ಬೆಂಗಳೂರು: ಭಾರತ ತಂಡದ ಸ್ಟಾರ್ ಆಲ್ರೌಂಡರ್ ದೀಪ್ತಿ ಶರ್ಮಾ, ಉದ್ಘಾಟನಾ ಆವೃತ್ತಿಯ WPL 2023 (ಮಹಿಳೆಯರ ಪ್ರೀಮಿಯರ್ ಲೀಗ್ನಲ್ಲಿ) ಯುಪಿ ವಾರಿಯರ್ಸ್ ತಂಡದ ಉಪನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಆಸ್ಟ್ರೇಲಿಯಾ ತಂಡದ ವಿಕೆಟ್ಕೀಪರ್ ಬ್ಯಾಟರ್ ಅಲಿಸಾ ಹೀಲಿ ತಂಡದ ನಾಯಕಿಯಾಗಿ ಈ ಹಿಂದೆಯೇ ಆಯ್ಕೆಯಾಗಿದ್ದರು. ಟಿ20 ವಿಶ್ವ ಕಪ್ನಲ್ಲಿ ಭಾರತ ತಂಡದ ಸದಸ್ಯರಾಗಿದ್ದ ದೀಪ್ತಿ ಶರ್ಮಾ ವಾಪಸ್ ಬಂದು ಡಬ್ಲ್ಯುಪಿಎಲ್ಗಾಗಿ ಅಭ್ಯಾಸ ಆರಂಭಿಸಬೇಕಾಗಿದೆ.
ಫೆಬ್ರವರಿ 13ರಂದು ನಡೆದ ಮಹಿಳೆಯರ ಪ್ರೀಮಿಯರ್ ಲೀಗ್ನ ಆಟಗಾರ್ತಿಯರ ಹರಾಜು ಪ್ರಕ್ರಿಯೆಯಲ್ಲಿ ದೀಪ್ತಿ ಶರ್ಮಾ ಅವರನ್ನು ಲಖನೌ ಮೂಲದ ಫ್ರಾಂಚೈಸಿ 2.6 ಕೋಟಿ ರೂಪಾಯಿ ನೀಡಿ ಖರೀದಿಸಿತ್ತು. ಅವರಿಗೆ ಇದೀಗ ಉಪನಾಯಕಿಯ ಸ್ಥಾನವನ್ನೂ ನೀಡಲಾಗಿದೆ.
ನಾನೊಬ್ಬಳು ಉತ್ತರ ಪ್ರದೇಶದ ಆಟಗಾರ್ತಿಯಾಗಿ ಯುಪಿ ವಾರಿಯರ್ಸ್ ತಂಡದ ಭಾಗವಾಗಲು ಅತೀವ ಸಂತೋಷವಾಗುತ್ತಿದೆ. ಇದೀಗ ತಂಡದ ಉಪನಾಯಕಿಯಾಗಿಯೂ ಕಾರ್ಯನಿರ್ವಹಿಸುವ ಅವಕಾಶ ದೊರಕಿದೆ. ಅಲಿಸಾ ಹಿಲಿ ಅನುಭವಿ ಆಟಗಾರ್ತಿಯಾಗಿದ್ದು ಅವರ ಜತೆ ಆಡಿ ತಂಡವನ್ನು ಉತ್ತಮ ಗತಿಗೆ ಕೊಂಡೊಯ್ಯಲಿದ್ದೇನೆ ಎಂಬುದಾಗಿ ದೀಪ್ತಿ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಯುಪಿ ತಂಡದ ಪರವಾಗಿ ನಾವು ನೀಡುವ ಪ್ರದರ್ಶನ ಉತ್ತರ ಪ್ರದೇಶದ ಹಲವಾರು ಯುವ ಅಥ್ಲೀಟ್ಗಳಿಗೆ ಪ್ರೇರಣೆಯಾಗಲಿದೆ ಎಂದೂ ಅವರ ಹೇಳಿದ್ದಾರೆ.