ತಿರುವನಂತಪುರ: ಟೀಮ್ ಇಂಡಿಯಾದ ರನ್ ಮೆಷಿನ್ ವಿರಾಟ್ ಕೊಹ್ಲಿ(Virat kohli) ಶ್ರೀಲಂಕಾ ತಂಡದ ವಿರುದ್ಧದ ಏಕ ದಿನ ಸರಣಿಯ ಮೂರನೇ ಪಂದ್ಯದಲ್ಲಿ ಅಮೋಘ ಶತಕ (166) ಬಾರಿಸಿದ್ದಾರೆ. ಇದು ಅವರು 46ನೇ ಏಕ ದಿನ ಕ್ರಿಕೆಟ್ ಶತಕ ಹಾಗೂ ಒಟ್ಟಾರೆ 74ನೇ ಅಂತಾರಾಷ್ಟ್ರೀಯ ಶತಕವಾಗಿದೆ. ವಿರಾಟ್ ಕೊಹ್ಲಿಯ ಈ ಸಾಧನೆಗೆ ಮೆಚ್ಚಿರುವ ಅವರ ಅಭಿಮಾನಿಗಳು ಜನವರಿ 15 ಅನ್ನು ವಿರಾಟ್ ಕೊಹ್ಲಿ ದಿನವನ್ನಾಗಿ ಆಚರಿಸಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಆಗ್ರಹಿಸಿದ್ದಾರೆ. ಆದರೆ, ಅವರ ಈ ಆಗ್ರಹಕ್ಕೆ ಬೇರೊಂದು ಕಾರಣವೂ ಇದೆ.
ಜನವರಿ 15, 2023ರಲ್ಲಿ ಅವರು ಬಾರಿಸಿದ್ದು 46ನೇ ಏಕ ದಿನ ಶತಕವಾಗಿದ್ದು ಅವರ ಪಾಲಿಗೆ ಅವಿಸ್ಮರಣೀಯ ಸಾಧನೆಯಾಗಿದೆ. ಕೊಹ್ಲಿ 27ನೇ ಏಕ ದಿನ ಶತಕವನ್ನು 2017ರ ಜನವರಿ 15ರಂದು (ಇಂಗ್ಲೆಂಡ್ ವಿರುದ್ಧ), 39ನೇ ಶತಕವನ್ನು 2019ರಂದು (ಆಸ್ಟ್ರೇಲಿಯಾ ವಿರುದ್ಧ) ಬಾರಿಸಿದ್ದಾರೆ. ಈ ಮೂಲಕ ಒಟ್ಟಾರೆ 46 ಏಕದಿನ ಶತಕಗಳಲ್ಲಿ ಮೂರು ಶತಕಗಳು ಜನವರಿ 15ರಂದು ಬಾರಿಸಿದ್ದಾರೆ. ಅದೂ ಅಲ್ಲದೆ, 2018ರ ಜನವರಿ 15 ರಂದು ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ನಲ್ಲೂ ಶತಕದ ಸಾಧನೆ ಮಾಡಿದ್ದರು. ಈ ಮೂಲಕ ಒಟ್ಟು 74ರಲ್ಲಿ 4 ಶತಕಗಳು ಜನವರಿ 15ರಂದು ದಾಖಲಾಗಿವೆ. ಹೀಗಾಗಿ ಈ ದಿನವನ್ನು ವಿರಾಟ್ ಕೊಹ್ಲಿದಿನ ಎಂದು ಘೋಷಿಸಲು ಅಭಿಮಾನಿಗಳು ಒತ್ತಾಯಿಸಿದ್ದಾರೆ.
ವಿರಾಟ್ ಕೊಹ್ಲಿ ಲಂಕಾ ವಿರುದ್ಧ ಶತಕ ಬಾರಿಸುವ ಮೂಲಕ ತವರು ನೆಲದಲ್ಲಿ ಅತ್ಯಧಿಕ ಶತಕ ಬಾರಿಸಿದ ದಾಖಲೆಯನ್ನು ತಮ್ಮೆಸರಿಗೆ ಬರೆಸಿಕೊಂಡರು. ಈ ಹಿಂದೆ ಈ ದಾಖಲೆ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಹೆಸರಿನಲ್ಲಿತ್ತು. ವಿರಾಟ್ ಕೊಹ್ಲಿ ಈಗ ತವರಿನಲ್ಲಿ 21 ಶತಕಗಳನ್ನು ಬಾರಿಸಿದ ದಾಖಲೆ ಮಾಡಿದ್ದಾರೆ.
ಇದನ್ನೂ ಓದಿ | INDvsSL ODI | ಗಾಯಗೊಂಡ ಎದುರಾಳಿ ತಂಡದ ಆಟಗಾರರ ಆರೋಗ್ಯ ವಿಚಾರಿಸಿದ ವಿರಾಟ್ ಕೊಹ್ಲಿಯ ನಡೆಗೆ ಮೆಚ್ಚುಗೆ