Site icon Vistara News

Rahul Gandhi : ರಾಹುಲ್ ವಿರುದ್ಧ ಕ್ರಮಕ್ಕೆ ದೆಹಲಿ ಹೈಕೋರ್ಟ್ ಸೂಚನೆ

Rahul Gandhi

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಉದ್ಯಮಿ ಗೌತಮ್ ಅದಾನಿ ಅವರನ್ನು ಪಿಕ್ ಪಾಕೆಟರ್​ ಎಂದು ಕರೆದಿದ್ದಕ್ಕಾಗಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ (Rahul Gandhi) ವಿರುದ್ಧ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳುವಂತೆ ದೆಹಲಿ ಹೈಕೋರ್ಟ್ ಭಾರತದ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿದೆ. ಹೇಳಿಕೆಗಳು ಉತ್ತಮ ಅಭಿರುಚಿಯನ್ನು ಹೊಂದಿಲ್ಲ ಎಂದು ಅಭಿಪ್ರಾಯಪಟ್ಟ ನ್ಯಾಯಾಲಯವು ಕ್ರಮ ತೆಗೆದುಕೊಳ್ಳಲು ಸಾಂವಿಧಾನಿಕ ಸಂಸ್ಥೆಗೆ ಎಂಟು ವಾರಗಳ ಕಾಲಾವಕಾಶ ನೀಡಿತು.

ಹೇಳಿಕೆಗಳು ಉತ್ತಮ ಅಭಿರುಚಿಯನ್ನು ಹೊಂದಿಲ್ಲವಾದರೂ ಚುನಾವಣಾ ಆಯೋಗವು ಈ ವಿಷಯದಲ್ಲಿ ಕಾರ್ಯನಿರ್ವಹಿಸುತ್ತಿರುವುದರಿಂದ ನ್ಯಾಯಾಲಯವು ವಿಷಯವನ್ನು ಬಾಕಿ ಇಡಲು ಉದ್ದೇಶ ಹೊಂದಿಲ್ಲ. ಅದನ್ನು ವಿಲೇವಾರಿ ಮಾಡಲಾಗಿದೆ ಎಂದು ನ್ಯಾಯಾಲಯ ಆದೇಶದಲ್ಲಿ ತಿಳಿಸಿದೆ.

ಇದನ್ನೂ ಓದಿ : ಬುದ್ಧಿಗೇಡಿತನ; ತಮ್ಮನ್ನು ಟಿಎಂಸಿ ಎಂಪಿ ಅಣಕಿಸಿದ್ದನ್ನು ವಿಡಿಯೊ ಮಾಡಿದ ರಾಹುಲ್ ಗಾಂಧಿಗೆ ಉಪ ರಾಷ್ಟ್ರಪತಿ ತರಾಟೆ

ರಾಹುಲ್ ಗಾಂಧಿ ಅವರ ಭಾಷಣಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗವು ನವೆಂಬರ್ 23ರಂದು ನೋಟಿಸ್ ನೀಡಿದ್ದರೂ ಮತ್ತು ನವೆಂಬರ್ 26ರೊಳಗೆ ಉತ್ತರಿಸದಿದ್ದರೆ ಅವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಹೇಳಲಾಗಿದೆ. ಅದಕ್ಕೆ ಅವರು ಪ್ರತಿಕ್ರಿಯಿಸಲು ವಿಫಲಗೊಂಡಿದ್ದಾರೆ ಎಂದು ತಿಳಿಸಿದ ನಂತರ ನ್ಯಾಯಾಲಯವು ರಾಹುಲ್ ಗಾಂಧಿ ವಿರುದ್ಧ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿತು.

ಕಳೆದ ತಿಂಗಳು, ಚುನಾವಣಾ ಆಯೋಗವು ನವೆಂಬರ್ 23 ರಂದು ಪ್ರಧಾನಿ ಮೋದಿಯವರನ್ನು ‘ಪನೌತಿ ಮತ್ತು ಪಿಕ್ ಪಾಕೆಟರ್​​ ‘ ಎಂದು ಟೀಕಿಸಿದ್ದಕ್ಕಾಗಿ ರಾಹುಲ್ ಗಾಂಧಿಗೆ ಶೋಕಾಸ್ ನೋಟಿಸ್ ನೀಡಿತ್ತು. ನವೆಂಬರ್ 26ರೊಳಗೆ ಉತ್ತರಿಸುವಂತೆಯೂ ಅದು ಕೇಳಿದೆ. ಅತ್ಯಂತ ಹಿರಿಯ ನಾಯಕರೊಬ್ಬರು ಇಂತಹ ಭಾಷೆಯನ್ನು ಬಳಸುವುದು ಸರಿಯಲ್ಲ ಎಂದು ಬಿಜೆಪಿ ಹೇಳಿಕೆಯನ್ನು ಖಂಡಿಸಿತ್ತು.

ಸಂಹಿತೆಯ ಪ್ರಕಾರ ರಾಜಕೀಯ ಪ್ರತಿಸ್ಪರ್ಧಿಗಳ ವಿರುದ್ಧ ಪರಿಶೀಲಿಸದ ಆರೋಪಗಳನ್ನು ಮಾಡಲು ನಾಯಕರಿಗೆ ಅವಕಾಶವಿಲ್ಲ ಎಂದು ಚುನಾವಣಾ ಆಯೋಗ ತನ್ನ ನೋಟಿಸ್ ನಲ್ಲಿ ರಾಹುಲ್ ಗಾಂಧಿಗೆ ನೆನಪಿಸಿತ್ತು.

Exit mobile version