ತಿ ಘೋಷಿಸಲಿದ್ದಾರಾ ಎಂಬುದು ಸದ್ಯದ ಕುತೂಹಲ.

Exit mobile version