ಕರಾಚಿ: ಟೀಮ್ ಇಂಡಿಯಾ ಪ್ರಸಕ್ತ ಸಾಗುತ್ತಿರುವ ವಿಶ್ವಕಪ್ ಟೂರ್ನಿಯ(ICC World cup 2023) ಲೀಗ್ ಪಂದ್ಯದಲ್ಲಿ ಅಜೇಯವಾಗಿ ಉಳಿದಿದೆ. ಅಂತಿಮ ಲೀಗ್ ಪಂದ್ಯ ನೆದರ್ಲೆಂಡ್ಸ್ ವಿರುದ್ಧ ಆಡಲಿದೆ. ಆದರೆ ಪಾಕಿಸ್ತಾನ ತಂಡದ ಮಾಜಿ ನಾಯಕ ಮಿಸ್ಬಾ ಉಲ್-ಹಕ್(Misbah-ul-Haq) ಅವರು ಭಾರತ ತಂಡ ಸೆಮಿಫೈನಲ್ನಲ್ಲಿ ಸೋಲು ಕಾಣಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
ಪಾಕಿಸ್ತಾನದ ಎ ಸ್ಪೋರ್ಟ್ಸ್ ಸಂದರ್ಶನವೊಂದರಲ್ಲಿ ಮಾತನಾಡಿದ ಮಿಸ್ಬಾ, “ಲೀಗ್ ಹಂತದಲ್ಲಿ ಎಷ್ಟು ಪಂದ್ಯ ಗೆದ್ದು ಬೀಗಿದರೂ ಪ್ರಯೋಜನವಿಲ್ಲ. ಸೆಮಿಫೈನಲ್ನಲ್ಲಿ ಗೆದ್ದು ಫೈನಲ್ ಪ್ರವೇಶಿಸುವುದು ಮುಖ್ಯ. ಇಲ್ಲಿ ಸೋತರೆ ಮತ್ತೊಂದು ಅವಕಾಶ ಸಿಗುವುದಿಲ್ಲ. ಭಾರತ ತಂಡದ ಗೆಲುವಿಗೆ ಸೆಮಿಫೈನಲ್ನಲ್ಲಿ ಬ್ರೇಕ್ ಬೀಳುವುದು ಖಚಿತ” ಎಂದು ಕೆಟ್ಟ ಭವಿಷ್ಯ ನುಡಿದ್ದಾರೆ.
“ಭಾರತ ವಿರುದ್ಧ ಆಡುವ ತಂಡಗಳು ಮೊದಲ 4 ಓವರ್ಗಳಲ್ಲಿ ಅದ್ಭುತ ಬೌಲಿಂಗ್ ಮತ್ತು ಆಕ್ರಮಣ ಕಾರಿ ಬ್ಯಾಟಿಂಗ್ ನಡೆಸಿ ಒತ್ತಡ ಹೇರಿದರೆ ಭಾರತ ತಮಡಕ್ಕೆ ಸೋಲು ಖಚಿತ. ಹೀಗಾಗಿ ಭಾರತ ಎದುರು ಆಡುವ ಯಾವುದೇ ತಂಡ ಇದನ್ನು ಮಾಡಿದಲ್ಲಿ ಮೇಲುಗೈ ಸಾಧಿಸಬಹುದು” ಎಂದು ಮಿಸ್ಬಾ ಅಭಿಪ್ರಾಯಪಟ್ಟಿದ್ದಾರೆ.
ಒತ್ತಡ ಹೇರಬೇಕು
ಭಾರತವನ್ನು ಮಣಿಸಬೇಕಾದರೆ ಮೊದಲು ಮಾನಸಿಕವಾಗಿ ಸದೃಢರಾಗಬೇಕು. ಹಾಗೂ ಅವರನ್ನು ಒತ್ತಡಕ್ಕೆ ಸಿಲುಕಿಸ ಬೇಕು. ಕಳೆದ ಹಲವು ಟೂರ್ನಿಗಳ ಇತಿಹಾಸ ತೆಗೆದು ನೋಡಿದರೆ ಇದು ತಿಳಿಯುತ್ತದೆ. ಕಳೆದ ವರ್ಷ ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಟಿ20 ವಿಶ್ವಕಪ್ನ ಸೆಮಿಫೈನಲ್ಲಿಯೂ ಭಾರತ ತಂಡ ಇಂಗ್ಲೆಂಡ್ ವಿರುದ್ಧ 10 ವಿಕೆಟ್ಗಳ ಹೀನಾಯ ಸೋಲು ಕಂಡಿತ್ತು. ಇದಕ್ಕೆ ಕಾರಣ ಇಂಗ್ಲೆಂಡ್ ತಂಡ ಚೇಸಿಂಗ್ ವೇಳೆ ಆರಂಭಿಕ ಹಂತದಲ್ಲೇ ಭಾರತೀಯ ಬೌಲರ್ಗಳ ಮೇಲೆ ಒತ್ತಡ ಹೇರಿದ್ದು. ಭಾರತೀಯ ಬೌಲರ್ಗಳಿಗೆ ಒತ್ತಡವನ್ನು ನಿಭಾಯಿಸಿ ಆಡುವ ಕಲೆ ತಿಳಿದಿಲ್ಲ. ಇದರ ಲಾಭವನ್ನು ಎದುರಾಳಿ ತಂಡಗಳು ಸದುಪಯೋಗ ಪಡಿಸಿಕೊಂಡರೆ ಗೆಲುವು ಖಚಿತ” ಎಂದಿದ್ದಾರೆ.
ಸೆಮಿಯಲ್ಲಿ ಭಾರತಕ್ಕೆ ಪಾಕ್ ಎದುರಾಗುವ ಸಾಧ್ಯತೆ?
ವಿಶ್ವಕಪ್ 2023ರ ಪಂದ್ಯಾವಳಿಯು ನಿರ್ಣಾಯಕ ಹಂತ ತಲುಪುತ್ತಿದೆ. ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಸೆಮಿಫೈನಲ್ ತಲುಪಿದೆ. ಭಾರತ ಮತ್ತು ದಕ್ಷಿಣ ಆಫ್ರಿಕಾ ಈಗಾಗಲೇ ಸೆಮಿಫೈನಲ್ನಲ್ಲಿ ತಮ್ಮ ಸ್ಥಾನಗಳನ್ನು ಭದ್ರಪಡಿಸಿಕೊಂಡಿದ್ದು, ಪಾಯಿಂಟ್ಸ್ ಟೇಬಲ್ನಲ್ಲಿ ಮೊದಲ ಎರಡು ಸ್ಥಾನಗಳನ್ನು ಆಕ್ರಮಿಸಿಕೊಂಡಿವೆ. ಉಳಿದ 2 ಸ್ಥಾನಕ್ಕಾಗಿ ಭಾರಿ ಪೈಪೋಟಿ ಇದೆ. ಪಾಕಿಸ್ತಾನ ತಂಡ ಒಂದೊಮ್ಮೆ ಸೆಮಿಫೈನಲ್ ಪ್ರವೇಶಪಡೆದರೆ ಭಾರತ ವಿರುದ್ಧ ಆಡಬೇಕಿದೆ.
ಸನ್ನಿವೇಶ 1
ಸಂಭಾವ್ಯ ಸನ್ನಿವೇಶವೊಂದರಲ್ಲಿ ನ್ಯೂಜಿಲೆಂಡ್ ತಂಡ ಶ್ರೀಲಂಕಾ ವಿರುದ್ಧ ಸೋತರೆ ಮತ್ತು ಪಾಕಿಸ್ತಾನವು ಇಂಗ್ಲೆಂಡ್ ತಂಡವನ್ನು ಸೋಲಿಸಿದರೆ ಪಾಕಿಸ್ತಾನವು ಹತ್ತು ಅಂಕಗಳನ್ನು ಪಡೆಯುತ್ತಿದೆ. ಕಿವೀಸ್ ಎಂಟು ಅಂಕದಲ್ಲೇ ಉಳಿಯುತ್ತದೆ. ಜತೆಗೆ ಪಾಕ್ ತಂಡಕ್ಕೆ ತನ್ನ ಸ್ಥಾನವನ್ನು ಮತ್ತಷ್ಟು ಗಟ್ಟಿಗೊಳಿಸಲು ಆಸ್ಟ್ರೇಲಿಯಾ ತಂಡದ ಅಗತ್ಯವಿದೆ. ಯಾಕೆಂದರೆ ಸೆಮೀಸ್ಗೆ ಪ್ರವೇಶ ಪಡೆಯಲು ಪ್ರಯತ್ನಿಸುತ್ತಿರುವ ಅಫಘಾನಿಸ್ತಾನ ತಂಡವನ್ನು ಆಸೀಸ್ ಸೋಲಿಸಿದರೆ ಪಾಕ್ಗೆ ವರದಾನವಾಗುತ್ತದೆ. ಆಗ ನಾಲ್ಕನೇ ಸ್ಥಾನಕ್ಕೇರಿ ಭಾರತವನ್ನು ಎದುರಿಸುತ್ತದೆ.
ಸನ್ನಿವೇಶ 2
ಒಂದು ವೇಳೆ ನ್ಯೂಜಿಲೆಂಡ್ ಶ್ರೀಲಂಕಾ ವಿರುದ್ಧ ಗೆಲುವು ಸಾಧಿಸಿದರೆ, ಪಾಕಿಸ್ತಾನ ಇಂಗ್ಲೆಂಡ್ ವಿರುದ್ಧ ಗೆದ್ದರೆ, ಅಫ್ಘಾನಿಸ್ತಾನದ ಅಭಿಯಾನ ಎರಡು ಸೋಲಿನಲ್ಲಿ ಕೊನೆಗೊಂಡರೆ, ನಾಲ್ಕನೇ ಸ್ಥಾನವು ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ನಡುವಿನ ನೆಟ್ ರನ್ ರೇಟ್ಮೂಲಕ ನಿರ್ಧಾಗೊಳ್ಳುತ್ತದೆ. ನ್ಯೂಜಿಲೆಂಡ್ ತಂಡದ ನೆಟ್ ರನ್ ರೇಟ್ ಅನ್ನು ಹಿಂದಿಕ್ಕಲು, ಪಾಕಿಸ್ತಾನವು ಇಂಗ್ಲೆಂಡ್ ವಿರುದ್ಧದ ಗೆಲುವಿನ ಅಂತರ ಹೆಚ್ಚಿಸಬೇಕು. ಆದಾಗ್ಯೂ, ಅಫ್ಘಾನಿಸ್ತಾನವು ತನ್ನ ಉಳಿದ ಎರಡು ಪಂದ್ಯಗಳಲ್ಲಿ ಕನಿಷ್ಠ ಒಂದು ಪಂದ್ಯ ಗೆದ್ದರೆ ಹತ್ತು ಅಂಕಗಳನ್ನು ಪಡೆಯುತ್ತದೆ. ಇದರ ಹೊರತಾಗಿಯೂ ಆ ತಂಡ ನಕಾರಾತ್ಮಕ ನೆಗೆಟಿವ್ (-0.330) ನೆಟ್ ರನ್ ರೇಟ್ ಕಾರಣಕ್ಕೆ ನಾಲ್ಕನೇ ಕ್ರಮಾಂಕದ ರೇಸ್ನಲ್ಲಿ ಮೂರನೇ ಸ್ಥಾನದಲ್ಲಿರುತ್ತದೆ.
ಇದನ್ನೂ ಓದಿ ಮೊದಲ ಬಾರಿಗೆ ಚಾಂಪಿಯನ್ಸ್ ಟ್ರೋಫಿಗೆ ಅರ್ಹತೆ ಪಡೆದ ಅಫಘಾನಿಸ್ತಾನ
ಸನ್ನಿವೇಶ 3
ಶ್ರೀಲಂಕಾ ವಿರುದ್ಧದ ನ್ಯೂಜಿಲೆಂಡ್ನ ಅಂತಿಮ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದರೆ ಮತ್ತು ಪಾಕಿಸ್ತಾನದ ಇಂಗ್ಲೆಂಡ್ ವಿರುದ್ಧ ಗೆದ್ದರೆ ಪಾಕಿಸ್ತಾನ ತಂಡ ಸೆಮೀಸ್ಗೆ ತಲುಪಬಹುದು. ಆದರೆ, ಆಫ್ಘನ್ ತಂಡ ಎರಡೂ ಪಂದ್ಯ ಗೆದ್ದರೆ ಆ ತಂಡಕ್ಕೆ ಅವಕಾಶ. ಜತೆಗೆ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ನ ಕೊನೆಯ ಪಂದ್ಯಗಳ ಮೇಲೆ ಮಳೆ ಪರಿಣಾಮ ಬೀರಿದರೆ ನ್ಯೂಜಿಲೆಂಡ್ ತಮ್ಮ ಉತ್ತಮ ರನ್ರೇಟ್ ಕಾರಣದಿಂದಾಗಿ ಸೆಮಿಫೈನಲ್ಗೆ ಪ್ರವೇಶಿಸುತ್ತದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ