ಇಂದೋರ್: ಭಾರತ ಹಾಗೂ ಆಸ್ಟ್ರೇಲಿಯಾ (INDvsAUS) ತಂಡಗಳ ನಡುವಿನ ಮೂರನೇ ಟೆಸ್ಟ್ ಪಂದ್ಯ ನಡೆದ ಇಂದೋರ್ನ ಪಿಚ್ಗೆ ಮೂರು ಡಿಮೆರಿಟ್ ಅಂಕಗಳನ್ನು ನೀಡಿರುವ ಐಸಿಸಿಯ ಕ್ರಮವನ್ನು ಪ್ರಶ್ನಿಸಿದ ಬಿಸಿಸಿಐ ಮರು ಪರಿಶೀಲನೆ ಅರ್ಜಿ ಸಲ್ಲಿಸಿದೆ. ಆಟಗಾರರಿಗೆ ಅಪಾಯಕಾರಿಯಾಗಿರದ ಪಿಚ್ಗೆ ದಂಡನೆ ವಿಧಿಸಿರುವುದು ಸರಿಯಲ್ಲ. ಈಗಾಗಲೇ ಕೊಟ್ಟಿರುವ ತೀರ್ಪನ್ನು ಮರುಪರಿಶೀಲನೆ ಮಾಡಬೇಕು ಎಂದು ಮನವಿ ಸಲ್ಲಿಸಲಾಗಿದೆ.
ಇಂದೋರ್ನಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯ ಎರಡು ದಿನ ಹಾಗೂ ಮೂರನೇ ದಿನ ಮೊದಲ ಸೆಷನ್ನಲ್ಲಿ ಮುಕ್ತಾಯಗೊಂಡಿತ್ತು. ಅಷ್ಟರಲ್ಲಿ 31 ವಿಕೆಟ್ಗಳು ಉರುಳಿದ್ದವು. ಹೀಗಾಗಿ ಮಿತಿ ಮೀರಿ ಚೆಂಡು ತಿರುವು ಪಡೆಯುತ್ತಿದ್ದ ಆರೋಪಗಳು ಕೇಳಿ ಬಂದಿದ್ದವು. ಈ ಹಿನ್ನೆಲೆಯಲ್ಲಿ ಮ್ಯಾಚ್ ರೆಫರಿ ಕ್ರಿಸ್ ಬ್ರಾಡ್ ಪಿಚ್ಗೆ ಮೂರು ಡಿಮೆರಿಟ್ ಅಂಕಗಳನ್ನು ನೀಡಿತ್ತು. ಇದರ ಬಗ್ಗೆ ಭಾರತದಲ್ಲಿ ಆಕ್ಷೇಪಗಳು ಕೇಳಿ ಬಂದಿದ್ದವು.
ಇದನ್ನೂ ಓದಿ : IND VS AUS: ಅಂತಿಮ ಟೆಸ್ಟ್ ಡ್ರಾ ಗೊಂಡರೆ ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಗತಿ ಏನು?
ಡಿಮೆರಿಟ್ ಅಂಕಗಳನ್ನು ನೀಡುವುದರಿಂದ ಪಿಚ್ಗೆ ಸಮಸ್ಯೆ ಆಗುತ್ತದೆ. ಐದು ವರ್ಷಗಳ ಅವಧಿಯಲ್ಲಿ ಒಟ್ಟು ಐದು ಡಿಮೆರಿಟ್ ಅಂಕಗಳು ಲಭಿಸಿದರೆ ಆ ಪಿಚ್ನಲ್ಲಿ ಒಂದು ವರ್ಷ ಅಂತಾರಾಷ್ಟ್ರೀಯ ಪಂದ್ಯಗಳನ್ನು ನಡೆಸುವಂತಿಲ್ಲ ಎಂಬ ನಿಯಮವಿದೆ. ಹೀಗಾಗಿ ಮಧ್ಯಪ್ರದೇಶ ಕ್ರಿಕೆಟ್ ಅಸೋಸಿಯೇಶನ್ ಬಿಸಿಸಿಐ ಅಸಮಾಧಾನ ವ್ಯಕ್ತಪಡಿಸಿ ಇ ಮೇಲ್ ರವಾನಿಸಿತ್ತು. ಅದನ್ನು ಆಧರಿಸಿ ಬಿಸಿಸಿಐ ತನ್ನ ಮೇಲ್ಮನವಿಯನ್ನು ಐಸಿಸಿಗೆ ರವಾನಿಸಿದೆ.
ಮ್ಯಾಚ್ ರೆಫರಿ ಕೊಟ್ಟಿರುವ ತೀರ್ಪನ್ನು ಐಸಿಸಿ ಕ್ರಿಕೆಟ್ ಮ್ಯಾನೇಜರ್ ವಾಸಿಮ್ ಖಾನ್ ಹಾಗೂ ಕ್ರಿಕೆಟ್ ಕಮಿಟಿ ಮರುಪರಿಶೀಲನೆ ಮಾಡಲಿದೆ. ಭಾರತ ತಂಡದ ಮಾಜಿ ಕ್ರಿಕೆಟಿಗ ಹಾಗೂ ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಕ್ರಿಕೆಟ್ ಕಮಿಟಿಯ ಮುಖ್ಯಸ್ಥ. ಹೀಗಾಗಿ ಗಂಗೂಲಿ ಬದಲಿಗೆ ಬೇರೆ ವ್ಯಕ್ತಿಗಳನ್ನು ನೇಮಕ ಮಾಡುವ ಸಾಧ್ಯತೆಗಳಿವೆ. ಅವರು ಬಿಸಿಸಿಐ ಅರ್ಜಿಯನ್ನು ಪರಿಶೀಲಿಸಿ ಮುಂದಿನ ತೀರ್ಮಾನ ಕೈಗೊಳ್ಳಲಿದ್ದಾರೆ.