ಲಂಡನ್: ಭಾರತದಲ್ಲಿ ನಡೆಯುವ ಐಸಿಸಿ ಏಕದಿನ ವಿಶ್ವಕಪ್(ICC World Cup 2023) ಟೂರ್ನಿಗೆ ಹಾಲಿ ಚಾಂಪಿಯನ್ ಇಂಗ್ಲೆಂಡ್(England Team) 15 ಸದಸ್ಯರ ಸಂಭಾವ್ಯ ತಂಡವನ್ನು(world cup england team) ಪ್ರಕಟಿಸಿದೆ. ಒತ್ತಾಯದ ಮೇರೆಗೆ ನಿವೃತ್ತಿ ವಾಪಸ್ ಪಡೆದ ವಿಶ್ವಕಪ್ ಹೀರೊ ಬೆನ್ ಸ್ಟೋಕ್ಸ್(Ben Stokes) ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಆದರೆ ಮತ್ತೋರ್ವ ಹೀರೊ ಜೋಫ್ರಾ ಆರ್ಚರ್(Jofra Archer) ಅವರು ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ.
ಬುಧವಾರ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ 15 ಸದಸ್ಯರ ಸಂಭಾವ್ಯ ಆಟಗಾರರ ಪಟ್ಟಿಯನ್ನು ಪ್ರಕಟಿಸಿದೆ. ಟಿ20 ವಿಶ್ವಕಪ್ ವಿಜೇತ ನಾಯಕ ಜಾಸ್ ಬಟ್ಲರ್ ಈ ಮಹತ್ವದ ಟೂರ್ನಿಯಲ್ಲೂ ತಂಡವನ್ನು ಮುನ್ನಡೆಸಲಿದ್ದಾರೆ. ವಿಶ್ವಕಪ್ ಪಂದ್ಯಾವಳಿ ಅಕ್ಟೋಬರ್ 5ರಿಂದ ನವೆಂಬರ್ 19ರ ತನಕ ನಡೆಯಲಿದೆ. ಅಕ್ಟೋಬರ್ 5ರಂದು ನಡೆಯುವ ಉದ್ಘಾಟನ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ನ್ಯೂಜಿಲ್ಯಾಂಡ್ ವಿರುದ್ಧ ಆಡುವ ಮೂಲಕ ತನ್ನ ವಿಶ್ವಕಪ್ ಅಭಿಯಾನ ಆರಂಭಿಸಲಿದೆ.
ಜೋಫ್ರಾ ಇಲ್ಲದ ಇಂಗ್ಲೆಂಡ್
ಇಂಗ್ಲೆಂಡ್ ತಂಡ ವಿಶ್ವಕಪ್ ಗೆಲ್ಲುವಲ್ಲಿ ಬೆನ್ ಸ್ಟೋಕ್ಸ್ ಹೇಗೆ ಪ್ರಮುಖರಾಗಿ ಕಾಣಿಸಿಕೊಂಡಿದ್ದಾರೋ ಹಾಗೆ ವೇಗಿ ಜೋಫ್ರಾ ಆರ್ಚರ್ ಕೂಡ ಪ್ರಮುಖರಾಗಿದ್ದಾರೆ. ಸೂಪರ್ ಓವರ್ನಲ್ಲಿ ಕಿವೀಸ್ ಬ್ಯಾಟರ್ಗಳನ್ನು ಕಿವಿ ಹಿಂಡಿ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿದ್ದರು. ಆದರೆ ಈ ಬಾರಿಯ ವಿಶ್ವಕಪ್ ಟೂರ್ನಿಯಿಂದ ಅವರನ್ನು ಕೈ ಬಿಡಲಾಗಿದೆ. ಇದಕ್ಕೆ ಕಾರಣ ಅವರ ಗಾಯದ ಸಮಸ್ಯೆ. 2019 ವಿಶ್ವಕಪ್ ಮುಗಿದ ತಕ್ಷಣ ಅವರು ಮೊಣಕೈ ಗಾಯಕ್ಕೆ ತುತ್ತಾಗಿದ್ದರು. ಹಲವು ರೀತಿಯ ಶಸ್ತ್ರಚಿಕಿತ್ಸೆ ಮಾಡಿಸಿದರೂ ನೋವು ಮಾತ್ರ ಮತ್ತೆ ಮತ್ತೆ ಕಾಣಿಸುತ್ತಲೇ ಇತ್ತು. ಈ ಬಾರಿಯ ಐಪಿಎಲ್ನಲ್ಲಿ ಮುಂಬೈ ಪರ ಆಡಿದ್ದರೂ ಮತ್ತೆ ಗಾಯಗೊಂಡು ತವರಿಗೆ ಮರಳಿದ್ದರು. ಇದೀಗ ವಿಶ್ವಕಪ್ ಟೂರ್ನಿಯಿಂದಲೂ ಹೊರಬಿದ್ದಿದ್ದಾರೆ.
ಸ್ಟೋಕ್ಸ್ ಆಗಮನ ಸಂತಸ ತಂದಿದೆ
“ಈ ಬಾರಿ ಭಾರತದಲ್ಲಿ ನಡೆಯುವ ವಿಶ್ವಕಪ್ ಟೂರ್ನಿಗೆ ಎರಡು ಉತ್ತಮ ಪ್ರತಿಭೆಗಳನ್ನು ಒಳಗೊಂಡಿರುವ ಬಲಿಷ್ಠ ತಂಡ ಪ್ರಕಟಿಸಿದ್ದೇವೆ. ಬೆನ್ ಸ್ಟೋಕ್ಸ್ ಮರಳುವಿಕೆ ತಂಡಕ್ಕೆ ಹೆಚ್ಚಿನ ಆತ್ಮವಿಶ್ವಾಸ ಮೂಡಿಸಿದೆ. ಸ್ಟೋಕ್ಸ್ ಅವರನ್ನು ಇಂಗ್ಲೆಂಡ್ನ ಪ್ರತಿಯೊಬ್ಬ ಅಭಿಮಾನಿಯೂ ಏಕದಿನ ಕ್ರಿಕೆಟ್ ಜರ್ಸಿಯಲ್ಲಿ ನೋಡಲು ಇಚ್ಚಿಸುತ್ತಾರೆ. ಗಸ್ ಅಟ್ಕಿನ್ಸನ್ ಮತ್ತು ಜಾನ್ ಟರ್ನರ್ ಮೊದಲ ಬಾರಿ ಅಂತಾರಾಷ್ಟ್ರೀಯ ತಂಡದ ಪರ ಅವಕಾಶ ಪಡೆದಿದ್ದಾರೆ” ಎಂದು ಇಂಗ್ಲೆಂಡ್ ರಾಷ್ಟ್ರೀಯ ತಂಡದ ಆಯ್ಕೆಗಾರ ಲ್ಯೂಕ್ ರೈಟ್ ಹೇಳಿದ್ದಾರೆ. ವಿಶ್ವ ಕಪ್ಗೂ ಮುನ್ನ ಈ ತಂಡ ಕಿವೀಸ್ ವಿರುದ್ಧ ಏಕದಿನ ಸರಣಿ ಆಡಲಿದೆ.
ಇದನ್ನೂ ಓದಿ ICC World Cup: ಬೆನ್ ಸ್ಟೋಕ್ಸ್ಗೆ ಕಳಕಳಿಯ ಮನವಿ ಮಾಡಿದ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ
🚨 BREAKING: England have named their provisional 15-member squad for the @cricketworldcup 2023, with a few surprise selections 📝
— ICC (@ICC) August 16, 2023
Details 👇https://t.co/R8OaRRnZu8
ಅತಿಯಾದ ಕ್ರಿಕೆಟ್ ಒತ್ತಡದಿಂದ ಬೆನ್ ಸ್ಟೋಕ್ಸ್ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ಮಾದರಿಗೆ ವಿದಾಯವನ್ನು ಘೋಷಣೆ ಮಾಡಿ ಟಿ20 ಹಾಗೂ ಟೆಸ್ಟ್ ಮಾದರಿಯಲ್ಲಿ ಮಾತ್ರವೇ ಮುಂದುವರಿಯಲು ನಿರ್ಧರಿಸಿದ್ದರು. 2011 ರಲ್ಲಿ ಐರ್ಲೆಂಡ್ ವಿರುದ್ಧ ತಮ್ಮ ಏಕದಿನ ಕ್ರಿಕೆಟ್ಗೆ ಪಾರ್ದಾಪಣೆ ಮಾಡಿದ ಸ್ಟೋಕ್ಸ್ ಇದುವರೆಗೆ 104 ಪಂದ್ಯವನ್ನು ಆಡಿದ್ದು, 2,919 ರನ್ಗಳನ್ನು ಗಳಿಸಿ 3 ಶತಕದೊಂದಿಗೆ, 21 ಅರ್ಧ ಶತಕವನ್ನು ಸಿಡಿಸಿದ್ದಾರೆ. ನ್ಯೂಜಿಲ್ಯಾಂಡ್ ವಿರುದ್ಧದ 2019ರ ವಿಶ್ವಕಪ್ನ ಮಹತ್ತರ ಪಂದ್ಯದಲ್ಲಿ ಔಟಾಗದೆ 84 ರನ್ ಗಳಿಸಿದ್ದು, ಸ್ಟೋಕ್ಸ್ ಶ್ರೇಷ್ಠ ಸಾಧನೆಗಳಲ್ಲಿ ಒಂದು. ಆಲ್ ರೌಂಡರ್ ಆಗಿರುವ ಸ್ಟೋಕ್ಸ್ ಬೌಲಿಂಗ್ನಲ್ಲಿ 74 ವಿಕೆಟ್ ಗಳನ್ನು ಪಡೆದಿದ್ದಾರೆ. ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ(England and Wales Cricket Board) ಕಳಕಳಿಯ ಮನವಿಗೆ ಮಣಿದು ಎರಡು ದಿನಗಳ ಹಿಂದೆ ಸ್ಟೋಕ್ಸ್ ತಮ್ಮ ನಿವೃತ್ತಿಯನ್ನು ವಾಪಸ್ ಪಡೆದಿದ್ದರು.
ಇಂಗ್ಲೆಂಡ್ ಏಕದಿನ ಕ್ರಿಕೆಟ್ ತಂಡ
ಜಾಸ್ ಬಟ್ಲರ್ (ನಾಯಕ), ಮೊಯಿನ್ ಅಲಿ, ಗಸ್ ಅಟ್ಕಿನ್ಸನ್, ಜಾನಿ ಬೇರ್ಸ್ಟೊ, ಸ್ಯಾಮ್ ಕರನ್, ಲಿಯಾಮ್ ಲಿವಿಂಗ್ಸ್ಟೋನ್, ಡೇವಿಡ್ ಮಾಲನ್, ಆದಿಲ್ ರಶೀದ್, ಜೋ ರೂಟ್, ಜೇಸನ್ ರಾಯ್, ಬೆನ್ ಸ್ಟೋಕ್ಸ್, ರೀಸ್ ಟೋಪ್ಲಿ, ಡೇವಿಡ್ ವಿಲ್ಲಿ, ಮಾರ್ಕ್ ವುಡ್, ಕ್ರಿಸ್ ವೋಕ್ಸ್.