ನ್ಯೂಯಾರ್ಕ್: ನಮೀಬಿಯಾ(Namibia allrounder David Wiese) ತಂಡದ ಅನುಭವಿ ಆಟಗಾರ ಡೇವಿಡ್ ವೈಸ್(David Wiese) ಅವರು ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ(David Wiese Retirement) ಹೇಳಿದ್ದಾರೆ. ಶನಿವಾರ ರಾತ್ರಿ ನಡೆದ ಇಂಗ್ಲೆಂಡ್ ವಿರುದ್ಧದ ಟಿ20 ವಿಶ್ವಕಪ್ನ ಅಂತಿಮ ಲೀಗ್ ಪಂದ್ಯದಲ್ಲಿ ಆಡಿದ ಬಳಿಕ ಡೇವಿಡ್ ವೈಸ್ ತಮ್ಮ ನಿವೃತ್ತಿ ಘೋಷಿಸಿದರು.
ಡೇವಿಡ್ ವೈಸ್ ಅವರು ತಮ್ಮ ಕ್ರಿಕೆಟ್ ವೃತ್ತಿ ಜೀವನ ಆರಂಭಿಸಿದ್ದು ದಕ್ಷಿಣ ಆಫ್ರಿಕಾ ತಂಡದ ಪರ ಆಡುವ ಮೂಲಕ. 2021ರಲ್ಲಿ ನಮೀಬಿಯಾ ತಂಡ ಸೇರಿದ್ದರು. ಒಟ್ಟು 5 ವರ್ಷಗಳ ಕಾಲ ನಮೀಬಿಯಾ ತಂಡವನ್ನು ಪ್ರತಿನಿಧಿಸಿದ್ದಾರೆ. 2021ರ ಟಿ20 ವಿಶ್ವಕಪ್‌ನಲ್ಲಿ ಆಡುವ ಮೂಲಕ ನಮೀಬಿಯಾ ತಂಡದ ಪರ ಪಾದಾರ್ಪಣೆ ಮಾಡಿದ್ದರು.
ಆಲ್ರೌಂಡರ್ ಆಗಿರುವ ವೈಸ್ ಅವರು ನಮೀಬಿಯಾ ಪರ 34 ಟಿ20 ಪಂದ್ಯಗಳನ್ನು ಆಡಿ 532 ರನ್ ಗಳಿಸಿದ್ದಾರೆ. ಬೌಲಿಂಗ್ನಲ್ಲಿಯೂ ಉತ್ತಮ ಪ್ರದರ್ಶನ ತೋರಿರುವ ಅವರು 35 ವಿಕೆಟ್ ಕಿತ್ತಿದ್ದಾರೆ. ಒಂಬತ್ತು ಏಕದಿನ ಪಂದ್ಯಗಳನ್ನು ಆಡಿ 228 ರನ್ ಗಳಿಸಿದ್ದಾರೆ. ಆರು ವಿಕೆಟ್ ಪಡೆದಿದ್ದಾರೆ. ದಕ್ಷಿಣ ಆಫ್ರಿಕಾ ಮತ್ತು ನಮೀಬಿಯಾ ತಂಡದ ಪರ ಆಡಿ ಒಟ್ಟಾರೆಯಾಗಿ, ಅವರು 54 ಟಿ20 ಮತ್ತು 15 ಏಕದಿನ ಪಂದ್ಯಗಳನ್ನು ಆಡಿದ್ದಾರೆ.
ಇದನ್ನೂ ಓದಿ SCO vs AUS: ಆಸೀಸ್ಗೆ 5 ವಿಕೆಟ್ ಗೆಲುವು; ಸೂಪರ್-8ಗೆ ಲಗ್ಗೆಯಿಟ್ಟ ಇಂಗ್ಲೆಂಡ್
“ನನಗೆ ಈಗ 39 ವರ್ಷ, ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಇನ್ನು ಮುಂದುವರಿಯಲು ಇದು ಸೂಕ್ತ ಸಯಯವಲ್ಲ ಎಂದು ತಿಳಿದಿದೆ. ಹೀಗಾಗಿ ನಾನು ಕ್ರಿಕೆಟ್ನಿಂದ ನಿವೃತ್ತಿಯಾಗುತ್ತಿದ್ದೇನೆ. 2 ದೇಶಗಳನ್ನು ಪ್ರತಿನಿಧಿಸಲು ನನಗೆ ಅವಕಾಶ ಮಾಡಿಕೊಟ್ಟ ಎಲ್ಲ ಸಿಬ್ಬಂದಿ ಮತ್ತು ಸಹ ಆಟಗಾರರಿಗೆ ಧನ್ಯವಾದಗಳು” ಎಂದು ವೈಸ್ ಹೇಳಿದರು.
ಪಂದ್ಯ ಗೆದ್ದ ಇಂಗ್ಲೆಂಡ್
ಶನಿವಾರ ರಾತ್ರಿ ನಡೆದ ಮಳೆ ಪೀಡಿತ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ನಮೀಬಿಯಾ ವಿರುದ್ಧ ಡಕ್ವರ್ತ್ ಲೂಯಿಸ್ ನಿಯಮದನ್ವಯ 41 ರನ್ ಅಂತರದಿಂದ ಗೆದ್ದು ಬೀಗಿದೆ. ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ 10 ಓವರ್ ಗಳಲ್ಲಿ 122 ರನ್ ಗಳಿಸಿದರೆ, ನಮೀಬಿಯಾ ತಂಡವು 84 ರನ್ ಮಾತ್ರ ಗಳಿಸಿ ಸೋಲು ಕಂಡಿತು. ಇಂದು ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಸ್ಕಾಟ್ಲೆಂಡ್ ವಿರುದ್ಧ 5 ವಿಕೆಟ್ ಅಂತರದ ಗೆಲುವು ಸಾಧಿಸಿದ ಪರಿಣಾಮ ಇಂಗ್ಲೆಂಡ್ ಸೂಪರ್-8 ಹಂತಕ್ಕೇರಿತು.