ರಾಂಚಿ: ಚಂದ್ರಯಾನ-3(Chandrayaan 3) ಲ್ಯಾಂಡರ್ ಮಾಡ್ಯೂಲ್ ಚಂದ್ರನ ಮೇಲೆ ಬುಧವಾರ ಸಂಜೆ ಯಶಸ್ವಿಯಾಗಿ ಇಳಿದಿದೆ. ಈ ಐತಿಹಾಸಿಕ ಕ್ಷಣವನ್ನು ಪ್ರತಿಯೊಬ್ಬ ಭಾರತೀಯನು ಸಂಭ್ರಮಿಸಿ ಇಸ್ರೋದ ಛಲಕ್ಕೆ ಸಲಾಂ ಹೊಡೆದಿದ್ದಾರೆ. ಈ ಸಾಧನೆಯಿಂದ ಭಾರತದ ವೈಜ್ಞಾನಿಕ ಶಕ್ತಿಯ ಅನಾವರಣವಾಗಿ ಜಗತ್ತಿಗೆ ಮತ್ತೊಮ್ಮೆ ಬೆಳಕು ಚಲ್ಲಿದೆ. ಇಸ್ರೋದ ಸಾಧನೆಯನ್ನು ಭಾರತೀಯ ಕ್ರಿಕೆಟಿಗರು ಸಂಭ್ರಮಿಸಿದ್ದಾರೆ. ಮಹೇಂದ್ರ ಸಿಂಗ್ ಧೋನಿ(ms dhoni) ಮತ್ತು ಅವರ ಪುತ್ರಿ ಝಿವಾ(ziva dhoni) ಲ್ಯಾಂಡರ್ ಸಾಫ್ಟ್ ಲ್ಯಾಂಡಿಂಗ್ ಆಗುತ್ತಿರುವ ಐತಿಹಾಸಿಕ ಕ್ಷಣವನ್ನು ನೋಡಿ ಸಂಭ್ರಮಿಸಿದ ವಿಡಿಯೊ ವೈರಲ್(viral video) ಆಗಿದೆ.
ನಾಲ್ಕು ವರ್ಷಗಳಲ್ಲಿ ಇಸ್ರೋದ ಎರಡನೇ ಪ್ರಯತ್ನದಲ್ಲಿ ಚಂದ್ರಯಾನ-3 ಮಿಷನ್ ಚಂದ್ರನ ಮೇಲೆ ಸ್ಪರ್ಶಿಸುವಲ್ಲಿ ಮತ್ತು ರೋಬೋಟಿಕ್ ಲೂನಾರ್ ರೋವರ್ ಲ್ಯಾಂಡಿಂಗ್ ಮಾಡುವಲ್ಲಿ ಯಶಸ್ವಿಯಾಗಿದೆ. ಯುಎಸ್ ನಂತರ ಚಂದ್ರನ ಮೇಲ್ಮೈಯಲ್ಲಿ ಸಾಫ್ಟ್ ಲ್ಯಾಂಡಿಂಗ್ ತಂತ್ರಜ್ಞಾನ ಯಶಸ್ಸು ಪಡೆದುಕೊಂಡ ನಾಲ್ಕನೇ ದೇಶ ಭಾರತವಾಗಿದೆ. ಚೀನಾ ಮತ್ತು ಹಿಂದಿನ ಸೋವಿಯತ್ ಒಕ್ಕೂಟ ಯಶಸ್ವಿಯಾಗಿದ್ದವು. ಆದರೆ ಚಂದ್ರನ ದಕ್ಷಿಣ ಧ್ರುವದಲ್ಲಿ (Moon South Pole) ಈವರೆಗೂ ಯಾವುದೇ ರಾಷ್ಟ್ರವು ಇಂಥ ಸಾಧನೆ ಮಾಡಲು ಸಾಧ್ಯವಾಗದನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಸಾಧಿಸಿ ತೋರಿಸಿದೆ.
ಕುಣಿದು ಕುಪ್ಪಳಿಸಿದ ಧೋನಿ ಪುತ್ರಿ
ಲ್ಯಾಂಡರ್ ಸಾಫ್ಟ್ ಲ್ಯಾಂಡಿಂಗ್ ಆಗುತ್ತಿದ್ದಂತೆ ಭಾರತಕ್ಕೆ ಎರಡು ವಿಶ್ವಕಪ್ ಗೆದ್ದು ಕೊಟ್ಟ ನಾಯಕ ಎಂ. ಎಸ್ ಧೋನಿ ಹಾಗೂ ಅವರ ಪುತ್ರಿ ಝಿವಾ ಟಿವಿಯಲ್ಲಿ ಈ ದೃಶ್ಯವನ್ನು ನೋಡಿ ಸಂಭ್ರಮಿಸಿದ್ದಾರೆ. ಇದನ್ನು ಧೋನಿ ಪತ್ನಿ ಸಾಕ್ಷಿ ವಿಡಿಯೋ ಮಾಡಿ ಪೋಸ್ಟ್ ಮಾಡಿದ್ದಾರೆ. ಝಿವಾ ಚಂದ್ರಯಾನ 3 ಯಶಸ್ಸನ್ನು ಚಪ್ಪಾಳೆ ತಟ್ಟುತ್ತಾ ಕುಣಿದು ಸಂಭ್ರಮಿಸಿದ್ದಾಳೆ. ಈ ವಿಡಿಯೊ ವೈರಲ್ ಆಗಿದೆ.
ಧೋನಿ ಅವರು ಲ್ಯಾಂಡರ್ ಸಾಫ್ಟ್ ಲ್ಯಾಂಡಿಂಗ್ ವೀಕ್ಷಿಸುತ್ತಿರುವುದು
ಐರ್ಲೆಂಡ್ನಲ್ಲಿಯೂ ಟೀಮ್ ಇಂಡಿಯಾ ಆಟಗಾರರ ಸಂಭ್ರಮ
ಐರ್ಲೆಂಡ್ ಪ್ರವಾಸದಲ್ಲಿದ್ದ ಟೀಮ್ ಇಂಡಿಯಾ ಆಟಗಾರರಿಗೆ ಲ್ಯಾಂಡರ್ ಸಾಫ್ಟ್ ಲ್ಯಾಂಡಿಂಗ್ ಆಗುತ್ತಿರುವ ಐತಿಹಾಸಿಕ ಕ್ಷಣವನ್ನು ನೋಡಲು ಬಿಸಿಸಿಐ ವಿಶೇಷ ಟಿವಿ ವ್ಯವಸ್ಥೆ ಮಾಡಿತ್ತು. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಯಶಸ್ಸು ಕಾಣುತ್ತಿದ್ದಂತೆ ಎಲ್ಲ ಭಾರತೀಯ ಆಟಗಾರರು(Team India) ಚಪ್ಪಾಳೆ ತಟ್ಟಿ ಖುಷಿಯನ್ನು ಸಂಭ್ರಮಿಸಿದ್ದರು. ಈ ವಿಡಿಯೊವನ್ನು ಬಿಸಿಸಿಐ(BCCI) ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡು ಮಿಷನ್ ಸಕ್ಸಸ್ ಎಂದು ಬರೆದುಕೊಂಡಿದೆ.
ಇದನ್ನೂ ಓದಿ Chandrayaan 3: 14 ದಿನಗಳ ನಂತರ ಭೂಮಿಗೆ ಮರಳಲಿವೆಯೇ ವಿಕ್ರಮ್, ಪ್ರಗ್ಯಾನ್?
ಟ್ವೀಟ್ ಮೂಲಕ ಚಂದ್ರಯಾನ-3 ಯಶಸ್ವಿ ಸಂಭ್ರಮಿಸಿದ ಕ್ರಿಕೆಟಿಗರು
ಚಂದ್ರನ ದಕ್ಷಿಣ ಧ್ರುವದಲ್ಲಿ (Moon South Pole) ಈವರೆಗೂ ಯಾವುದೇ ರಾಷ್ಟ್ರವು ಇಂಥ ಸಾಧನೆ ಮಾಡಲು ಸಾಧ್ಯವಾಗದನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಸಾಧಿಸಿ ತೋರಿಸಿದೆ. ಈ ಮೂಲಕ ಹೊಸ ಇತಿಹಾಸ ಸೃಷ್ಟಿಸಿದೆ. ಹಾಗಾಗಿ, ಭಾರತದ ಈ ಸಾಧನೆಯು ವಿಶೇಷ ಮನ್ನಣೆಗೆ ಪಾತ್ರವಾಗಿದೆ. ಅಲ್ಲದೇ, ಈ ಸಕ್ಸೆಸ್‌ನೊಂದಿಗೆ ಭಾರತವು (India) ಅಮೆರಿಕ (America), ರಷ್ಯಾ (Russia) ಮತ್ತು ಚೀನಾ (China) ರಾಷ್ಟ್ರಗಳ ಸಾಲಿಗೆ ಸೇರ್ಪಡೆಯಾಗಿದೆ. ಈ ಸಂಭ್ರಮ ಕ್ಷಣವನ್ನು ಸಚಿನ್ ತೆಂಡೂಲ್ಕರ್, ವಿರೇಂದ್ರ ಸೆಹವಾಗ್, ಗೌತಮ್ ಗಂಭೀರ್, ಯುವರಾಜ್ ಸಿಂಗ್ ಸೇರಿ ಹಲವು ಕ್ರಿಕೆಟಿಗರು ಟ್ವೀಟ್ ಮೂಲಕ ಸಂಭ್ರಮಿಸಿದ್ದಾರೆ. ಭಾರತದ ಹೆಸರು ಚಂದಿರನ ಅಂಗಳದಲ್ಲಿ ಸ್ವರ್ಣಕ್ಷರಗಳಲ್ಲಿ ಬರೆದಿಡಲಾಗುತ್ತದೆ ಎಂದು ಸಂಭ್ರಮಿಸಿದ್ದಾರೆ.
“ನಾವು ಸೂರ್ಯಾಸ್ತವನ್ನು ಸಮೀಪಿಸುತ್ತಿದ್ದಂತೆ ಚಂದ್ರನ ಅಂಗಳಕ್ಕೆ ನೌಕೆಯನ್ನು ಇಳಿಸಿದ್ದೇವೆ. ಎಂತಹ ವೈಭವದ ಕ್ಷಣ. ಪ್ರತಿ ಹಿನ್ನಡೆಯ ನಂತರ ಬಲವಾದ ಪುನರಾಗಮನವಾಗಿದೆ ಎಂದು ಸಾಬೀತುಪಡಿಸುತ್ತದೆ. ಭಾರತವು ವಿಫಲವಾಗಬೇಕೆಂದು ಬಯಸಿದ ಎಲ್ಲರಿಗೂ ಹಿನ್ನಡೆಯಾಗಿದೆ. ಭಾರತದ ಶಕ್ತಿ ಏನೆಂಬುದು ಇಡೀ ಜಗತ್ತಿಗೆ ಸಾಭೀತಾಗಿದೆ. ಭಾರತೀಯನಾಗಿ ಅತ್ಯಂತ ಹೆಮ್ಮೆ ಪಡುವ ದಿನಗಳಲ್ಲಿ ಇದು ಕೂಡ ಒಂದಾಗಿದೆ.’ ಎಂದು ಸೆಹವಾಗ್(virender sehwag) ಟ್ವಿಟ್ ಮಾಡಿದ್ದಾರೆ.
“ಪ್ರತಿ ಹಾರ್ಡ್ ಲ್ಯಾಂಡಿಂಗ್‌ನಲ್ಲಿ ಪಾಠಗಳಿವೆ, ಅದು ನಮ್ಮನ್ನು ಮೃದುವಾದ ಲ್ಯಾಂಡಿಂಗ್‌ನ ಹತ್ತಿರಕ್ಕೆ ಕೊಂಡೊಯ್ಯುತ್ತದೆ- ಚಂದ್ರನ ಮೇಲೆ ಮತ್ತು ಜೀವನದ ಮೇಲೆಯೂ, ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಮಹತ್ವಾಕಾಂಕ್ಷಿ ಯೋಜನೆಯಾದ ಚಂದ್ರಯಾನ-3 (Chandrayana 3) ಯಶಸ್ವಿಯಾಗಿದೆ. ಇಸ್ರೋ ಮುಖ್ಯಸ್ಥ ಬಿ.ಸೋಮನಾಥ್ ಅವರ ತಂಡಕ್ಕೆ ಅಭಿನಂದನೆಗಳು” ಎಂದು ಸಚಿನ್ ತೆಂಡೂಲ್ಕರ್(sachin tendulkar) ಟ್ವೀಟ್ ಮಾಡಿದ್ದಾರೆ.