ದುಬೈ : ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ (Virat kohli), ಪಾಕಿಸ್ತಾನ ವಿರುದ್ಧದ ಏಷ್ಯಾ ಕಪ್ ಸೂಪರ್- ೪ ಹಂತದ ಪಂದ್ಯದಲ್ಲಿ ಅರ್ಧ ಶತಕ (೬೦) ಬಾರಿಸಿ ಫಾರ್ಮ್‌ಗೆ ಮರಳಿದ್ದಾರೆ. ಅಭಿಮಾನಿಗಳೆಲ್ಲರೂ “ಕಿಂಗ್ ಇಸ್ ಬ್ಯಾಕ್’ ಎಂದೇ ಸಂಭ್ರಮಪಡುತ್ತಿದ್ದಾರೆ. ಆದರೆ, ಫಾರ್ಮ್ ಕಳೆದುಕೊಂಡಾಗ ಅವರು ಎದುರಿಸಿದ ನಾನಾ ಬಗೆಯ ಟೀಕೆಗಳು ಅವರ ಸ್ಮರಣೆಯಲ್ಲಿವೆ. ಅಂತೆಯೇ ಅವರು ಭಾನುವಾರದ ಪಂದ್ಯದ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ, ಟಿವಿಯಲ್ಲಿ ಕುಳಿತು ಕೊಹ್ಲಿಗೆ ಸಲಹೆ ಕೊಟ್ಟವರಿಗೆ ಪರೋಕ್ಷವಾಗಿ ಉತ್ತರ ಕೊಟ್ಟಿದ್ದಾರೆ.
oಕಷ್ಟಕಾಲದಲ್ಲಿ ಕೆಲವೇ ಮಂದಿ ಜತೆಗಿರುತ್ತಾರೆ. ಉಳಿದವರೆಲ್ಲರೂ ಟೀಕೆ ಮಾಡುತ್ತಾರೆ ಎಂಬುದು ಅವರ ಮಾತಿನ ಮರ್ಮವಾಗಿತ್ತು. ಅದಕ್ಕವರು ಧೋನಿ ಹಾಗೂ ತಮ್ಮ ಸಂಬಂಧವನ್ನೂ ಉದಾಹರಣೆಯಾಗಿ ಕೊಟ್ಟರು. “ನಾನು ಟೆಸ್ಟ್ ತಂಡದ ನಾಯಕತ್ವ ತೊರೆದಾಗ ನನಗೆ ವೈಯಕ್ತಿವಾಗಿ ಸಂದೇಶ ಕಳುಹಿಸಿದವರು ಮಹೇಂದ್ರ ಸಿಂಗ್ ಧೋನಿ ಮಾತ್ರ. ಬೇರೆ ಯಾರೂ ಮೆಸೇಜ್ ಮಾಡಿಲ್ಲ. ಎಲ್ಲರ ಬಳಿವೂ ನನ್ನ ನಂಬರ್ ಇದೆ. ಆದರೂ, ಪ್ರತಿಕ್ರಿಯೆ ಕೊಟ್ಟಿಲ್ಲ. ಅವರೆಲ್ಲರೂ ಟಿವಿಯಲ್ಲಿ ಕುಳಿತು ನನಗೆ ಸಲಹೆಗಳನ್ನು ಕೊಡುತ್ತಿದ್ದರು,” ಎಂದು ಪತ್ರಿಕಾಗೋಷ್ಠಿಯಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.
ಟೀಮ್ ಇಂಡಿಯಾದ ಮಾಜಿ ನಾಯಕರುಗಳಾದ ವಿರಾಟ್ ಕೊಹ್ಲಿ ಹಾಗೂ ಮಹೇಂದ್ರ ಸಿಂಗ್ ಧೋನಿ ನಡುವೆ ಆತ್ಮೀಯ ಬಂಧವಿದೆ. ವಿರಾಟ್ ಕೊಹ್ಲಿ ಕೆಲವು ದಿನಗಳ ಹಿಂದೆ ಅದನ್ನು ಟ್ವೀಟ್ ಮೂಲಕ ಪ್ರಸ್ತುತಪಡಿಸಿದ್ದರು. ಆಸ್ಟ್ರೇಲಿಯಾ ತಂಡದ ವಿರುದ್ಧದ ತಮ್ಮ ಜತೆಯಾಟದ ಚಿತ್ರವನ್ನು ಟ್ವೀಟ್ ಮಾಡಿದ್ದರು. ಇದೀಗ ನಾಯಕತ್ವವನ್ನು ಬಿಟ್ಟುಕೊಡುತ್ತಿದ್ದ ಸಂದರ್ಭದಲ್ಲಿ ಧೋನಿ ತೋರಿದ ಕಾಳಜಿಯನ್ನೂ ವಿವರಿಸಿದ್ದಾರೆ.
ನೇರವಾಗಿ ಹೇಳಿದರೆ ಅನುಕೂಲ
ವಿರಾಟ್ ಕೊಹ್ಲಿ ಫಾರ್ಮ್ ಕಳೆದುಕೊಂಡ ಸಂದರ್ಭದಲ್ಲಿ ಸಾಕಷ್ಟು ಮಾಜಿ ಕ್ರಿಕೆಟಿಗರು ಟಿವಿ ಚರ್ಚೆಯಲ್ಲಿ ಕೊಹ್ಲಿಯ ಕುರಿತು ಮಾತನಾಡಿದ್ದರು. ಇದು ಕೊಹ್ಲಿಗೆ ಕಿರಿಕಿರಿ ಉಂಟು ಮಾಡಿತ್ತು. ಪತ್ರಿಕಾಗೋಷ್ಠಿಯಲ್ಲಿ ವಿರಾಟ್ ಅಂಥವರಿಗೂ ಉತ್ತರ ಕೊಟ್ಟಿದ್ದಾರೆ.
“ಟಿವಿ ಮುಂದೆ ಕುಳಿತು ಅಭಿಪ್ರಾಯ ಹೇಳುವ ದೊಡ್ಡ ತಜ್ಞರ ಗುಂಪೇ ಇದೆ. ಆದರೆ, ಅವರಿಗೆ ಹೇಳಲು ಬಯಸುವುದು ಏನೆಂದರೆ ನನಗೆ ಸಹಾಯ ಮಾಡಬೇಕು ಎಂದು ಅನಿಸಿದರೆ ನೇರವಾಗಿ ಬಂದು ಹೇಳಿ. ಅದರಿಂದ ಪ್ರಯೋಜನವಿದೆ. ಜಗತ್ತಿನ ಮುಂದೆ ಕುಳಿತು ಸಲಹೆಗಳನ್ನು ಕೊಡುತ್ತಿದ್ದರೆ ನಾನು ಅದನ್ನು ಪರಿಗಣಿಸುವುದಿಲ್ಲ. ಅದರಿಂದ ನನಗೆ ಸಹಾಯವಾಗುವುದಾದರೆ ಖಂಡಿತಾ ಸ್ವೀಕರಿಸುವೆ,” ಎಂದು ಕೊಹ್ಲಿ ಹೇಳಿದ್ದಾರೆ.
oಇದನ್ನೂ ಓದಿ | Virat kohli | ಟಿ20 ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ಅರ್ಧ ಶತಕಗಳು ಬಾರಿಸಿದ ವಿರಾಟ್ ಕೊಹ್ಲಿ