ಮುಂಬಯಿ: ಇತ್ತೀಚೆಗೆ ಮುಕ್ತಾಯ ಕಂಡಿದ್ದ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಆತಿಥೇಯ ಭಾರತ ತಂಡ (ICC Cricket World Cup 2023) ಆಸ್ಟ್ರೇಲಿಯಾ(India vs Australia, Final) ವಿರುದ್ಧ 6 ವಿಕೆಟ್ಗಳಿಂದ ಸೋತು ವಿಶ್ವಕಪ್ ಟ್ರೋಫಿ ಗೆಲ್ಲುವಲ್ಲಿ ವಿಫಲವಾಗಿತ್ತು. ಈ ಸೋಲು ಈಗಾಗಲೂ ಕೂಡ ಭಾರತೀಯ ಆಟಗಾರರಲ್ಲಿ ಕಾಡುತ್ತಲೇ ಇದೆ. ಕಪ್ತಾನ ರೋಹಿತ್ ಶರ್ಮಾ ವಿಶ್ವಕಪ್ ಸೋಲಿನ ಬಗ್ಗೆ ಮೊದಲ ಬಾರಿ ಪ್ರತಿಕ್ರಿಯೆ ನೀಡಿದ್ದಾರೆ.
ಐಪಿಎಲ್ ಫ್ರಾಂಚೈಸಿ ಮುಂಬಯಿ ಇಂಡಿಯನ್ಸ್ ಜತೆಗಿನ ಸಂದರ್ಶನದಲ್ಲಿ ರೋಹಿತ್ ಶರ್ಮ ಅವರು ವಿಶ್ವಕಪ್ ಸೋಲಿನ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಫೈನಲ್ ಸೋಲಿನ ಬಳಿಕ ರೋಹಿತ್ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡಿರಲಿಲ್ಲ. ಬೇಸರದಿಂದಲೇ ಡ್ರೆಸ್ಸಿಂಗ್ ರೂಮ್ನಲ್ಲಿ ಸಹ ಆಟಗಾರರೊಂದಿಗೆ ಕುಳಿತಿದ್ದರು. ಹೀಗಾಗಿ ತಂಡದ ಕೋಚ್ ದ್ರಾವಿಡ್ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದರು. ಇದೀಗ ಸುಮಾರು ಒಂದು ತಿಂಗಳ ಬಳಿಕ ರೋಹಿತ್ ಈ ಸೋಲಿನ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಸೋಲನ್ನು ಜೀರ್ಣಿಸಿಕೊಳ್ಳುವುದು ಸುಲಭವಲ್ಲ
“ಫೈನಲ್ ಪಂದ್ಯದ ತನಕ ಸೋಲನ್ನೇ ಕಾಣದ ನಾವು, ಫೈನಲ್ನಲ್ಲಿ ಸೋಲು ಕಂಡೆವು. ಈ ಸೋಲಿನ ಆಘಾತದಿಂದ ಹೇಗೆ ಹೊರಬರಬೇಕೆನ್ನುವುದೇ ನನಗೆ ಗೊತ್ತಾಗುತ್ತಿಲ್ಲ. ಏನು ಮಾಡಬೇಕೆನ್ನುವ ಆಯ್ಕೆಯೂ ನನ್ನ ಮುಂದಿರಲಿಲ್ಲ. ಆದರೆ ನನ್ನ ಕುಟುಂಬ ಮತ್ತು ಸ್ನೇಹಿತರು ನನ್ನ ಬೆಂಬಲಕ್ಕೆ ನಿಂತು ಈ ಸೋಲಿನ ಆಘಾತದಿಂದ ಹೊರಬರುವಂತೆ ಮಾಡುತ್ತಿದ್ದಾರೆ. ಆ ಸೋಲನ್ನು ಜೀರ್ಣಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ಆದರೆ ಜೀವನ ಮುಂದುವರಿಯುತ್ತದೆ. ನಾವು ಕೂಡ ಇದರೊಂದಿಗೆ ಮುಂದುವರಿಯ ಬೇಕು. ಪ್ರಾಮಾಣಿಕವಾಗಿ ಹೇಳಬೇಕೆಂದರೆ ಇದು ಕಠಿಣವಾಗಿತ್ತು. ಇದರಿಂದ ಮುಂದುವರಿಯುವುದು ಅಷ್ಟು ಸುಲಭವಲ್ಲ” ಎಂದು ರೋಹಿತ್ ಹೇಳಿದರು.
“ವಿಶ್ವಕಪ್‌ಗಾಗಿ ನಾವು ವರ್ಷಾನುಗಟ್ಟಲೆ ಶ್ರಮಿಸಿದ್ದೇವು. ಇಷ್ಟು ಶ್ರಮವಹಿಸಿ ನಾವು ಅಂದುಕೊಂಡದ್ದು ಆಗದೇ ಇದ್ದಾಗ ಅಥವಾ ನಗಮೆ ಬೇಕಾದುದನ್ನು ನಾವು ಪಡೆಯದಿದ್ದರೆ ಅದು ನಿರಾಶಾದಾಯಕವಾಗಿರುತ್ತದೆ. ಇದರಿಂದ ಎಲ್ಲರು ನಿರಾಸೆಗೊಳ್ಳುತ್ತಾರೆ” ಎಂದು ರೋಹಿತ್ ಹೇಳಿದ್ದಾರೆ.
ಇದನ್ನೂ ಒದಿ Suryakumar Yadav : ಮ್ಯಾಕ್ಸ್ವೆಲ್, ರೋಹಿತ್ ದಾಖಲೆ ಸರಿಗಟ್ಟಿದ ಸೂರ್ಯಕುಮಾರ್
“ನಮ್ಮ ಕಡೆಯಿಂದ ಏನು ತಪ್ಪಾಗಿದೆ ಎಂದು ಯಾರಾದರೂ ಕೇಳಿದರೆ? ನಾವು 10 ಪಂದ್ಯಗಳನ್ನು ಗೆದ್ದಿದ್ದೇವೆ ಮತ್ತು ಆ 10 ಪಂದ್ಯಗಳಲ್ಲಿ ಶ್ರೇಷ್ಠ ಪ್ರದರ್ಶನ ತೋರಿದ್ದೇವೆ. ತಪ್ಪು ಪ್ರತಿಯೊಂದು ಪಂದ್ಯದಲ್ಲೂ ಸಂಭವಿಸುತ್ತದೆ. ಪರಿಪೂರ್ಣ ಆಟವನ್ನು ಆಡಲು ಸಾಧ್ಯವಿಲ್ಲ. ಆದರೆ ಪರಿಪೂರ್ಣ ಹಂತಕ್ಕೆ ಹತ್ತಿರವಾಗುವ ಆಟವನ್ನು ಆಡಬಹುದು” ಎಂದು ರೋಹಿತ್ ಹೇಳಿದ್ದಾರೆ.
ಸೋಲಿನ ಆಘಾತ
ನವೆಂಬರ್ 19 ರಂದು ಅಹಮದಾಬಾದ್ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದಿದ್ದ ಫೈನಲ್ ಪಂದ್ಯದಲ್ಲಿ ಟಾಸ್ ಸೋತ ಭಾರತ ತಂಡ ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನ ಪಡೆಯಿತು. ಬ್ಯಾಟಿಂಗ್ ವೈಫಲ್ಯ ಎದುರಿಸಿದ ಭಾರತ ತಂಡ ನಿಗದಿತ 50 ಓವರ್ಗಳಲ್ಲಿ 240 ರನ್ಗಳಿಗೆ ಆಲ್ಔಟ್ ಆಯಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡ 43 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 241 ರನ್ ಬಾರಿಸಿ ಗೆಲುವು ಸಾಧಿಸಿತು. ಟ್ರಾವಿಸ್ ಹೆಡ್ 137 ರನ್ ಬಾರಿಸಿ ಭಾರತದ ಗೆಲುವನ್ನು ಕಸಿದರು.