ಬ್ರಿಸ್ಬೇನ್: ಸ್ಯಾಂಡ್ ಪೇಪರ್ ವಿವಾದದಲ್ಲಿ ಸಿಲುಕಿದ್ದ ಆಸ್ಟ್ರೇಲಿಯಾದ ಸ್ಟಾರ್ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್‌ಗೆ ಆಜೀವ ನಾಯಕತ್ವದ ನಿಷೇಧವನ್ನು ಆಸ್ಟ್ರೇಲಿಯಾ ಕ್ರಿಕೆಟ್ ಸಂಸ್ಥೆ ಹೇರಿ ನಾಲ್ಕು ವರ್ಷಗಳಾಗಿವೆ. ಹೀಗಾಗಿ ಹಲವು ವರ್ಷಗಳಿಂದ ಆಸ್ಟ್ರೇಲಿಯಾ ತಂಡದ ಕಾಯಂ ಸದಸ್ಯರಾಗಿರುವ ಹೊರತಾಗಿಯೂ ನಾಯಕತ್ವದ ಭಾಗ್ಯ ಸಿಗುತ್ತಿಲ್ಲ. ಈ ಬಗ್ಗೆ ವಾರ್ನರ್ ಅವರು ಪತ್ನಿ ಕ್ಯಾಂಡೈಸ್ ವಾರ್ನರ್‌ಗೆ ಅಸಮಾಧಾನವಿದೆ.
ಆಸ್ಟ್ರೇಲಿಯಾದ ರೇಡಿಯೊ ಒಂದಕ್ಕೆ ಸಂದರ್ಶನ ನೀಡಿದ ಅವರು “ವಾರ್ನರ್ ಯುಎಇನಲ್ಲಿ ನಡೆಯುವ ಲೀಗ್‌ನಲ್ಲಿ ನಾಯಕರಾಗುತ್ತಿದ್ದಾರೆ. ಭಾರತದಲ್ಲಿ ಐಪಿಎಲ್ ತಂಡದ ನಾಯಕರಾಗಿದ್ದಾರೆ. ಅವರ ನಾಯಕತ್ವದ ಸಾಮರ್ಥ್ಯ ಹಾಗೂ ಕ್ರಿಕೆಟ್ ತಂತ್ರಗಳನ್ನು ಅಲ್ಲೆಲ್ಲ ಜನರು ಹೊಗಳುತ್ತಿದ್ದಾರೆ. ಆದರೆ, ಎಂದಿಗೂ ಆಸ್ಟ್ರೇಲಿಯಾ ತಂಡದ ನಾಯಕರಾಗಲು ಸಾಧ್ಯವಾಗದೇ ಇರುವುದು ಅನ್ಯಾಯ,ʼʼ ಎಂದು ಅವರು ಹೇಳಿದ್ದಾರೆ.
೨೦೧೮ರಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆ ಆಸ್ಟ್ರೇಲಿಯಾ ತಂಡದ ಬೌಲರ್ ಬ್ಯಾಂಕ್ರಾಫ್ಟ್ ಸ್ಯಾಂಡ್ ಪೇಪರ್ ಬಳಸಿ ಚೆಂಡಿಗೆ ಹಾನಿ ಮಾಡುತ್ತಿರುವುದು ಪತ್ತೆಯಾಗಿತ್ತು. ಪ್ರಕರಣದ ವಿಚಾರಣೆ ನಡೆದ ಬಳಿಕ ಬ್ಯಾಂಕ್ರಾಫ್ಟ್‌ಗೆ ೯ ತಿಂಗಳು ಅಮಾನತು ಶಿಕ್ಷೆ ವಿಧಿಸಲಾಗಿತ್ತು. ಅಂತೆಯೇ ನಾಯಕ ಸ್ಟೀವ್ ಸ್ಮಿತ್ ಹಾಗೂ ಉಪನಾಯಕ ಡೇವಿಡ್ ವಾರ್ನರ್‌ಗೆ ಆಜೀವ ನಾಯಕತ್ವ ನಿಷೇಧ ಹೇರಲಾಗಿತ್ತು. ಹೀಗಾಗಿ ಸಾಕಷ್ಟು ವರ್ಷಗಳ ಕಾಲ ಆಸ್ಟ್ರೇಲಿಯಾ ತಂಡದಲ್ಲಿ ಆಡಿದ ಹೊರತಾಗಿಯೂ ವಾರ್ನರ್‌ಗೆ ನಾಯಕತ್ವ ಪಟ್ಟ ಒಲಿಯುತ್ತಿಲ್ಲ. ಈ ಬಗ್ಗೆ ಕ್ಯಾಂಡೈಸ್‌ಗೆ ಬೇಸರವಿದೆ.
“ಆಸ್ಟ್ರೇಲಿಯಾ ಕ್ರಿಕೆಟ್ ಸಂಸ್ಥೆ ಹೇರಿರುವ ನಿರ್ಧಾರವನ್ನು ನಾನು ಪ್ರಶ್ನಿಸುವುದಿಲ್ಲ. ಆದರೆ, ನನಗೆ ಗಂಡನ ಸಾಮರ್ಥ್ಯದ ಮೇಲೆ ನಂಬಿಕೆಯಿದೆ ಹಾಗೂ ಅವರನ್ನ ನಾನು ಬೆಂಬಲಿಸಬೇಕಾಗಿದೆ. ಎಲ್ಲದಕ್ಕಿಂತ ಮುಖ್ಯವಾಗಿ ನಾಯಕರಾಗಿಯೂ ಯಶಸ್ವಿಯಾಗಬಲ್ಲರು ಎಂಬ ವಿಶ್ವಾಸವಿದೆ,ʼʼ ಎಂದು ಅವರು ಹೇಳಿದರು.
ಇದನ್ನೂ ಓದಿ: david warner ವಾರ್ನರ್ ಕ್ಯಾಚ್ ಹಿಡಿದದ್ದು ಸಹ ಆಟಗಾರರಿಗೆ ಗೊತ್ತೇ ಆಗಿರಲಿಲ್ಲ