ಮುಂಬಯಿ: ಇದೇ ಮೊದಲ ಬಾರಿಗೆ ನಡೆಯುತ್ತಿರುವ ಮಹಿಳಾ ಐಪಿಎಲ್(WIPL 2023) ಟೂರ್ನಿಯ ತಂಡಗಳ ಹರಾಜು ಪ್ರಕ್ರಿಯೆ ಮುಕ್ತಾಯ ಕಂಡಿದೆ. ಅದಾನಿ ಸಮೂಹ ಅಹಮದಾಬಾದ್ ಫ್ರಾಂಚೈಸಿಯನ್ನು 1,289 ಕೋಟಿ. ರೂ. ಮೊತ್ತಕ್ಕೆ ಖರೀದಿ ಮಾಡಿದೆ. ಒಟ್ಟಾರೆ 5 ತಂಡಗಳ ಹರಾಜಿನಿಂದ ಬಿಸಿಸಿಐ ಬರೋಬ್ಬರಿ 4669.99 ಕೋಟಿ ರೂ. ಆದಾಯ ಗಳಿಸಿದೆ.
ಮುಂಬಯಿಯಲ್ಲಿ ಬುಧವಾರ(ಜ.25) ನಡೆದ ಈ ಹರಾಜು ಪ್ರಕ್ರಿಯೆಯಲ್ಲಿ ಈ ಐದು ತಂಡಗಳಲ್ಲಿ 3 ತಂಡಗಳನ್ನು ಪುರಷರ ಐಪಿಎಲ್ ಫ್ರಾಂಚೈಸಿಗಳೇ ಖರೀದಿಸಿರುವುದು ವಿಶೇಷ. ಇದಕ್ಕೂ ಮುನ್ನ ಮಹಿಳಾ ಐಪಿಎಲ್ನ ಪ್ರಸಾರದ ಹಕ್ಕನ್ನು ಬಿಸಿಸಿಐ ಬರೋಬ್ಬರಿ 951 ಕೋಟಿಗೆ ಮಾರಾಟ ಮಾಡಿತ್ತು. ಅಂದರೆ ಪ್ರತಿ ಪಂದ್ಯಕ್ಕೆ 7.09 ಕೋಟಿ ರೂ. ಆದಾಯ ಗಳಿಸಲಿದೆ. ಅದರಂತೆ 2023 ರಿಂದ 2027ರವರೆಗಿನ ಸೀಸನ್‌ಗಳು ಸ್ಪೋರ್ಟ್ಸ್-18 ಹಾಗೂ ಜಿಯೋ ಆ್ಯಪ್ಗಳಲ್ಲಿ ಪ್ರಸಾರವಾಗಲಿದೆ.
ಮಹಿಳಾ ಐಪಿಎಲ್ನ ಫ್ರಾಂಚೈಸಿಗಳು …
ಅದಾನಿ ಸ್ಪೋರ್ಟ್ಸ್ಲೈನ್- ಅಹಮದಾಬಾದ್ (1,289 ಕೋಟಿ ರೂ.)
ಇಂಡಿಯಾವಿನ್ ಸ್ಪೋರ್ಟ್ಸ್- ಮುಂಬೈ (912. 99 ಕೋಟಿ ರೂ.)
ರಾಯಲ್ ಚಾಲೆಂಜರ್ಸ್ ಬೆಂಗಳೂರು- ಬೆಂಗಳೂರು ( 901 ಕೋಟಿ ರೂ.)
ಜೆಎಸ್ಡಬ್ಲ್ಯು ಜಿಆರ್ಎಮ್ ಗ್ರೂಪ್- ಡೆಲ್ಲಿ (810 ಕೋಟಿ ರೂ.)
ಕಾಪ್ರಿ ಗ್ಲೋಬಲ್ ಹೋಲ್ಡಿಂಗ್ಸ್- ಲಕ್ನೋ (757 ಕೋಟಿ ರೂ.)
ಹರಾಜು ಮುಗಿದ ಬಳಿಕ ಟ್ವೀಟ್ ಮಾಡಿರುವ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ “ಇಂದು ಕ್ರಿಕೆಟ್ ಇತಿಹಾಸದಲ್ಲೇ ಐತಿಹಾಸಿಕ ದಿನವಾಗಿದೆ. ಚೊಚ್ಚಲ ಮಹಿಳೆಯರ ಕ್ರಿಕೆಟ್ ಪ್ರೀಮಿಯರ್ ಲೀಗ್ ಪಂದ್ಯಾವಳಿಯ ತಂಡಗಳ ಹರಾಜು ಮೊತ್ತವು 2008ರ ಪುರುಷರ ಐಪಿಎಲ್ ತಂಡಗಳ ಹರಾಜು ಮೊತ್ತವನ್ನು ಮೀರಿ ದಾಖಲೆ ಬರೆದಿದೆ. ಐದು ತಂಡಗಳು 4669.99 ಕೋಟಿಗೆ ಮಾರಾಟವಾಗಿದೆ’ ಎಂದು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ | WOMENS IPL | ಮಹಿಳೆಯರ ಐಪಿಎಲ್ ತಂಡ ಖರೀದಿಸಲು ಆಸಕ್ತಿ ತೋರಿದ 30 ಕಂಪನಿಗಳು