ಸಿಂಗಾಪುರ: ಮಂಗಳವಾರ ಇಲ್ಲಿ ಆರಂಭವಾಗಲಿರುವ “ಸಿಂಗಾಪುರ್ ಓಪನ್ ಸೂಪರ್ 750 ಟೂರ್ನಿ’)Singapore Open 2023) ಯಲ್ಲಿ ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಪಟುಗಳು ಅದೃಷ್ಟ ಪರೀಕ್ಷೆಗೆ ಇಳಿಯಲು ಸಜ್ಜಾಗಿದ್ದಾರೆ. ಮಲೇಷ್ಯಾ ಮಾಸ್ಟರ್ ಚಾಂಪಿಯನ್ ಎಚ್.ಎಸ್. ಪ್ರಣಯ್ ಮೇಲೆ ಭಾರತ ಪದಕ ಬರವಸೆಯೊಂದನ್ನು ಇಟ್ಟಿದೆ.
ಕಳೆದ ವಾರದ “ಥಾಯ್ಲೆಂಡ್ ಓಪನ್’ನಲ್ಲಿ ಮೊದಲ ಸುತ್ತಿನಲ್ಲೇ ಆಘಾತಕಾರಿ ಸೋಲು ಕಂಡ ಅವಳಿ ಒಲಿಂಪಿಕ್ಸ್ ಪದಕ ವಿಜೇತೆ ಪಿ.ವಿ. ಸಿಂಧು ಅವರು ಈ ಟೂರ್ನಿಯಲ್ಲಿ ಶ್ರೇಷ್ಠ ಪ್ರದರ್ಶನ ತೋರುವ ಅಗತ್ಯವಿದೆ. ಏಕೆಂದರೆ ಕಳೆದ ಒಂದು ವರ್ಷಗಳ ಅವಧಿಯಲ್ಲಿ ಆಡಿದ ಹಲವು ಟೂರ್ನಿಗಳಲ್ಲಿ ಸಿಂಧು ಪ್ರದರ್ಶನ ತೀರಾ ಕಳಪೆ ಮಟ್ಟದಿಂದ ಕೂಡಿದೆ. ಹೀಗಾಗಿ ಅವರು “ಸಿಂಗಾಪುರ್ ಓಪನ್ ಸೂಪರ್ 750 ಟೂರ್ನಿ’ ತಮ್ಮ ಹಾಲಿ ಚಾಂಪಿಯನ್ ಪ್ರಶಸ್ತಿ ಉಳಿಸಿಕೊಳ್ಳುವ ಮೂಲಕ ಫಾರ್ಮ್ಗೆ ಮರಳಬೇಕಿದೆ.
ಸಿಂಧು ಅವರು ಈ ವರ್ಷದಲ್ಲಿ ಆಡಿದ 2 ಪಂದ್ಯಾವಳಿಗಳಲ್ಲಿ ಮಾತ್ರ ಗಮನಾರ್ಹ ಪ್ರದರ್ಶನ ನೀಡಿದ್ದಾರೆ. ಮ್ಯಾಡ್ರಿಡ್ ಸ್ಪೇನ್ ಮಾಸ್ಟರ್ನಲ್ಲಿ ಫೈನಲ್ ಹಾಗೂ ಮಲೇಷ್ಯಾ ಮಾಸ್ಟರ್ನಲ್ಲಿ ಸೆಮಿಫೈನಲ್ ತಲುಪಿದ್ದು ಅವರ ಸಾಧನೆಯಾಗಿದೆ. ಇದೀಗ ಸಿಂಗಾಪುರ ಓಪನ್ ಟೂರ್ನಿಯ ಮೊದಲ ಸುತ್ತಿನಲ್ಲೇ ವಿಶ್ವದ ನಂ.1 ಆಟಗಾರ್ತಿ, ಜಪಾನ್‌ನ ಅಕಾನೆ ಯಮಾಗುಚಿ ಅವರ ಸವಾಲು ಸಿಂಧುಗೆ ಎದುರಾಗಿದೆ. ಈ ಹರ್ಡಲ್ಸ್ ದಾಟಿದರೆ ಸಿಂಧು ಪದಕ ಸುತ್ತಿಗೆ ಪ್ರವೇಶ ಪಡೆಯುವುದು ಬಹುತೇಕ ಖಚಿತ ಎನ್ನಬಹುದು. ಸೈನಾ ನೆಹ್ವಾಲ್ ಅವರು ಥಾಯ್ಲೆಂಡ್‌ನ ರಚನೋಕ್ ಇಂತಾ ನನ್ ವಿರುದ್ಧ ಮೊದಲ ಪಂದ್ಯ ಆಡಲಿದ್ದಾರೆ.
ಪ್ರಣಯ್ ಮೇಲೆ ನಿರೀಕ್ಷೆ
ಎಚ್.ಎಸ್. ಪ್ರಣಯ್ ಅವರ ಮೇಲೆ ಈ ಟೂರ್ನಿಯಲ್ಲಿ ಬೆಟ್ಟದಷ್ಟು ನಿರೀಕ್ಷೆ ಇರಿಸಲಾಗಿದೆ. ಅವರು ಮಲೇಷ್ಯಾ ಮಾಸ್ಟರ್ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದರು. ಆದರೆ ಕಳೆದ ವಾರ ನಡೆದ ಥಾಯ್ಲೆಂಡ್ ಓಪನ್ ಟೂರ್ನಿಗೆ ವಿಶ್ರಾಂತಿ ಪಡೆದಿದ್ದರು. ಇದೀಗ ಬ್ರೇಕ್ ಬಳಿಕ ಸಿಂಗಾಪುರದಲ್ಲಿ ಆಡಲಿಳಿಯಲಿದ್ದಾರೆ. ಆದರೆ ಇವರಿಗೆ ಮೊದಲ ಸುತ್ತಿನಲ್ಲಿ ಜಪಾನ್‌ನ ಮೂರನೇ ಶ್ರೇಯಾಂಕಿತ ಆಟಗಾರ ಕೋಡೈ ನರವೋಕ ಸವಾಲು ಎದುರಾಗಿದೆ.
ಇದನ್ನೂ ಓದಿ Malaysia Masters: ಪ್ರಣಯ್ ಫೈನಲ್ಗೆ; ಭಾರತಕ್ಕೆ ಒಂದು ಪದಕ ಖಾತ್ರಿ
ಲಕ್ಷ್ಯ ಸೇನ್ ಚೈನೀಸ್ ತೈಪೆಯ ಚೌ ಟೀನ್ ಚೆನ್ ವಿರುದ್ಧ ಮೊದಲ ಸುತ್ತಿನ ಪಂದ್ಯ ಆಡಲಿದ್ದಾರೆ. ಕೆ. ಶ್ರೀಕಾಂತ್ ಥಾಯ್ಲೆಂಡ್‌ನ ಕಾಂತಾ ಫೊನ್ ವಾಂಗ್‌ಶೆರೋನ್ ವಿರುದ್ಧ, ಪ್ರಿಯಾಂಶು ರಾಜಾವತ್ ಜಪಾನ್‌ನ ಕಾಂಟ ಸುನೆಯಾಮ ವಿರುದ್ಧ ಆಡಲಿದ್ದಾರೆ. ಡಬಲ್ಸ್‌ನಲ್ಲಿ ಚಿರಾಗ್ ಶೆಟ್ಟಿ-ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ, ಎಂ.ಆರ್. ಅರ್ಜುನ್-ಧ್ರುವ ಕಪಿಲ, ಗಾಯತ್ರಿ ಗೋಪಿಚಂದ್-ಟ್ರೀಸಾ ಜಾಲಿ ಕಣಕ್ಕಿಳಿಯಲಿದ್ದಾರೆ.