ಮುಂಬಯಿ: ಆಸ್ಟ್ರೇಲಿಯಾ ವಿರುದ್ಧ ಮಂಗಳವಾರ ನಡೆದ ವಿಶ್ವಕಪ್ ಪಂದ್ಯದಲ್ಲಿ ಅಫಘಾನಿಸ್ತಾನ(Australia vs Afghanistan) ಸೋಲು ಕಂಡರೂ ತಂಡದ ಸೆಮಿಫೈನಲ್ ಪ್ರವೇಶದ ಅವಕಾಶ ಇನ್ನೂ ಜೀವಂತವಿದೆ. ಇದು ಹೇಗೆ ಎನ್ನುವ ಮಾಹಿತಿ ಈ ವರದಿಯಲ್ಲಿ ವಿವರಿಸಲಾಗಿದೆ.
ಮುಂದಿನ ಪಂದ್ಯದಲ್ಲಿ ಗೆಲುವು ಅಗತ್ಯ
ಆಫ್ಘನ್ ತಂಡ 7 ಪಂದ್ಯಗಳನ್ನು ಆಡಿ ಸದ್ಯ 8 ಅಂಕ ಪಡೆದಿದೆ. ಇನ್ನು ಒಂದು ಪಂದ್ಯ ಮಾತ್ರ ಬಾಕಿ ಉಳಿದಿದೆ. ಇದು ದಕ್ಷಿಣ ಆಫ್ರಿಕಾ ವಿರುದ್ಧ. ಈ ಪಂದ್ಯದಲ್ಲಿ ಅಫಘಾನಿಸ್ತಾನ ತಂಡ ಗೆಲುವು ಸಾಧಿಸಿದರೆ 10 ಅಂಕ ಆಗಲಿದೆ. ಆದರೂ ಸೆಮಿ ಟಿಕೆಟ್ ಖಚಿತವಾಗುವುದಿಲ್ಲ. ಏಕೆಂದರೆ ನ್ಯೂಜಿಲ್ಯಾಂಡ್ ಮತ್ತು ಪಾಕಿಸ್ತಾನ ತಂಡಕ್ಕೂ ಇನ್ನೊಂದು ಪಂದ್ಯವಿದೆ. ಉಭಯ ತಂಡಗಳು ಗೆಲುವು ಸಾಧಿಸಿದರೆ ಈ ತಂಡಗಳಿಗೂ 10 ಅಂಕ ಆಗಲಿದೆ. ಅಲ್ಲದೆ ಉತ್ತಮ ರನ್ ರೇಟ್ ಕೂಡ ಹೊಂದಿರುವುದರಿಂದ ಇವೆರಡರಲ್ಲಿ ಒಂದು ತಂಡಕ್ಕೆ ನಾಲ್ಕನೇ ಸ್ಥಾನ ಸಿಗಲಿದೆ. ಆಗ ಆಫ್ಘನ್ ಗೆಲುವು ಪ್ರಯೋಜನಕ್ಕೆ ಬರುವುದಿಲ್ಲ.
ಪಾಕ್-ಕಿವೀಸ್ ಸೋಲಬೇಕು
ಪಾಕಿಸ್ತಾನ ಮತ್ತು ನ್ಯೂಜಿಲ್ಯಾಂಡ್ ತಂಡಗಳು ಮುಂದಿನ ಪಂದ್ಯದಲ್ಲಿ ಸೋಲು ಕಂಡು ಆಫ್ಘನ್ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಗೆದ್ದರೆ ಯಾವುದೇ ಚಿಂತೆ ಇಲ್ಲದೆ ಆಫ್ಘನ್ ನಾಲ್ಕನೇ ತಂಡವಾಗಿ ಸೆಮಿಫೈನಲ್ ಪ್ರವೇಶ ಪಡೆಯಲಿದೆ. ಒಂದೊಮ್ಮೆ ಪಾಕಿಸ್ತಾನ ಸೋಲು ಕಂಡು ನ್ಯೂಜಿಲ್ಯಾಂಡ್ ಗೆದ್ದರೆ, ಅಥವಾ ಪಾಕಿಸ್ತಾನ ಗೆದ್ದು ಕಿವೀಸ್ ಸೋಲು ಕಂಡರೆ. ಅತ್ತ ಅಫಘಾನಿಸ್ತಾನವೂ ಗೆಲುವು ಸಾಧಿಸಿದರೆ ರನ್ ರೇಟ್ ಲೆಕ್ಕಾಚಾರ ಪರಿಗಣನೆಗೆ ಬರುತ್ತದೆ. ಈ ಲಾಭ ಗೆಲುವು ಸಾಧಿಸಿದ ಪಾಕಿಸ್ತಾನ ಅಥವಾ ನ್ಯೂಜಿಲ್ಯಾಂಡ್ ತಂಡಗಳಿಗೆ ಲಭಿಸಲಿದೆ. ಏಕೆಂದರೆ ಈ ಎರಡು ತಂಡಗಳು ಅಫಘಾನಿಸ್ತಾನಕ್ಕಿಂತ ಉತ್ತಮ ರನ್ ರೇಟ್ ಹೊಂದಿದೆ.
ಇದನ್ನೂ ಓದಿ ICC World Cup 2023 : ಆಸ್ಟ್ರೇಲಿಯಾ ತಂಡ ಸೆಮೀಸ್ಗೆ, ಅಂಕಪಟ್ಟಿಯಲ್ಲಿ ಆಫ್ಘನ್ ಸ್ಥಾನವೇನು?
ಗೆಲುವೊಂದೆ ಸಾಲದು
ನವೆಂಬರ್ 10ರಂದು ನಡೆಯುವ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಅಘಫಾನಿಸ್ತಾನಕ್ಕೆ ಕೇವಲ ಗೆಲುವೊಂದೆ ಸಾಲದು. ದೊಡ್ಡ ಅಂತರದ ಗೆಲುವು ಬೇಕು. ಏಕೆಂದರೆ ನ್ಯೂಜಿಲ್ಯಾಂಡ್ ಮತ್ತು ಪಾಕಿಸ್ತಾನ ತಂಡ ಗೆಲುವು ಸಾಧಿಸಿದ್ದರೆ ಅವುಗಳಿಗೂ 10 ಅಂಕ ಆಗಲಿದೆ. ಆಗ ರನ್ ರೇಟ್ ಲೆಕ್ಕಾಚಾರ ಪರಿಗಣನೆಗೆ ಬರುತ್ತದೆ. ಕೊವೀಸ್ ಮತ್ತು ಪಾಕ್ ಗೆದ್ದರೂ ಸಣ್ಣ ಅಂತರದಿಂದ ಗೆಲುವು ಸಾಧಿಸಬೇಕು. ಒಂದೊಮ್ಮೆ ಉಭಯ ತಂಡಗಳು ದೊಡ್ಡ ಅಂತರದಿಂದ ಗೆದ್ದರೆ ಆಫ್ಘನ್ಗೆ ನಷ್ಟ ಸಂಭವಿಸಲಿದೆ. ಇದಕ್ಕೆ ಕಾರಣ ಅಫಘಾನಿಸ್ತಾನ ತಂಡದ ರನ್ ರೇಟ್ ಮೈನಸ್ನಲ್ಲಿದೆ.
ಮಂಗಳವಾರ ನಡೆದಿದ್ದ ಪಂದ್ಯದಲ್ಲಿ ಅಫಘಾನಿಸ್ತಾನ ತಂಡ ಆಸೀಸ್ ವಿರುದ್ಧ ಗೆಲುವು ಸಾಧಿಸುತ್ತಿದ್ದರೆ ಈ ತಂಡಕ್ಕೆ ಈಗ ಚಿಂತಿಸುವ ಅಗತ್ಯವಿರಲಿಲ್ಲ. ಮುಂದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಗೆಲುವು ಸಾಧಿಸಿದರೆ ಮೂರನೇ ಸ್ಥಾನಿಯಾಗಿ ಸೆಮಿಗೆ ಎಂಟ್ರಿ ಕೊಡಬಹುದಿತ್ತು. ಆದರೆ ಸೋಲು ಕಂಡು ಇತರ ತಂಡದ ಸೋಲಿಗೆ ಹರಸಬೇಕಾದ ಸ್ಥಿತಿ ಎದುರಾಗಿದೆ.
ಗೆದ್ದು ಬೀಗಿದ ಆಸೀಸ್
ವಾಂಖೆಡೆ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ಮಂಗಳವಾರ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಅಫಘಾನಿಸ್ತಾನ ನಿಗದಿತ 50 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 291 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡ ಇನ್ನೂ 19 ಎಸೆತಗಳು ಬಾಕಿ ಇರುವಂತೆಯೇ 7 ವಿಕೆಟ್ ನಷ್ಟಕ್ಕೆ 293 ರನ್ ಬಾರಿಸಿ ಗೆಲುವು ಸಾಧಿಸಿತು. ಒಂದು ಹಂತದಲ್ಲಿ ಅಫಘಾನಿಸ್ತಾನ ತಂಡ ಗೆಲುವಿನ ವಿಶ್ವಾಸದಲ್ಲಿತ್ತು. ಆದರೆ, ಮ್ಯಾಕ್ಸ್ವೆಲ್ ಅವರ ಬ್ಯಾಟಿಂಗ್ ಪರಾಕ್ರಮಕ್ಕೆ ಸೋಲು ಕಾಣುವಂತಾಯಿತು. ಮ್ಯಾಕ್ಸ್ವೆಲ್ ಅಜೇಯ 201 ರನ್ ಬಾರಿಸಿ ಆಸೀಸ್ಗೆ ಸ್ಮರಣೀಯ ಗೆಲುವು ತಂದುಕೊಟ್ಟರು.