ಚೆನ್ನೈ : ಮ್ಯಾಚ್ ಫಿಕ್ಸಿಂಗ್ ಪ್ರಕರಣದಲ್ಲಿ ತಮ್ಮ ಹೆಸರನ್ನು ಉಲ್ಲೇಖ ಮಾಡಬಾರದು ಎಂಬ ಸುಪ್ರೀಮ್ ಕೋರ್ಟ್ ಆದೇಶದ ಹೊರತಾಗಿಯೂ ಅದನ್ನು ಉಲ್ಲಂಘಿಸುತ್ತಿದ್ದಾರೆ ಎಂದು ಆರೋಪಿಸಿ ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಚೆನ್ನೈ ಹೈಕೋರ್ಟ್‌ನಲ್ಲಿ ಐಪಿಎಸ್ ಅಧಿಕಾರಿಯೊಬ್ಬರ ವಿರುದ್ಧ ನ್ಯಾಯಾಂಗ ನಿಂದನೆ ದಾವೆ ಹೂಡಿದ್ದಾರೆ.
ಮ್ಯಾಚ್ ಫಿಕ್ಸಿಂಗ್ ಹಾಗೂ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ತಮ್ಮ ಹೆಸರನ್ನು ಉಲ್ಲೇಖ ಮಾಡದಂತೆ ಐಪಿಎಸ್ ಅಧಿಕಾರಿ ಜಿ ಸಂಪತ್ ಕುಮಾರ್ ಅವರಿಗೆ ಸೂಚನೆ ನೀಡುವಂತೆ ಮಹೇಂದ್ರ ಸಿಂಗ್ ಧೋನಿ ಸುಪ್ರೀಮ್ ಕೋರ್ಟ್ ಮೆಟ್ಟಿಲೇರಿದ್ದರು. ಇದೇ ವೇಳೆ ೧೦೦ ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಅಂತೆಯೇ ೨೦೧೪ರ ಮಾರ್ಚ್ ೧೪ರಂದು ಧೋನಿ ವಿರುದ್ಧ ಮಾನಹಾನಿಕರ ಹೇಳಿಕೆ ನೀಡದಂತೆ ಸಂಪತ್ ಕುಮಾರ್ ಅವರಿಗೆ ಕೋರ್ಟ್ ಸೂಚನೆ ಕೊಟ್ಟಿತ್ತು.
ಸೂಚನೆ ಹೊರತಾಗಿಯೂ ಸಂಪತ್ ಕುಮಾರ್ ಸುಪ್ರೀಮ್ ಕೋರ್ಟ್‌ಗೆ ಅಪಿಡವಿಟ್ ಸಲ್ಲಿಕೆ ಮಾಡಿದ್ದರು. ಅದರಲ್ಲಿ ಧೋನಿ ಹಾಗೂ ಕೋರ್ಟ್ ಆದೇಶದ ವಿರುದ್ಧದ ಹೇಳಿಕೆಗಳಿದ್ದವು. ಇದನ್ನು ಪ್ರಶ್ನಿಸಿ ಮಹೇಂದ್ರ ಸಿಂಗ್ ಧೋನಿ ನ್ಯಾಯಾಂಗ ನಿಂದನೆ ಆದೇಶ ಹೊರಡಿಸಿದ್ದಾರೆ.
ಐಪಿಎಸ್ ಅಧಿಕಾರಿ ಸಂಪತ್ ಕುಮಾರ್ ಅವರು ಐಪಿಎಲ್‌ನಲ್ಲಿ ನಡೆದಿದೆ ಎನ್ನಲಾದ ಸ್ಪಾಟ್ ಫಿಕ್ಸಿಂಗ್ ಹಾಗೂ ಮ್ಯಾಚ್ ಫಿಕ್ಸಿಂಗ್ ಪ್ರಕರಣದ ವಿಚಾರಣೆ ನಡೆಸಿದ್ದರು.
ಇದನ್ನೂ ಓದಿ | IND vs SA | ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿಯ ದಾಖಲೆಯನ್ನು ಮುರಿದ ಹಿಟ್ಟರ್ ರೋಹಿತ್!