Site icon Vistara News

Dean Elgar: ವಿದಾಯ ಪಂದ್ಯದಲ್ಲಿ ತಂಡದ ನಾಯಕತ್ವ ವಹಿಸಲಿದ್ದಾರೆ ಡೀನ್ ಎಲ್ಗರ್

Dean Elgar

ಕೇಪ್​ಟೌನ್​: ವಿದಾಯ ಸರಣಿ ಆಡುತ್ತಿರುವ ಡೀನ್ ಎಲ್ಗರ್​(Dean Elgar) ಅವರಿಗೆ ಭಾರತ ವಿರುದ್ಧದ ದ್ವಿತೀಯ ಟೆಸ್ಟ್​ ಪಂದ್ಯದಲ್ಲಿ ತಂಡದ ನಾಯಕತ್ವ ನೀಡಲಾಗಿದೆ. ಎಲ್ಗರ್​ ಅವರ ಕ್ರಿಕೆಟ್​ ವಿದಾಯ ಸ್ಮರಣೀಯವಾಗಿರಲಿ ಎನ್ನುವ ಉದ್ದೇಶದಿಂದ ದಕ್ಷಿಣ ಆಫ್ರಿಕಾ ಕ್ರಿಕೆಟ್​ ಮಂಡಳಿ ಈ ನಿರ್ಧಾರ ಕೈಗೊಂಡಿದೆ.

ತಂಡದ ಖಾಯಂ ನಾಯಕ ಟೆಂಬ ಬವುಮಾ ಮೊದಲ ಟೆಸ್ಟ್​ ಪಂದ್ಯದಲ್ಲಿ ಫೀಲ್ಡಿಂಗ್​ ವೇಳೆ ಗಾಯಗೊಂಡು ಸಂಪೂರ್ಣವಾಗಿ ಪಂದ್ಯದಿಂದ ಹೊರಗುಳಿದಿದ್ದರು. ಹೀಗಾಗಿ ಅವರ ಅನುಪಸ್ಥಿತಿಯಲ್ಲಿ ಐಡೆನ್​ ಮಾರ್ಕ್ರಮ್​ ತಂಡವನ್ನು ಮುನ್ನಡೆಸಿದ್ದರು. ದ್ವಿತೀಯ ಪಂದ್ಯದಿಂದ ಬವುಮಾ ಹೊರಬಿದ್ದಿದ್ದಾರೆ. ಒಂದೊಮ್ಮೆ ಬವುಮಾ ಲಭ್ಯರಿದ್ದರೂ ಕೂಡ ಅಂತಿಮ ಪಂದ್ಯಕ್ಕೆ ಡೀನ್ ಎಲ್ಗರ್ ಅವರನ್ನೇ ನಾಯಕರನ್ನಾಗಿ ಮಾಡಲು ದಕ್ಷಿಣ ಆಫ್ರಿಕಾ ಕ್ರಿಕೆಟ್​ ಮಂಡಳಿ ಈ ಮೊದಲೇ ನಿರ್ಧರಿಸಿತ್ತು. ವಿದಾಯದ ಪಂದ್ಯದಲ್ಲಿ ವಿಶೇಷ ಗೌರವ ಸೂಚಿಸಲು ಸಿದ್ಧತೆ ಮಾಡಿತ್ತು.

ಇದನ್ನೂ ಓದಿ IND vs SA: ದ್ವಿತೀಯ ಪಂದ್ಯಕ್ಕೆ ಜಡೇಜಾ ಲಭ್ಯ; ಆಡುವ ಬಳಗದಲ್ಲಿ ಬದಲಾವಣೆ

36ರ ಹರೆಯದ ಎಲ್ಗರ್ ಭಾರತ ವಿರುದ್ಧದ ಸರಣಿ ಆರಂಭಕ್ಕೂ ಮುನ್ನವೇ ತಮ್ಮ ಕ್ರಿಕೆಟ್​ ನಿವೃತ್ತಿಯನ್ನು ಘೋಷಿಸಿದ್ದರು. ಈ ಹಿಂದೆ ಅವರು ನಾಯಕನಾಗಿ ದಕ್ಷಿಣ ಆಫ್ರಿಕಾ ತಂಡವನ್ನು ಮುನ್ನಡೆಸಿ ಹಲವು ಸರಣಿಗಳನ್ನು ಗೆದ್ದು ಕೊಟ್ಟಿದ್ದರು. ಮೊದಲ ಟೆಸ್ಟ್​ನಲ್ಲಿ ಅಮೋಘ ಬ್ಯಾಟಿಂಗ್​ ಪ್ರದರ್ಶನ ತೋರಿದ ಎಲ್ಗರ್​ ಬರೋಬ್ಬರಿ 185 ರನ್​ ಗಳಿಸಿ ಭಾರತದ ಸೋಲಿಗೆ ಕಾರಣರಾಗಿದ್ದರು. ಅವರ ಈ ಬ್ಯಾಟಿಂಗ್​ ಸಾಹಸಕ್ಕೆ ಪಂದ್ಯಶ್ರೇಷ್ಠ ಪ್ರಶಸ್ತಿ ಕೂಡ ಒಲಿದಿತ್ತು.

ಎಲ್ಗರ್ ಅವರು 2012ರ ಪರ್ತ್ ಟೆಸ್ಟ್‌ನಲ್ಲಿ ಆಡುವ ಮೂಲಕ ದಕ್ಷಿಣ ಆಫ್ರಿಕಾ ಟೆಸ್ಟ್​ ತಂಡಕ್ಕೆ ಪದಾರ್ಪಣೆ ಮಾಡಿದ್ದರು. ಮಧ್ಯಮ ಕ್ರಮಾಂಕದಲ್ಲಿ ಆಡುವ ಮೂಲಕ ಅವರು ತಮ್ಮ ಇನಿಂಗ್ಸ್​ ಆರಂಭಿಸಿದ್ದರು. ಆ ಬಳಿಕ ಅವರು ಆರಂಭಿಕ ಆಟಗಾರನಾಗಿ ಭಡ್ತಿ ಪಡೆದರು. ನಾಯಕನಾಗಿ 17 ಬಾರಿ ತಂಡವನ್ನು ಮುನ್ನಡೆಸಿದ್ದಾರೆ. ಭಾರತ ವಿರುದ್ಧ ಅಂತಿಮ ಟೆಸ್ಟ್​ ಆಟುವ ಮೂಲಕ ಅವರ 12 ವರ್ಷಗಳ ಕ್ರಿಕೆಟ್​ ವೃತ್ತಿಜೀವನಕ್ಕೆ ತೆರೆ ಬೀಳಲಿದೆ.

ಕ್ರಿಕೆಟ್​ ಸಾಧನೆ

ಡೀನ್​ ಎಲ್ಗರ್​ ಅವರು ದಕ್ಷಿಣ ಆಫ್ರಿಕಾ ಪರ 84 ಟೆಸ್ಟ್​ ಪಂದ್ಯಗಳನ್ನು ಆಡಿ 5146 ರನ್​ ಗಳಿಸಿದ್ದಾರೆ. 13 ಶತಕ ಮತ್ತು 23 ಅರ್ಧಶತಕ ಒಳಗೊಂಡಿದೆ. 654 ಬೌಂಡರಿ ಹಾಗೂ 26 ಸಿಕ್ಸರ್​ ಸಿಡಿಸಿದ್ದಾರೆ. ಏಕದಿನ ಕ್ರಿಕೆಟ್​ನಲ್ಲಿ ಕೇವಲ 8 ಪಂದ್ಯಗಳಿಂದ 104 ರನ್​ ಕಲೆ ಹಾಕಿದ್ದಾರೆ. ಬೌಲಿಂಗ್​ನಲ್ಲಿ ಸಾಧನೆ ತೋರಿರುವ ಅವರು 15 ಟೆಸ್ಟ್​ ಮತ್ತು 2 ಏಕದಿನ ವಿಕೆಟ್​ ಪಡೆದಿದ್ದಾರೆ.

Exit mobile version