ಹರಾರೆ : ಸುಮಾರು ೬ ತಿಂಗಳ ಕಾಲ (೧೮೮ ದಿನಗಳು) ಕ್ರಿಕೆಟ್ ಅಂಗಣದಿಂದ ಹೊರಗಿದ್ದ ಭಾರತದ ಮಧ್ಯಮ ವೇಗದ ಬೌಲರ್ ದೀಪಕ್ ಚಾಹರ್, ಜಿಂಬಾಬ್ವೆ ವಿರುದ್ಧದ ಏಕ ದಿನ ಸರಣಿಯ ಮೊದಲ ಪಂದ್ಯದಲ್ಲಿ (IND vs ZIM ODI) ಭರ್ಜರಿಯಾಗಿ ಎಂಟ್ರಿ ಪಡೆದುಕೊಂಡಿದ್ದಾರೆ. 7 ಓವರ್‌ಗಳನ್ನು ಎಸೆದಿರುವ ಅವರು ೨೭ ರನ್ ನೀಡಿ ೩ ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ಆಯ್ಕೆಗಾರರ ನಿರೀಕ್ಷೆಯನ್ನು ಪೂರೈಸಿದ್ದಾರೆ.
ದೀಪಕ್ ಚಾಹರ್ ಉತ್ತಮ ಬೌಲಿಂಗ್ ಆಲ್‌ರೌಂಡರ್. ಪವರ್ ಪ್ಲೇ ಅವಧಿಯಲ್ಲಿ ವಿಕೆಟ್ ಕಬಳಿಸುವುದರಲ್ಲಿ ಅವರು ನಿಸ್ಸೀಮರು. ಹೀಗಾಗಿ ಕಳೆದ ಐಪಿಎಲ್‌ನಲ್ಲಿ ಅವರು 14 ಕೋಟಿ ರೂಪಾಯಿಗೆ ಚೆನ್ನೈ ತಂಡಕ್ಕೆ ಸೇರ್ಪಡೆಯಾಗಿದ್ದರು. ಅ ವೇಳೆ ಅವರು ಗಾಯದ ಸಮಸ್ಯೆಗೆ ಒಳಗಾಗಿದ್ದರು. ಹೀಗಾಗಿ ಅವರಿಗೆ ಟೂರ್ನಿಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ. ಒಟ್ಟಾರೆಯಾಗಿ ಅವರು ೬ ತಿಂಗಳ ಕಾಲ ಕ್ರಿಕೆಟ್‌ನಿಂದ ದೂರ ಉಳಿಯುವಂತಾಗಿತ್ತು. ಅಷ್ಟೊಂದು ದೀರ್ಘ ಕಾಲ ಆಟದ ಮೈದಾನದಿಂದ ದೂರವಿದ್ದು, ಭರ್ಜರಿ ಮರು ಪ್ರವೇಶ ಮಾಡುವುದು ಸುಲಭವಲ್ಲ. ಆದರೆ, ಚಾಹರ್ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ.
ನೋವಿನ ದಿನಗಳು
ದೀಪಕ್ ಚಾಹರ್ ಪಾದದ ನೋವಿನ ಕಾರಣಕ್ಕೆ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಇದರಿಂದಾಗಿ ತಾವು ಸಾಕಷ್ಟು ನೋವು ಅನುಭವಿಸಿರುವುದಾಗಿ ಅವರು ಹೇಳಿಕೊಂಡಿದ್ದರು. ಆ ಬಳಿಕ ಅವರು ಹಲ್ಲಿನ ಸಮಸ್ಯೆಗೂ ಒಳಗಾಗಿದ್ದರು. ಈ ರೀತಿಯಲ್ಲಿ ಕ್ರಿಕೆಟ್‌ನಲ್ಲಿ ಅವಕಾಶ ನಷ್ಟ ಮಾಡಿಕೊಳ್ಳುವ ಜತೆಗೆ ನೋವಿನಿಂದಲೂ ಬಳಲಿದ್ದರು. ಆದರೆ, ಮತ್ತೆ ಪ್ರಭಾವಿ ಬೌಲಿಂಗ್ ಪ್ರದರ್ಶನ ನೀಡುವ ಮೂಲಕ ಸಾಮರ್ಥ್ಯ ಪ್ರದರ್ಶನ ಮಾಡಿದ್ದಾರೆ. ಕೆಲವು ದಿನಗಳ ಹಿಂದೆ ತಮ್ಮ ಗಾಯದ ಸಮಸ್ಯೆ ಬಗ್ಗೆ ಮಾತನಾಡಿದ್ದ ಅವರು ತಾವೆದುರಿಸಿದ ಸಮಸ್ಯೆಗಳ ಬಗ್ಗೆಯೂ ವಿವರರಣೆ ನೀಡಿದ್ದರು. ಪ್ರಮುಖವಾಗಿ ಕಾಲು ನೋವು ಹಾಗೂ ಹಲ್ಲು ನೋವಿನಿಂದ ಪರಿತಪಿಸಿದ್ದ ರೀತಿಯನ್ನು ಹೇಳಿದ್ದರು.
ಏಷ್ಯಾ ಕಪ್‌ಗೂ ಆಯ್ಕೆ ಸಾಧ್ಯತೆ
ಗಾಯದಿಂದ ಮುಕ್ತರಾಗಿ ಫಿಟ್ ಅಗಿದ್ದ ದೀಪಕ್ ಚಾಹರ್ ಅವರನ್ನು ಬಿಸಿಸಿಐ ಹಿರಿಯರ ತಂಡದ ಆಯ್ಕೆ ಸಮಿತಿ ಜಿಂಬಾಬ್ವೆ ಸರಣಿಗೆ ಆಯ್ಕೆ ಮಾಡಿದೆ. ಅಂತೆಯೇ ಶ್ರೀಲಂಕಾದ ಆತಿಥ್ಯದಲ್ಲಿ ಯುಎಇನಲ್ಲಿ ನಡೆಯಲಿರುವ ಏಷ್ಯಾ ಕಪ್ ಕ್ರಿಕೆಟ್‌ನ ಮೀಸಲು ಆಟಗಾರರಾಗಿ ಆಯ್ಕೆಯಾಗಿದ್ದಾರೆ. ಒಂದು ವೇಳೆ ಜಿಂಬಾಬ್ವೆಯಲ್ಲಿ ನಡೆಯುವ ಮೂರು ಪಂದ್ಯಗಳಲ್ಲಿ ಉತ್ತಮವಾಗಿ ಆಡಿದರೆ ಅವರು ಏಷ್ಯಾ ಕಪ್‌ನಲ್ಲಿ ಅವಕಾಶ ಪಡೆಯಬಲ್ಲರು.
ದೀಪಕ್ ಭಾರತ ಪರ 7 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಅವರು 5 ಇನ್ನಿಂಗ್ಸ್‌ಗಳಲ್ಲಿ 2 ಅರ್ಧಶತಕಗಳೊಂದಿಗೆ 179 ರನ್ ಗಳಿಸಿ, ಬೌಲಿಂಗ್ನಲ್ಲಿ 10 ವಿಕೆಟ್ ಕಬಳಿಸಿದ್ದಾರೆ.