ಮುಂಬಯಿ: ಮುಂಬಯಿ ಇಂಡಿಯನ್ಸ್ ಬೌಲರ್ಗಳಾದ ಇಸ್ಸಿ ವಾಂಗ್ (42ರನ್ಗೆ ವಿಕೆಟ್) ಹಾಗೂ ಹೇಲಿ ಮ್ಯಾಥ್ಯೂಸ್ (5 ರನ್ಗೆ 3 ವಿಕೆಟ್), ಅಮೆಲಿಯಾ ಕೆರ್ (19ರನ್ಗೆ 2 ವಿಕೆಟ್) ಮಾರಕ ದಾಳಿಗೆ ಕುಸಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮಹಿಳೆಯರ ಪ್ರೀಮಿಯರ್ ಲೀಗ್ನ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿ ವಿಕೆಟ್ ನಷ್ಟಕ್ಕೆ 131 ರನ್ ಬಾರಿಸಿತು. ಈ ಮೂಲಕ ಡೆಲ್ಲಿಯ ಬಲಿಷ್ಠ ಬ್ಯಾಟಿಂಗ್ ಪಡೆ ತೀವ್ರ ವೈಫಲ್ಯ ಅನುಭವಿಸಿತು. ಇದರೊಂದಿಗೆ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಡೆಲ್ಲಿ ತಂಡದ ಲೆಕ್ಕಾಚಾರ ಬುಡಮೇಲಾಗಿದ್ದು, ಮುಂಬಯಿ ತಂಡ 132 ರನ್ಗಳ ಗೆಲುವಿನ ಗುರಿಯನ್ನು ಪಡೆದುಕೊಂಡಿದೆ.
ಇಲ್ಲಿನ ಬ್ರಬೊರ್ನ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆಯುತ್ತಿರುವ ಹಣಾಹಣಿಯಲ್ಲಿ ಬ್ಯಾಟ್ ಮಾಡಲು ಆರಂಭಿಸಿದ ಡೆಲ್ಲಿ ತಂಡ ಹೀನಾಯ ಆರಂಭ ಮಾಡಿತು. ಸ್ಫೋಟಕ ಬ್ಯಾಟರ್ ಶಫಾಲಿ ವರ್ಮಾ 4 ಎಸೆತಗಳಲ್ಲಿ 1 ಫೋರ್ ಹಾಗೂ 1 ಸಿಕ್ಸರ್ ಸಮೇತ 11 ರನ್ ಬಾರಿಸಿ ಔಟಾದರು. ಇದಾದ ಬಳಿಕ ಅಲೀಸ್ ಕಾಪ್ಸಿ ಕೂಡ ಶೂನ್ಯಕ್ಕೆ ಔಟಾದರು. 12 ರನ್ಗೆ 2 ವಿಕೆಟ್ ಕಳೆದುಕೊಂಡ ಡೆಲ್ಲಿ ಸಂಕಷ್ಟಕ್ಕೆ ಬಿತ್ತು. ನಾಲ್ಕನೇ ಕ್ರಮಾಂಕದಲ್ಲಿ ಬಂದ ಜೆಮಿಮಾ ರೋಡ್ರಿಗಸ್ (9) ಕೂಡ ಹೆಚ್ಚು ಹೊತ್ತು ಆಡಲಿಲ್ಲ. ಇದರಿಂದಾಗಿ ದೊಡ್ಡ ಮೊತ್ತ ಪೇರಿಸುವ ಡೆಲ್ಲಿ ಆಸೆ ಭಗ್ನವಾಯಿತು.
ಮರಿಜನೆ ಕಪ್ 18 ರನ್ ಬಾರಿಸಿದರೂ ತಾವು ಔಟಾಗುವ ಮೊದಲು ನಾಯಕಿ ಮೆಗ್ ಲ್ಯಾನಿಂಗ್ (35 ರನ್) ಅವರನ್ನು ಅನಗತ್ಯ ರನ್ ಕದಿಯುವ ಪ್ರಯತ್ನದಲ್ಲಿ ಔಟ್ ಮಾಡಿದರು. ಜೆಸ್ ಜೊನಾಸೆನ್ 2 ರನ್ ಬಾರಿಸಿದರೆ, ಅರುಂಧತಿ ರೆಡ್ಡಿ ಶೂನ್ಯ ಸುತ್ತಿದರು. ಕೊನೇ ಹಂತದಲ್ಲಿ ಶಿಖಾ ಪಾಂಡೆ (27) ಹಾಗೂ ರಾಧಾ ಯಾದವ್ (27) ಅಲ್ಪ ಹೋರಾಟ ನಡೆಸಿ ತಂಡದ ಮರ್ಯಾದೆ ಕಾಪಾಡಿದರು. ಮಿನ್ನು ಮಣಿ (2) ಹಾಗೂ ತಾನಿಯಾ ಭಾಟಿಯಾ (0) ಮುಂಬಯಿ ಬೌಲಿಂಗ್ ಬಿರುಸಿಗೆ ಪೆಚ್ಚಾದರು.
ಟಾಸ್ ಗೆದ್ದ ಬಳಿಕ ಮಾತನಾಡಿದ ಮೆಗ್ ಲ್ಯಾನಿಂಗ್, ಇಲ್ಲಿ ಮೊದಲು ಬ್ಯಾಟ್ ಮಾಡಿ ಗೆಲ್ಲುವ ಅವಕಾಶವೇ ಹೆಚ್ಚಿದೆ. ನಮ್ಮ ತಂಡಕ್ಕೆ ಮತ್ತೊಂದು ಬಾರಿ ಉತ್ತಮ ಪ್ರದರ್ಶನ ನೀಡಲು ಅವಕಾಶ ಸಿಕ್ಕಿದೆ. ಮುಂಬಯಿ ತಂಡ ಬಲಿಷ್ಠವಾಗಿದ್ದು ಅವರೆದುರು ಉತ್ತಮ ಪ್ರದರ್ಶನ ನೀಡಲಿದ್ದೇವೆ ಎಂದು ಹೇಳಿದ್ದರು. ಆದರೆ ಅವರ ಮಾತು ಸಂಪೂರ್ಣ ಸತ್ಯ ಎನಿಸಲಿಲ್ಲ.