ಕೇಪ್ಟೌನ್ : ಮಹಿಳೆಯರ ಕ್ರಿಕೆಟ್ ತಂಡದ ಆಲ್ರೌಂಡರ್ ದೀಪ್ತಿ ಶರ್ಮಾ (Deepti Shrama ) ಭಾರತೀಯ ಕ್ರಿಕೆಟ್ ಕ್ಷೇತ್ರದಲ್ಲಿ ಅಮೋಘ ಸಾಧನೆಯೊಂದನ್ನು ಮಾಡಿದ್ದಾರೆ. ಅವರೀಗ ಟಿ20 ಅಂತಾರಾಷ್ಟ್ರೀಯ ಮಾದರಿಯಲ್ಲಿ ವಿಕೆಟ್ಗಳ ಶತಕ (100 ವಿಕೆಟ್) ಸಾಧನೆ ಮಾಡಿದ ಮೊದಲಿಗರು. ಪುರುಷರ ತಂಡದಲ್ಲೂ ಈ ಸಾಧನೆಯನ್ನು ಯಾರೂ ಮಾಡಿಲ್ಲ. ಈ ಮೂಲಕ ಅವರು ಹೊಸ ಮೈಲುಗಲ್ಲು ಸ್ಥಾಪಿಸಿದ್ದಾರೆ.
ಮಹಿಳೆಯರ ಟಿ20 ವಿಶ್ವ ಕಪ್ನಲ್ಲಿ ಆಡುತ್ತಿರುವ ಅವರು ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದಾರೆ. ಪಂದ್ಯದಲ್ಲಿ ಅವರು 15 ರನ್ಗಳನ್ನು ನೀಡಿ ಮೂರು ವಿಕೆಟ್ ಕಬಳಿಸಿದ್ದಾರೆ. ಅವರ ಬೌಲಿಂಗ್ ಸಾಹಸ ಕೂಡ ಭಾರತ ತಂಡದ ಗೆಲುವಿಗೆ ನೆರವಾಗಿತ್ತು. ಇದೇ ವೇಳೆ ಅವರು 100 ವಿಕೆಟ್ಗಳನ್ನು ಕಬಳಿಸಿದ ಭಾರತದ ಮೊದಲ ಕ್ರಿಕೆಟರ್ ಎಂಬ ಖ್ಯಾತಿ ತಮ್ಮದಾಗಿಸಿಕೊಂಡರು. ಅದಕ್ಕಾಗಿ ಅವರು 89 ಇನಿಂಗ್ಸ್ಗಳಲ್ಲಿ ಆಡಿದ್ದಾರೆ.
ದೀಪ್ತಿ ಶರ್ಮಾ ಶತಕದ ಸಾಧನೆ ಮಾಡುವುದಕ್ಕಿಂತ ಮೊದಲು ಇದುವರೆಗೆ ಗರಿಷ್ಠ ವಿಕೆಟ್ಗಳ ಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದುಕೊಂಡಿದ್ದ ಪೂನಮ್ ಯಾದವ್ (98 ವಿಕೆಟ್ 72 ಪಂದ್ಯ) ಅವರನ್ನೂ ಹಿಂದಿಕ್ಕಿದ್ದಾರೆ. ಭಾರತ ಕ್ರಿಕೆಟ್ ಕ್ಷೇತ್ರದಲ್ಲಿ ಈ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿರುವವರು ಯಜ್ವೇಂದ್ರ ಚಹಲ್ (75 ಪಂದ್ಯ 91 ವಿಕೆಟ್). ಭುವನೇಶ್ವರ್ ಕುಮಾರ್ 90 ವಿಕೆಟ್ ತಮ್ಮದಾಗಿಸಿಕೊಂಡಿದ್ದಾರೆ.
ಇದನ್ನೂ ಓದಿ: Women’s T20 World Cup : ಮತ್ತೆ ಮಿಂಚಿದ ರಿಚಾ ಘೋಷ್; ವಿಂಡೀಸ್ ವಿರುದ್ಧ ಭಾರತಕ್ಕೆ 6 ವಿಕೆಟ್ ಸುಲಭ ಜಯ
ಪಂದ್ಯದಲ್ಲಿ ಭಾರತ ತಂಡದ ವೆಸ್ಟ್ ಇಂಡೀಸ್ ವಿರುದ್ಧ 6 ವಿಕೆಟ್ಗಳ ಸುಲಭ ಜಯ ದಾಖಲಿಸಿತ್ತು. ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ ತಂಡ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 118 ರನ್ ಬಾರಿಸಿದ್ದರೆ, ಭಾರತ 18.1 ಓವರ್ಗಳಲ್ಲಿ 4 ವಿಕೆಟ್ ಕಳೆದಕೊಂಡು 119 ರನ್ ಗಳಿಸಿತು.