Site icon Vistara News

MS Dhoni : ಐಪಿಎಸ್​ ಅಧಿಕಾರಿ ವಿರುದ್ಧದ ಕೋರ್ಟ್​ ಕೇಸಲ್ಲಿ ಧೋನಿಗೆ ಮೊದಲ ಜಯ

MS Dhoni

#image_title

ಚೆನ್ನೈ: ತಮಿಳುನಾಡು ಕೇಡರ್​ ಐಪಿಎಸ್ ಅಧಿಕಾರಿ ಸಂಪತ್ ಕುಮಾರ್ ವಿರುದ್ಧ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ.ಎಸ್.ಧೋನಿ (MS Dhoni) ಸಲ್ಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆಯನ್ನು ನಡೆಸಲು ಮದ್ರಾಸ್ ಹೈಕೋರ್ಟ್ ಸೋಮವಾರ ಸಮ್ಮತಿಸಿದೆ. ಈ ಮೂಲಕ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಗೆ ಕೋರ್ಟ್​ ಕೇಸಲ್ಲಿ ಮೊದಲ ಜಯ ಸಿಕ್ಕಿದೆ. ಇದು 100 ಕೋಟಿ ರೂಪಾಯಿ ಮೊತ್ತದ ಮಾನನಷ್ಟ ಮೊಕದ್ದಮೆಯೂ ಹೌದು. ನ್ಯಾಯಾಲಯವು ನ್ಯಾಯಾಂಗ ನಿಂದನೆ ಪ್ರಕರಣಗಳ ವಿಚಾರಣೆಯನ್ನು ಗುರುವಾರ ಮಾತ್ರ ನಡೆಸುವುದರಿಂದ ಜೂನ್ 15ರ ಗುರುವಾರದಂದು ಅರ್ಜಿ ವಿಚಾರಣೆ ನಡೆಯಲಿದೆ.

2013ರಲ್ಲಿ ಕುಖ್ಯಾತ ಐಪಿಎಲ್ ಬೆಟ್ಟಿಂಗ್ ಪ್ರಕರಣದಲ್ಲಿ ತಮ್ಮನ್ನು ಹೆಸರಿಸಿದ್ದಕ್ಕಾಗಿ ಧೋನಿ 100 ಕೋಟಿ ರೂ.ಗಳ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಆದಾಗ್ಯೂ ಐಪಿಎಸ್ ಅಧಿಕಾರಿ ಮತ್ತೊಂದು ಬಾರಿ ಧೋನಿಯ ಹೆಸರನ್ನು ಉಲ್ಲೇಖಿಸಿದ್ದರು. ಇದನ್ನು ವಿರೋಧಿಸಿ ಧೋನಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದಾರೆ. ಅದರ ವಿಚಾರಣೆಗೆ ಸೋಮವಾರ ಕೋರ್ಟ್​ ಸಮ್ಮತಿಸಿದೆ.

ತಮಿಳುನಾಡಿನ ಅಡ್ವೊಕೇಟ್ ಜನರಲ್ ಆರ್.ಷಣ್ಮುಗಸುಂದರಂ ಅವರು 41 ವರ್ಷದ ಧೋನಿಗೆ ಅರ್ಜಿ ಸಲ್ಲಿಸಲು ಅನುಮತಿ ನೀಡಿದ್ದಾರೆ ಎಂದು ವರದಿಯಾಗಿದೆ. ಸಂಪತ್ ಕುಮಾರ್ ಅವರ ಹೇಳಿಕೆಯು ನ್ಯಾಯಾಲಯದ ಕಲಾಪಗಳನ್ನು ಅವಮಾನಿಸುತ್ತದೆ ಎಂದು ಧೋನಿ ಹೇಳಿದ್ದಾರೆ.

2014ರ ಐಪಿಎಲ್ ಆವೃತ್ತಿಯಲ್ಲಿ ಬೆಟ್ಟಿಂಗ್​ ಹಾಗೂ ಸ್ಪಾಟ್​ ಫಿಕ್ಸಿಂಗ್ ನಡೆದಿತ್ತು ಎಂಬ ಆರೋಪಗಳು ಕೇಳಿ ಬಂದಿದ್ದವು. ಆದರ ಪರಿಣಾಮವಾಗಿ 2016 ಮತ್ತು 2017ರ ಐಪಿಎಲ್ ಟೂರ್ನಿಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡದ ಹಲವು ಆಟಗಾರರು ನಿಷೇಧಕ್ಕೆ ಒಳಗಾಗಿದ್ದರು.

ಐದನೇ ಐಪಿಎಲ್ ಗೆದ್ದ ಧೋನಿ

ಕೆಲವು ದಿನಗಳ ಹಿಂದೆ ಎಂಎಸ್ ಧೋನಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಇತಿಹಾಸದಲ್ಲಿ ಶ್ರೇಷ್ಠ ನಾಯಕರಲ್ಲಿ ಒಬ್ಬರೆಂಬ ಖ್ಯಾತಿ ಪಡೆದುಕೊಂಡರು. ಐಪಿಎಲ್ 2022ರ ಅಂಕಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿದ್ದ ಚೆನ್ನೈ ಸೂಪರ್ ಕಿಂಗ್ಸ್ 2023ರಲ್ಲಿ ಚಾಂಪಿಯನ್​ ಆಗಿ ಹೊರಹೊಮ್ಮಿತು. ಪಂದ್ಯಾವಳಿಯ 16ನೇ ಆವೃತ್ತಿಯಲ್ಲಿ ಸಂಪೂರ್ಣ ಪಾರಮ್ಯ ಮೆರೆದ ಚೆನ್ನೈ ಚಾಂಪಿಯನ್​ಪಟ್ಟ ಅಲಂಕರಿಸಿತು.

ಇದನ್ನೂ ಓದಿ : WTC Final 2023 : ಐಪಿಎಲ್​ ದುಡ್ಡಿಗಿಂತ ದೇಶವೇ ದೊಡ್ಡದು; ಚರ್ಚೆ ಹುಟ್ಟು ಹಾಕಿದ ಆಸೀಸ್ ವೇಗಿಯ ಹೇಳಿಕೆ!

ಲೀಗ್​ ಹಂತd 14 ಪಂದ್ಯಗಳಲ್ಲಿ 17 ಅಂಕಗಳನ್ನು ಗಳಿಸಿದ್ದ ಚೆನ್ನೈ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿತ್ತು. ಕ್ವಾಲಿಫೈಯರ್ 1ರಲ್ಲಿ ಗುಜರಾತ್ ಟೈಟನ್ಸ್ ತಂಡವನ್ನು ಮಣಿಸಿ ನಾಕೌಟ್ ಹಂತಕ್ಕೆ ಅರ್ಹತೆ ಪಡೆದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಚೆನ್ನೈ ಪಾತ್ರವಾಗಿತ್ತು.

ಫೈನಲ್​ನಲ್ಲಿ ಅವರು ಮತ್ತೊಮ್ಮೆ ಹಾರ್ದಿಕ್ ಪಾಂಡ್ಯ ನೇತೃತ್ವದ ತಂಡವನ್ನು ಎದುರಿಸಿದ್ದರು. ಮೇ 29ರಂದು ಫೈನಲ್​ ಪಂದ್ಯ ನಡೆದಿತ್ತು. 15 ಓವರ್​​ಗಳಲ್ಲಿ 171 ರನ್​ಗಳನ್ನು ಪೇರಿಸುವ ಡಿಎಲ್ಎಸ್ ಗುರಿಯನ್ನು ಬೆನ್ನಟ್ಟಿದ ಚೆನ್ನೈ ಐಪಿಎಲ್ 2023 ರ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.

Exit mobile version