ಧರ್ಮಶಾಲಾ: ಸೋಮವಾರ ಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆ (ಎಚ್‌ಪಿಸಿಎ)ಯ ಕ್ರೀಡಾಂಗಣದಲ್ಲಿ(Dharamsala Stadium) ಅನಾವರಣಗೊಳಿಸಲಾದ ಭಾರತದ ಮೊದಲ ಹೈಬ್ರಿಡ್ ಕ್ರಿಕೆಟ್ ಪಿಚ್‌ನ ವಿಶೇಷತೆ ಏನು? ಈ ಪಿಚ್ನಿಂದ ಏನು ಲಾಭ? ಇದು ಹೇಗೆ ವರ್ತಿಸುತ್ತದೆ? ಹೀಗೆ ಹಲವು ಪ್ರಶ್ನೆಗಳು ಇದೀಗ ಕ್ರಿಕೆಟ್ ಅಭಿಮಾನಿಗಳಲ್ಲಿ ಕುತೂಹಲಕ್ಕೆ ಕಾರಣವಾಗಿದೆ. ಇದಕ್ಕೆ ಉತ್ತ ಇಲ್ಲಿದೆ.
ಪಿಚ್ ವಿಶೇಷತೆ
ನೆದರ್‌ಲೆಂಡ್ಸ್ ಮೂಲದ ಎಸ್‌ಐಎಸ್ ಸಂಸ್ಥೆಯು ಈ ಪಿಚ್ ಅಳವಡಿಕೆ ಮಾಡಿದ್ದು, ಶೇ.95ರಷ್ಟು ನೈಸರ್ಗಿಕ ಟರ್ಫ್ ಜತೆಗೆ ಶೇ.5ರಷ್ಟು ಸಿಂಥೆಟಿಕ್ ಫೈಬರನ್ನು ಈ ಪಿಚ್ ಒಳಗೊಂಡಿರಲಿದೆ. ಹೈಬ್ರಿಡ್ ಪಿಚ್ ಸಾಮಾನ್ಯ ಪಿಚ್‌ಗಿಂತ ಹೆಚ್ಚು ಸಮಯ ಬಳಕೆಗೆ ಯೋಗ್ಯವಾಗಿರಲಿದೆ. ಚೆಂಡಿನ ಬೌನ್ಸ್‌ನಲ್ಲಿ ಯಾವುದೇ ಏರುಪೇರು ಇರುವುದಿಲ್ಲ. ಪಿಚ್ ಮೇಲಿನ ತೇವಾಂಶವನ್ನು ಅಗತ್ಯ ಎನಿಸಿದಷ್ಟು ಮಟ್ಟಕ್ಕೆ ಕಾಯ್ದುಕೊಳ್ಳಬಹುದಾಗಿದೆ. ಇದರಿಂದಾಗಿ ಮೈದಾನ ಸಿಬ್ಬಂದಿಯ ಮೇಲಿನ ಒತ್ತಡ ಕಡಿಮೆಯಾಗಲಿದೆ. ಜತೆಗೆ ಆಟದ ಗುಣಮಟ್ಟವೂ ಹೆಚ್ಚಾಗಲಿದೆ. ಈಗಾಗಲೇ ಈ ಪಿಚ್ಗಳು ಇಂಗ್ಲೆಂಡ್‌ನ ಐತಿಹಾಸಿಕ ಲಾರ್ಡ್ಸ್ ಹಾಗೂ ದಿ ಓವಲ್ ಕ್ರೀಡಾಂಗಣಗಳಲ್ಲಿ ಬಳಕೆಯಾಗುತ್ತಿದೆ.
ಐಪಿಎಲ್ಗೆ ಬಳಕೆ ಇಲ್ಲ
ಈ ಪಿಚ್ನಲ್ಲಿ ಸದ್ಯ ಐಪಿಎಲ್ ಪಂದ್ಯಗಳು ನಡೆಯುವುದಿಲ್ಲ. ಕೇವಲ ಅಂತಾರಾಷ್ಟ್ರೀಯ ಪಂದ್ಯಗಳಿಗೆ ಮಾತ್ರ ಸೀಮಿತಗೊಳಿಸಲಾಗಿದೆ ಎಂದು ತಿಳಿದುಬಂದಿದೆ. ದೇಶೀಯ ಪಂದ್ಯಗಳು ಲಭ್ಯವಿಲ್ಲ. ಇತ್ತೀಚೆಗೆ ಟಿ20 ಹಾಗೂ ಏಕದಿನ ಪಂದ್ಯಗಳಿಗೆ ಹೈಬ್ರಿಡ್ ಪಿಚ್‌ಗಳ ಬಳಕೆಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ (ಐಸಿಸಿ) ಒಪ್ಪಿಗೆ ನೀಡಿತ್ತು. ಹೈಬ್ರಿಡ್ ಪಿಚ್‌ಗಳ ಪರಿಚಯದಿಂದ ಭಾರತೀಯ ಕ್ರಿಕೆಟ್‌ನಲ್ಲಿ ಹೊಸ ಕ್ರಾಂತಿಯಾಗುವುದಂತು ನಿಜ.
ಇದನ್ನೂ ಓದಿ IPL 2024: ಬಸ್ ಕಂಡಕ್ಟರ್‌ಗಳಿಗೆ ವಿಶೇಷ ಉಡುಗೊರೆ ನೀಡಿದ ಚೆನ್ನೈ ಸೂಪರ್ ಕಿಂಗ್ಸ್
ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಶನ್ ಸ್ಟೇಡಿಯಂ (ಎಚ್‌ಪಿಸಿಎ) ಪ್ರಕೃತಿಯ ಅತ್ಯಂತ ರಮಣೀಯ ಸ್ಟೇಡಿಯಂ ಆಗಿದ್ದು, ಹಿಮಾಲಯ ಶ್ರೇಣಿಯಲ್ಲಿ ತಲೆಯೆತ್ತಿ ನಿಂತಿದೆ. ಸಮುದ್ರ ಮಟ್ಟದಿಂದ 1,317 ಮೀ. ಎತ್ತರದಲ್ಲಿದೆ. ಅಡಿಲೇಡ್ ಓವಲ್, ನ್ಯೂಜಿಲ್ಯಾಂಡ್ ಸ್ಟೇಡಿಯಂಗಳಂತೆ ಇದು ಕೂಡ ಚಿತ್ರಸದೃಶವಾಗಿದೆ. 23 ಸಾವಿರದಷ್ಟು ವೀಕ್ಷಕರ ಸಾಮರ್ಥ್ಯ ಹೊಂದಿರುವ ಈ ಸ್ಟೇಡಿಯಂ ಪ್ರಕೃತಿಗೆ ತೆರೆದುಕೊಂಡಿದೆ. ಹೀಗಾಗಿ ಇಲ್ಲಿ ಸದಾ ಗಾಳಿ ಬೀಸುತ್ತಲೇ ಇರುತ್ತದೆ. ಈ ಕಾರಣಕ್ಕಾಗಿಯೇ ಇದು ಪೇಸ್ ಬೌಲಿಂಗ್ ಸ್ವರ್ಗವೆನಿಸಿದೆ.