Site icon Vistara News

Dean Elgar: ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ ಡೀನ್​ ಎಲ್ಗರ್

Dean Elgar

ಜೊಹಾನ್ಸ್​ಬರ್ಗ್​: ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಡೀನ್​ ಎಲ್ಗರ್​(Dean Elgar) ಅವರು ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದಾರೆ. ತವರಿನ ಭಾರತ ವಿರುದ್ಧದ ಟೆಸ್ಟ್​ ಸರಣಿಯ ಬಳಿಕ ಅವರು ಎಲ್ಲ ಮಾದರಿಯ ಕ್ರಿಕೆಟ್​ನಿಂದ ನಿವೃತ್ತಿ ಹೊಂದಲಿದ್ದಾರೆ. ನಿವೃತ್ತಿ ನಿರ್ಧಾರವನ್ನು ಎಲ್ಗರ್ ಶುಕ್ರವಾರ ಪ್ರಕಟಿಸಿದರು.

36ರ ಹರೆಯದ ಎಲ್ಗರ್ ನಿರ್ಧಾರವನ್ನು ಕ್ರಿಕೆಟ್ ದಕ್ಷಿಣ ಆಫ್ರಿಕಾ ಕ್ರಿಕೆಟ್​ ಮಂಡಳಿ ಒಪ್ಪಿಕೊಂಡಿದೆ. ಎಲ್ಗರ್ 80ಕ್ಕೂ ಹೆಚ್ಚು ಟೆಸ್ಟ್‌ಗಳನ್ನು ಆಡಿ 5,000ಕ್ಕೂ ಹೆಚ್ಚು ರನ್​ ಗಳಿಸಿದ್ದಾರೆ. ಜತೆಗೆ ನಾಯಕನಾಗಿಯೂ 17 ಬಾರಿ ತಂಡವನ್ನು ಮುನ್ನಡೆಸಿದ್ದಾರೆ. 12 ವರ್ಷಗಳ ಕ್ರಿಕೆಟ್​ ವೃತ್ತಿಜೀವನಕ್ಕೆ ಭಾರತ ವಿರುದ್ಧದ ಟೆಸ್ಟ್​ ಬಳಿಕ ತೆರೆ ಎಳೆಯಲಿದ್ದಾರೆ.

“ಎಲ್ಲ ಒಳ್ಳೆಯ ವಿಷಯಗಳು ಒಂದು ದಿನ ಕೊನೆಗೊಳ್ಳುತ್ತವೆ. ಭಾರತ ವಿರುದ್ಧದ ತವರು ಸರಣಿಯು ನನ್ನ ಕೊನೆಯ ಕ್ರಿಕೆಟ್​ ಸರಣಿಯಾಗಲಿದೆ. ಏಕೆಂದರೆ ನಾನು ಇಷ್ಟಪಟ್ಟ ಆಟದಿಂದ ನಿವೃತ್ತಿ ಹೊಂದುವ ನಿರ್ಧಾರವನ್ನು ಮಾಡಿದ್ದೇನೆ. ನ್ಯೂಜಿಲ್ಯಾಂಡ್​ ವಿರುದ್ಧ ಕೇಟ್​ಟೌನ್​ನಲ್ಲಿ ನಾನು ಟೆಸ್ಟ್​ ಕ್ರಿಕೆಟ್​ನ ಮೊದಲ ರನ್ ಗಳಿಸಿದ್ದೆ. ಇದೀಗ ಇದೇ ಮೈದಾನಲ್ಲಿ ನಾನು ನಿವೃತ್ತಿ ಹೊಂದುತಿರುವುದು ನಿಜಕ್ಕೂ ನನಗೆ ಹೆಮ್ಮೆ ಅನಿಸುತ್ತಿದೆ. ಕೊನೆಯ ಪಂದ್ಯವೂ ಆಶಾದಾಯಕವಾಗಿದೆ” ಎಂದು ಎಲ್ಗರ್ ತಮ್ಮ ನಿವೃತ್ತಿಯ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ Virat Kohli: ದಕ್ಷಿಣ ಆಫ್ರಿಕಾದಿಂದ ದಿಢೀರ್​ ಭಾರತಕ್ಕೆ ಮರಳಿದ ವಿರಾಟ್​ ಕೊಹ್ಲಿ

“ಕ್ರಿಕೆಟ್ ಆಡುವ ಮೂಲಕ ನನ್ನ ದೇಶವನ್ನು ಪ್ರತಿನಿಧಿಸುವ ಅವಕಾಶ ಸಿಕ್ಕಿರುವುದು ನನ್ನ ಸೌಭಾಗ್ಯ. 12 ವರ್ಷಗಳ ಕಾಲ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಾನು ಹಲವು ಸವಾಲು ಮೆಟ್ಟಿನಿಂಇತಿದ್ದೇನೆ. ಇದೊಂದು ಸುಂದರ ಪಯಣವಾಗಿತ್ತು” ಎಂದು ಎಲ್ಗರ್ ಹೇಳಿದ್ದಾರೆ.

ಎಲ್ಗರ್ ಅವರು 2012ರ ಪರ್ತ್ ಟೆಸ್ಟ್‌ನಲ್ಲಿ ಆಡುವ ಮೂಲಕ ದಕ್ಷಿಣ ಆಫ್ರಿಕಾ ಟೆಸ್ಟ್​ ತಂಡಕ್ಕೆ ಪದಾರ್ಪಣೆ ಮಾಡಿದ್ದರು. ಮಧ್ಯಮ ಕ್ರಮಾಂಕದಲ್ಲಿ ಆಡುವ ಮೂಲಕ ಅವರು ತಮ್ಮ ಇನಿಂಗ್ಸ್​ ಆರಂಭಿಸಿದ್ದರು. ಆ ಬಳಿಕ ಅವರು ಆರಂಭಿಕ ಆಟಗಾರನಾಗಿ ಭಡ್ತಿ ಪಡೆದರು.

ಕ್ರಿಕೆಟ್​ ಸಾಧನೆ

ಡೀನ್​ ಎಲ್ಗರ್​ ಅವರು ದಕ್ಷಿಣ ಆಫ್ರಿಕಾ ಪರ 84 ಟೆಸ್ಟ್​ ಪಂದ್ಯಗಳನ್ನು ಆಡಿ 5146 ರನ್​ ಗಳಿಸಿದ್ದಾರೆ. 13 ಶತಕ ಮತ್ತು 23 ಅರ್ಧಶತಕ ಒಳಗೊಂಡಿದೆ. 654 ಬೌಂಡರಿ ಹಾಗೂ 26 ಸಿಕ್ಸರ್​ ಸಿಡಿಸಿದ್ದಾರೆ. ಏಕದಿನ ಕ್ರಿಕೆಟ್​ನಲ್ಲಿ ಕೇವಲ 8 ಪಂದ್ಯಗಳಿಂದ 104 ರನ್​ ಕಲೆ ಹಾಕಿದ್ದಾರೆ. ಬೌಲಿಂಗ್​ನಲ್ಲಿ ಸಾಧನೆ ತೋರಿರುವ ಅವರು 15 ಟೆಸ್ಟ್​ ಮತ್ತು 2 ಏಕದಿನ ವಿಕೆಟ್​ ಪಡೆದಿದ್ದಾರೆ.

Exit mobile version