ಬೆಂಗಳೂರು: ಐಪಿಎಲ್(IPL 2024) ಟೂರ್ನಿ ಆರಂಭಕ್ಕೆ ಕ್ಷಣಗಣನೆ ಶುರುವಾಗಿರುವಾಗಲೇ ಡೆಲ್ಲಿ ಕ್ಯಾಪಿಟಲ್ಸ್(Delhi Capitals) ತಂಡಕ್ಕೆ ಆಘಾತ ಉಂಟಾಗಿದೆ. ಇಂಗ್ಲೆಂಡ್ನ ಸ್ಟಾರ್ ಬ್ಯಾಟರ್ ಆಗಿರುವ ಹ್ಯಾರಿ ಬ್ರೂಕ್ (Harry Brook) ಅವರು ಐಪಿಎಲ್ನಿಂದ ಹಿಂದೆ ಸರಿದಿದ್ದಾರೆ. ಹೀಗಾಗಿ ಸ್ಟಾರ್ ಆಟಗಾರ ಸೇವೆಯನ್ನು ಡೆಲ್ಲಿ ಕಳೆದುಕೊಂಡಿದೆ. ಬ್ರೂಕ್ ಅವರ ಅಜ್ಜಿ ನಿಧನರಾದ ಕಾರಣ ಅವರು ಐಪಿಎಲ್ 2024 ರಿಂದ ಹಿಂದೆ ಸರಿದಿರುವುದಾಗಿ ತಿಳಿಸಿದ್ದಾರೆ.
“ಮುಂಬರುವ ಐಪಿಎಲ್‌ನಲ್ಲಿ ಆಡದಿರಲು ನಾನು ತುಂಬಾ ಕಠಿಣ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ ಎಂದು ನಾನು ಖಚಿತಪಡಿಸುತ್ತೇನೆ” ಎಂದು ಬ್ರೂಕ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. “ನಾನು ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಲು ತುಂಬಾ ಉತ್ಸುಕನಾಗಿದ್ದೆ ಮತ್ತು ಐಪಿಎಲ್ಗಾಗಿ ಎದುರು ನೋಡುತ್ತಿದ್ದೆ. ಈ ನಿರ್ಧಾರದ ಹಿಂದೆ ನನ್ನ ವೈಯಕ್ತಿಕ ಕಾರಣಗಳನ್ನು ಹಂಚಿಕೊಳ್ಳುವ ಅಗತ್ಯವಿಲ್ಲ ಎಂದು ನಾನು ಭಾವಿಸುತ್ತೇನೆ ಆದರೆ, ಏಕೆ ಎಂದು ಕೇಳುವ ಅನೇಕರು ಇರುತ್ತಾರೆ ಎಂದು ನನಗೆ ತಿಳಿದಿದೆ. ನಾನು ಇದನ್ನು ಹಂಚಿಕೊಳ್ಳಲು ಬಯಸುತ್ತೇನೆ. ನನ್ನ ಪ್ರೀತಿಯ ಅಜ್ಜಿ ನಿಧನರಾದ ಕಾರಣ ನಾನು ಆಡುತ್ತಿಲ್ಲ’ ಎಂದು ಬ್ರೂಕ್ ಹೇಳಿದ್ದಾರೆ.
Harry Brook on Pulling out of IPL 2024 pic.twitter.com/XwC49gjsE2
— RVCJ Media (@RVCJ_FB) March 14, 2024
“ನಾನು ಕಳೆದ ತಿಂಗಳು ನನ್ನ ಅಜ್ಜಿಯನ್ನು ಕಳೆದುಕೊಂಡೆ – ಅವಳು ನನಗೆ ಸ್ಫೂರ್ತಿಯಾಗಿದ್ದಳು ಮತ್ತು ನಾನು ನನ್ನ ಬಾಲ್ಯದ ಜೀವನವನ್ನು ಅವರ ಮನೆಯಲ್ಲಿಯೇ ಕಳೆದಿದ್ದೇನೆ, ನನ್ನ ಜೀವನ ಮತ್ತು ಕ್ರಿಕೆಟ್ ಮೇಲಿನ ಪ್ರೀತಿಯನ್ನು ಹೆಚ್ಚಿಸಿದ್ದು ನನ್ನ ಅಜ್ಜಿ. ನಾನು ಇಂಗ್ಲೆಂಡ್‌ಗಾಗಿ ಕ್ರಿಕೆಟ್ ಆಡುವುದನ್ನು ಅವಳು ನೋಡಲು ಸಾಧ್ಯವಾಯಿತು. ಅವಳನ್ನು ಕಳೆದುಕೊಂಡ ನೋವಿನಲ್ಲಿ ನಾನು ಸದ್ಯ ಕ್ರಿಕೆಟ್ ಆಡುವ ಮನಸ್ಥಿತಿಯಲ್ಲಿಲ್ಲ” ಎಂದು ಬ್ರೂಕ್ ತಮ್ಮ ಟ್ವಿಟರ್ ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ. ಬ್ರೂಕ್ ನಿರ್ಧಾರಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ಕೂಡ ಬೆಂಬಲ ಸೂಚಿಸಿದೆ. ಸದ್ಯ ಬ್ರೂಕ್ ಸ್ಥಾನಕ್ಕೆ ಇನ್ನೂ ಬದಲಿ ಆಟಗಾರ ಆಯ್ಕೆಯಾಗಿಲ್ಲ.
ಇದನ್ನೂ ಓದಿ IPL 2024: ಅಭ್ಯಾಸದ ವೇಳೆ ಸಿಕ್ಸರ್ಗಳ ಸುರಿಮಳೆಗೈದ ರಿಷಭ್ ಪಂತ್; ವಿಡಿಯೊ ವೈರಲ್
— Harry Brook (@Harry_Brook_88) March 13, 2024
ಕಳೆದ ಡಿಸೆಂಬರ್‌ನಲ್ಲಿ ದುಬೈನಲ್ಲಿ ನಡೆದ ಐಪಿಎಲ್ 2024ರ ಮಿನಿ ಹರಾಜಿನಲ್ಲಿ ಅವರನ್ನು ಡೆಲ್ಲಿ ತಂಡ 4 ಕೋಟಿ ರೂ. ನೀಡಿ ಖರೀದಿ ಮಾಡಿತ್ತು. ಕಳೆದ ಆವೃತ್ತಿಯಲ್ಲಿ ಅವರು ಸನ್ರೈಸರ್ಸ್ ಹೈದರಾಬಾದ್ ತಂಡದ ಪರ ಆಡಿದ್ದರು. ಇದು ಅವರ ಚೊಚ್ಚಲ ಐಪಿಎಲ್ ಟೂರ್ನಿಯೂ ಆಗಿತ್ತು. ಬ್ರೂಕ್ ಒಟ್ಟು 11 ಪಂದ್ಯಗಳಲ್ಲಿ 123.37 ಸ್ಟ್ರೈಕ್ ರೇಟ್‌ನಲ್ಲಿ ಕೇವಲ 190 ರನ್ ಮಾತ್ರ ಬಾರಿಸಿದ್ದರು. ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ 55 ಎಸೆತಗಳಲ್ಲಿ 100 ರನ್ ಗಳಿಸಿದ್ದು ಅವರ ಐಪಿಎಲ್ ಶ್ರೇಷ್ಠ ಸಾಧನೆಯಾಗಿದೆ.
ಮಾರ್ಚ್ 23 ರಂದು ಪಂಜಾಬ್ ಕಿಂಗ್ಸ್ ವಿರುದ್ಧ ಮೊಹಾಲಿಯಲ್ಲಿ ಪಂದ್ಯವನ್ನಾಡುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ಐಪಿಎಲ್ 2024ರ ಅಭಿಯಾನವನ್ನು ಪ್ರಾರಂಭಿಸಲಿದೆ. ನಾಯಕನಾಗಿರು ರಿಷಭ್ ಪಂತ್ ಅವರು ಬ್ಯಾಟಿಂಗ್ ಜತೆಗೆ ವಿಕೆಟ್ ಕೀಪಿಂಗ್ ಕೂಡ ಮಾಡಲಿದ್ದಾರೆ.