ಕೊಲಂಬೊ: ಶ್ರೀಲಂಕಾ ತಂಡದ ಮಾಜಿ ಆಟಗಾರ, ಅಂಡರ್-19 ತಂಡದ ನಾಯಕನಾಗಿದ್ದ ಧಮ್ಮಿಕಾ ನಿರೋಶನಾ(Dhammika Niroshana) (41) ಅವರನ್ನು ಮಂಗಳವಾರ ತಡರಾತ್ರಿ (ಜುಲೈ 16) ಅವರ ನಿವಾಸದಲ್ಲಿಯೇ ಗುಂಡಿಕ್ಕಿ ಕೊಲೆಗೈದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಸ್ಥಳೀಯ ಪೊಲೀಸರ ಮಾಹಿತಿ ಪ್ರಕಾರ, ನಿರೋಶನಾ ತಮ್ಮ ನಿವಾಸದಲ್ಲಿ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಇದ್ದಾಗ ಅಪರಿಚಿತ ವ್ಯಕ್ತಿಯೊಬ್ಬ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.
ತಲೆಮರೆಸಿಕೊಂಡಿರುವ ಶಂಕಿತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಕೊಲೆಗೆ ನಿಖರ ಕಾರಣ ಏನೆಂಬುದು ತಿಳಿದು ಬಂದಿಲ್ಲ. ಗಾಲೆ ಜಿಲ್ಲೆಯ ಸಣ್ಣ ಪಟ್ಟಣವಾದ ಅಂಬಲಂಗೋಡದಲ್ಲಿರುವ ನಿವಾಸದಲ್ಲಿ ಅವರ ಹತ್ಯೆ ಮಾಡಲಾಗಿದೆ.
ಬಲಗೈ ಮಧ್ಯಮ ವೇಗದ ಬೌಲರ್ ಆಗಿದ್ದ ನಿರೋಶನಾ 2001 ಮತ್ತು 2004 ರ ನಡುವೆ ಗಾಲೆ ಕ್ರಿಕೆಟ್ ಕ್ಲಬ್ಗಾಗಿ 12 ಪ್ರಥಮ ದರ್ಜೆ ಪಂದ್ಯಗಳು ಮತ್ತು 8 ಲಿಸ್ಟ್ ‘ಎ’ ಪಂದ್ಯಗಳನ್ನು ಆಡಿದ್ದಾರೆ. ಪ್ರಥಮ ದರ್ಜೆಯಲ್ಲಿ 19, ಲಿಸ್ಟ್ ‘ಎ’ ಪಂದ್ಯಗಳಲ್ಲಿ 5 ವಿಕೆಟ್ ಕಿತ್ತ ಸಾಧನೆ ಮಾಡಿದ್ದಾರೆ. ಶ್ರೀಲಂಕಾ ಅಂಡರ್-19 ತಂಡದ ನಾಯಕನಾಗಿ ಎರಡು ವರ್ಷಗಳ ಕಾಲ ಟೆಸ್ಟ್ ಮತ್ತು ಏಕದಿನ ತಂಡವನ್ನು ಮುನ್ನಡೆಸಿದ್ದರು.