Site icon Vistara News

Davis Cup: ಡೆವಿಸ್​​ ಕಪ್​ ವಿಶ್ವ ಬಣ 1; ಭಾರತಕ್ಕೆ ಬಲಿಷ್ಠ ಸ್ವೀಡನ್‌ ಎದುರಾಳಿ

Davis Cup

ಬೆಂಗಳೂರು: ಇತ್ತೀಚೆಗೆ ಪಾಕಿಸ್ತಾನದಲ್ಲಿ ನಡೆದ ಡೆವಿಸ್​​ ಕಪ್​ ವಿಶ್ವ ಬಣ ಒಂದರ ಪ್ಲೇ ಆಫ್​ನಲ್ಲಿ ಪಾಕ್​ ತಂಡವನ್ನು 4-0 ಅಂತರದಿಂದ ಸೋಲಿಸಿದ ಭಾರತ ಟೆನಿಸ್​ ತಂಡ ಇದೇ ವರ್ಷದ ಸೆಪ್ಟಂಬರ್‌ನಲ್ಲಿ ನಡೆಯಲಿರುವ ಡೇವಿಸ್‌ ಕಪ್‌ ವಿಶ್ವ ಬಣ ಒಂದರ ಹೋರಾಟದಲ್ಲಿ ಸ್ವೀಡನ್‌ ತಂಡದ ಸವಾಲು ಎದುರಿಸಲಿದೆ.

ಭಾರತ ಮತ್ತು ಸ್ವೀಡನ್‌ ಇದುವರೆಗೆ ಐದು ಬಾರಿ ಮುಖಾಮುಖಿಯಾಗಿದೆ. ಆದರೆ, ಒಮ್ಮೆಯೂ ಭಾರತ ಗೆಲುವು ದಾಖಲಿಸಿಲ್ಲ. ಭಾರತ ಈ ಹಿಂದೆ 2005ರಲ್ಲಿ ತವರಿನಲ್ಲಿ ಸ್ವೀಡನ್‌ ವಿರುದ್ಧ ಆಡಿತ್ತು. ದೆಹಲಿಯಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ಭಾರತ 1-3 ಅಂತರದಿಂದ ಸೋಲು ಕಂಡಿತ್ತು. ಆದರೆ ಈ ಬಾರಿ ಗೆಲ್ಲುವ ವಿಶ್ವಾಸದಲ್ಲಿದೆ.

ಭಾರತವು ಡಬಲ್ಸ್ ಟಾಪ್-100 ರಲ್ಲಿ ಐವರು ಆಟಗಾರರನ್ನು ಹೊಂದಿದೆ. ಆದರೆ ವಿಶ್ವದ ನಂಬರ್ 1 ರೋಹನ್ ಬೋಪಣ್ಣ ಡೇವಿಸ್ ಕಪ್ ಆಡುತ್ತಿಲ್ಲ. ಯೂಕಿ ಭಾಂಬ್ರಿ (60), ಎನ್ ಶ್ರೀರಾಮ್ ಬಾಲಾಜಿ (78), ವಿಜಯ್ ಸುಂದರ್ ಪ್ರಶಾಂತ್ (80) ಮತ್ತು ಅನಿರುದ್ಧ್ ಚಂದ್ರಶೇಖರ್ (90) ಸ್ಥಾನದಲ್ಲಿದ್ದಾರೆ. ಸ್ವೀಡನ್ ತಂಡದಲ್ಲಿ ಅತ್ಯಂತ ಪ್ರತಿಭಾವಂತ ಎಲಿಯಾಸ್ ಯೆಮರ್ ಕಾಣಿಸಿಕೊಂಡಿದ್ದಾರೆ. ಸುಮಿತ್ ನಗಾಲ್ ಟೂರ್ನಿಯಲ್ಲಿ ಆಡಿದರೆ ಭಾರತ ಕೂಡ ಬಲಿಷ್ಠ ತಂಡವಾಗಲಿದೆ.

ಇದನ್ನೂ ಓದಿ IND vs ENG: ಇಂಗ್ಲೆಂಡ್​ ವಿರುದ್ಧದ ಮೂರು ಟೆಸ್ಟ್​ಗೆ ಇಂದು ಭಾರತ ತಂಡ ಪ್ರಕಟ

60 ವರ್ಷಗಳ ಬಳಿಕ ಪಾಕಿಸ್ತಾನ ಪ್ರವಾಸ ಕೈಗೊಂಡಿದ್ದ ಭಾರತ ಡೇವಿಸ್ ಕಪ್ ತಂಡ 4-0 ಅಂತರದಿಂದ ಪಾಕ್​ ತಂಡವನ್ನು ಮಣಿಸಿ ವಿಶ್ವ ‍ಪ್ರಥಮ ಗುಂಪಿನಲ್ಲಿ ಸ್ಥಾನ ಪಡೆದಿತ್ತು. ಪಾಕ್ ತಂಡವು ಎರಡನೇ ಗುಂಪಿನಲ್ಲಿ ಆಡಲಿದೆ.

ನೀರಜ್‌ ಚೋಪ್ರಾಗೆ ಸ್ವಿಸ್‌ ಪ್ರವಾಸೋದ್ಯಮ ಗೌರವ


ಭಾರತದ ಸ್ಟಾರ್​ ಜಾವೆಲಿನ್‌ ಎಸೆತಗಾರ, ಒಲಿಂಪಿಕ್‌ ಮತ್ತು ವಿಶ್ವ ಚಾಂಪಿಯನ್‌ ನೀರಜ್‌ ಚೋಪ್ರಾ(Neeraj Chopra) ಅವರನ್ನು ಸ್ವಿಟ್ಜರ್‌ಲ್ಯಾಂಡ್‌ ಪ್ರವಾಸೋದ್ಯಮವು ವಿಶೇಷ ಗೌರವ ನೀಡಿದೆ. ಯುರೋಪ್‌ನ ಉನ್ನತ ಸ್ಥಳವಾದ ಜಂಗ್‌ಫ್ರಾಜೋಸ್‌ನಲ್ಲಿರುವ(Jungfraujoch,) ಪ್ರಖ್ಯಾತ ಐಸ್‌ ಪ್ಯಾಲೇಸ್‌ನಲ್ಲಿ(Ice Palace) ನೀರಜ್​ ಅವರ ಫ‌ಲಕವೊಂದನ್ನು ಸ್ಥಾಪಿಸಿ ಗೌರವಿಸಿದೆ.

ಸ್ವಿಟ್ಜರ್ಲೆಂಡ್‌ ಪ್ರವಾಸೋದ್ಯಮ ರಾಯಭಾರಿಯಾಗಿರುವ ನೀರಜ್‌ ಚೋಪ್ರಾ ಅವರಿಂದಲೇ ಅವರ ಸ್ಮರಣಾರ್ಥ ಸ್ಥಾಪಿಸಿದ ಫ‌ಲಕವನ್ನು ಅನಾವರಣಗೊಳಿಸಲಾಗಿದೆ. ಇದೇ ವೇಳೆ ಪ್ರವಾಸಿಗರ ಆಕರ್ಷಣೆಗಾಗಿ ನೀರಜ್ ತಮ್ಮ ಜಾವೆಲಿನ್‌ ಒಂದನ್ನು ದೇಣಿಗೆಯಾಗಿ ನೀಡಿದರು. ಈ ಜಾವೆಲಿನ್‌ ಅನ್ನು ಫ‌ಲಕದ ಬದಿಯಲ್ಲಿ ಇರಿಸಲಾಗಿದೆ ಎಂದು ಸ್ವಿಟ್ಜರ್‌ಲ್ಯಾಂಡ್‌ ಪ್ರವಾಸೋದ್ಯಮ ಪ್ರಕಟನೆಯಲ್ಲಿ ತಿಳಿಸಿದೆ. ರೋಜರ್‌ ಫೆಡರರ್‌, ಗಾಲ್ಫ್ ಆಟಗಾರ ರೋರಿ ಮೆಕ್‌ರಾಯ್‌ ಅವರ ಫ‌ಲಕಗಳು ಕೂಡ ಐಸ್‌ ಪ್ಯಾಲೇಸ್‌ನಲ್ಲಿದೆ. ಇದೀಗ ಈ ಸಾಲಿಗೆ ನೀರಜ್‌ ಚೋಪ್ರಾ ಸೇರಿಕೊಂಡಿದ್ದಾರೆ.

Exit mobile version