ಅಹಮದಾಬಾದ್: ಏಕದಿನ ವಿಶ್ವಕಪ್(icc world cup 2023) ಮಹಾ ಸಮರ ಮುಕ್ತಾಯಕಂಡಿದೆ. ಅಹಮದಾಬಾದ್ನ ನರೇಂದ್ರ ಮೋದಿ ಕ್ರಿಕೆಟ್ ಸ್ಟಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ 6 ವಿಕೆಟ್ಗಳ ಸೋಲು ಕಂಡು ಕಪ್ ಗೆಲ್ಲುವಲ್ಲಿ ಮತ್ತೆ ಎಡವಿತು. ಸೋಲು ಕಂಡರೂ ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯ ಆಟಗಾರರಿಗೆ ಧೈರ್ಯ ತುಂಬಿ ಸಮಾಧಾನ ಮಾಡಿದ್ದಾರೆ.
“ಆತ್ಮೀಯ ಟೀಮ್ ಇಂಡಿಯಾ, ವಿಶ್ವಕಪ್ ಮೂಲಕ ನಿಮ್ಮ ಪ್ರತಿಭೆ ಮತ್ತು ಸಂಕಲ್ಪ ದೇಶದ ಗಮನ ಸೆಳೆಯಿತು. ನೀವು ಉತ್ತಮ ಉತ್ಸಾಹದಿಂದ ಆಡಿದ್ದೀರಿ ಮತ್ತು ರಾಷ್ಟ್ರಕ್ಕೆ ಅಪಾರ ಹೆಮ್ಮೆ ತಂದಿದ್ದೀರಿ. ಕಪ್ ಗೆಲ್ಲದಿದ್ದರೂ ನೀವು ಶತಕೋಟಿ ಭಾರತೀಯರ ಹೃದಯ ಗೆದ್ದಿದ್ದೀರಿ. ನಾವು ಎಂದೂ ನಿಮ್ಮೊಂದಿಗೆ ಇರುತ್ತೇವೆ” ಎಂದು ಮೋದಿ ಟ್ವೀಟ್ ಮೂಲಕ ಸಂತೈಸಿದ್ದಾರೆ.
Dear Team India,
— Narendra Modi (@narendramodi) November 19, 2023
Your talent and determination through the World Cup was noteworthy. You've played with great spirit and brought immense pride to the nation.
We stand with you today and always.
ಪ್ರಧಾನಿ ಮೋದಿ ಕೂಡ ಈ ಈ ಪಂದ್ಯಕ್ಕೆ ಸಾಕ್ಷಿಯಾಗಿದ್ದರು. ಇವರ ಜತೆ ಅಮೀತ್ ಶಾ, ಆಸ್ಟ್ರೇಲಿಯಾದ ಉಪ ಪ್ರಧಾನಿ ರಿಚರ್ಡ್ ಮಾರ್ಲ್ಸ್(Richard Marles) ಕೂಡ ಉಪಸ್ಥಿತರಿದ್ದರು.
ಆಸೀಸ್ ಪ್ರದರ್ಶನಕ್ಕೆ ಶ್ಲಾಘನೆ
6ನೇ ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾ ತಂಡಕ್ಕೆ ಪ್ರಧಾನಿ ಮೋದಿ ಅಭಿನಂದನೆ ಸಲ್ಲಿದ್ದಾರೆ. ‘ಪಂದ್ಯಾವಳಿಯಲ್ಲಿ ಅದ್ಭುತ ಪ್ರದರ್ಶನ ಶ್ಲಾಘನೀಯ. ನಿಮ್ಮ ಈ ಪ್ರದರ್ಶನ ವಿಜಯೋತ್ಸವದಲ್ಲಿ ಕೊನೆಗೊಂಡಿತು. ಟ್ರಾವಿಸ್ ಹೆಡ್ ಅವರ ಇಂದಿನ ಗಮನಾರ್ಹ ಆಟಕ್ಕೆ ಅಭಿನಂದನೆಗಳು” ಎಂದು ಮೋದಿ ಶುಭ ಹಾರೈಸಿದರು.
ಫೈನಲ್ನಲ್ಲಿ ಆರು ವಿಕೆಟ್ ಸೋಲು
ತವರು ನೆಲದಲ್ಲಿ ನಡೆದ ವಿಶ್ವ ಕಪ್ ಆವೃತ್ತಿಯಲ್ಲಿ ಟ್ರೋಫಿ ಗೆದ್ದೇ ಗೆಲ್ಲುತ್ತೇವೆ ಎಂಬ ಟೀಮ್ ಇಂಡಿಯಾದ ಹುಮ್ಮಸ್ಸು ಬತ್ತಿ ಹೋಯಿತು. ನರೇಂದ್ರ ಮೋದಿ ಸ್ಟೇಡಿಯಮ್ನಲ್ಲಿ ನಡೆದ ಏಕ ದಿನ ವಿಶ್ವ ಕಪ್ನ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ತಲೆ ಬಾಗಿದ ಟೀಮ್ ಇಂಡಿಯಾದ ಪ್ರಯತ್ನಗಳು ಭಗ್ನವಾಗಿದೆ. 2003ರ ವಿಶ್ವ ಕಪ್ನ ಫೈನಲ್ ಫಲಿತಾಂಶವು ಮತ್ತೊಂದು ಬಾರಿ ಪುನರಾವರ್ತನೆಯಾಗಿದೆ. ಅಂದು ಭಾರತ ತಂಡ ಆಸ್ಟ್ರೇಲಿಯಾ ತಂಡದ ವಿರುದ್ಧವೇ 125 ರನ್ಗಳಿಂದ ಸೋಲು ಕಂಡಿತ್ತು.
ಆಸ್ಟ್ರೇಲಿಯಾ ತಂಡದ ಪಾಲಿಗೆ 6ನೇ ವಿಶ್ವ ಕಪ್. ಆ ತಂಡ ಈ ಹಿಂದೆ 1987, 1999, 2003, 2007, 2015ರಲ್ಲಿ ಏಕ ದಿನ ವಿಶ್ವ ಕಪ್ ಗೆದ್ದಿತ್ತು. ಇದೀಗ ಮತ್ತೊಂದು ಟ್ರೋಫಿ ಆ ತಂಡಕ್ಕೆ ಸೇರ್ಪಡೆಯಾಗಿದ್ದು ಅತ್ಯಂತ ಯಶಸ್ವಿ ತಂಡ ಎನಿಸಿಕೊಂಡಿತು.
ಇದನ್ನೂ ಓದಿ IND vs AUS Final: ಭಾರತಕ್ಕೆ ಮತ್ತೆ ಕಂಟಕವಾದ ಅಂಪೈರ್; ನಿರೀಕ್ಷೆಯಂತೆ ಈ ಬಾರಿಯೂ ಸೋಲು
ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಮ್ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತ ಭಾರತ ತಂಡ ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನ ಪಡೆಯಿತು. ಆದರೆ, ಬ್ಯಾಟಿಂಗ್ ವೈಫಲ್ಯ ಎದುರಿಸಿದ ಭಾರತ ತಂಡ ನಿಗದಿತ 50 ಓವರ್ಗಳಲ್ಲಿ 240 ರನ್ಗಳಿಗೆ ಆಲ್ಔಟ್ ಆಯಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡ 43 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 241 ರನ್ ಬಾರಿಸಿ ನಿರಾಯಾಸ ವಿಜಯ ಕಂಡಿತು. ಆಸ್ಟ್ರೇಲಿಯಾ ತಂಡದ ಪರ ಆರಂಭಿಕ ಬ್ಯಾಟರ್ ಟ್ರಾವಿಸ್ ಹೆಡ್ 137 ರನ್ ಬಾರಿಸಿ ಗೆಲುವಿನ ರೂವಾರಿ ಎನಿಸಿಕೊಂಡರು.