Site icon Vistara News

IND vs ENG: ಕಳಪೆ ಪ್ರದರ್ಶನ ತೋರುತ್ತಿರುವ ಭರತ್​ಗೆ ಮುಂದಿನ ಪಂದ್ಯದಿಂದ ಗೇಟ್​ ಪಾಸ್​ ಖಚಿತ!

Dhruv Jurel - KS Bharat

ಬೆಂಗಳೂರು: ಟೀಮ್​ ಇಂಡಿಯಾ(IND vs ENG) ಟೆಸ್ಟ್​ ಕ್ರಿಕೆಟ್​ನಲ್ಲಿ ಹಲವು ಅವಕಾಶ ನೀಡಿದರೂ ಇದನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ವಿಫಲರಾಗುತ್ತಿರುವ ವಿಕೆಟ್​ ಕೀಪರ್​ ಕಮ್​ ಬ್ಯಾಟರ್​ ಶ್ರೀಕರ್​ ಭರತ್(KS Bharat)​ ಅವರನ್ನು ತಂಡದಿಂದ ಕೈ ಬಿಡುವಂತೆ ಅಭಿಮಾನಿಗಳು ಒತ್ತಾಯಿಸಿದ್ದಾರೆ.

ಸತತವಾಗಿ ಕಳಪೆ ಬ್ಯಾಟಿಂಗ್​ ಪ್ರದರ್ಶನ ತೋರುತ್ತಿರುವ ಭರತ್​ ಅವರನ್ನು ಮೂರನೇ ಟೆಸ್ಟ್(India Vs England 3rd Test)​ ಪಂದ್ಯದಿಂದ ಕೈ ಬಿಟ್ಟು ಅವರ ಬದಲು ಯುವ ವಿಕೆಟ್​ ಕೀಪರ್​ ಧ್ರುವ್​ ಜುರೆಲ್​ಗೆ(Dhruv Jurel) ಅವಕಾಶ ನೀಡುವಂತೆ ಟೀಮ್​ ಇಂಡಿಯಾ ಅಭಿಮಾನಿಗಳು ಬಿಸಿಸಿಐಗೆ(BCCI) ಒತ್ತಾಯಿಸಿದ್ದಾರೆ. ಅಭಿಮಾನಿಗಳ ಈ ಆಗ್ರಹ ಕೂಡ ಒಂದು ರೀತಿಯಲ್ಲಿ ಸರಿ ಇದ್ದಂತೆ ತೋರುತ್ತಿದೆ. ಏಕೆಂದರೆ ಭರತ್​ ಭಾರತ ಪರ ಇದುವರೆಗೆ 7 ಟೆಸ್ಟ್​ ಪಂದ್ಯಗಳನ್ನು ಆಡಿದ್ದರೂ ಕನಿಷ್ಠ ಒಂದೇ ಒಂದು ಅರ್ಧಶತಕ ಕೂಡ ಬಾರಿಸಿಲ್ಲ.

ಇಂಗ್ಲೆಂಡ್​ ಟೆಸ್ಟ್​ ಸರಣಿ ಆರಂಭಕ್ಕೂ ಮುನ್ನ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದಿದ್ದ ಭಾರತ ಎ ಮತ್ತು ಇಂಗ್ಲೆಂಡ್ ಲಯನ್ಸ್ (India vs England Test Series) ನಡುವಣ ಮೊದಲ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಭರತ್ 116 ರನ್​ ಬಾರಿಸಿ ಮಿಂಚಿದ್ದರು. ಹೀಗಾಗಿ ಟೆಸ್ಟ್​ ಸರಣಿಯಲ್ಲಿ ಅವರ ಮೇಲೆ ನಿರೀಕ್ಷೆಯೊಂದನ್ನು ಮಾಡಲಾಗಿತ್ತು. ಆದರೆ ಇದು ಹುಸಿಗೊಂಡಿದೆ. ಇಂಗ್ಲೆಂಡ್​ ವಿರುದ್ಧದ ಅವರು ಆಡಿದ 2 ಟೆಸ್ಟ್​ನಲ್ಲಿಯೂ ಕೂಡ ಕಳಪೆ ಪ್ರದರ್ಶನ ತೋರಿದ್ದಾರೆ.

ರಿಷಭ್​ ಪಂತ್​ ಅವರು ಕಾರು ಅಪಘಾತದಲ್ಲಿ ಗಾಯಗೊಂಡು ಚೇತರಿಕೆಯಲ್ಲಿರುವ ಕಾರಣ ಅವರ ಬದಲಿಗೆ ಭರತ್​ ಅವರಿಗೆ ಟೆಸ್ಟ್​ ಕ್ರಿಕೆಟ್​ನಲ್ಲಿ ಟೀಮ್​ ಇಂಡಿಯಾದಲ್ಲಿ ವಿಕೆಟ್​ ಕೀಪಿಂಗ್​ ಜವಾಬ್ದಾರಿ ನೀಡಲಾಗಿತ್ತು. ಆದರೆ ಅವರು ಈ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳುವಲ್ಲಿ ಎಡವಿದ್ದಾರೆ. ಮೂರನೇ ಪಂದ್ಯದಿಂದ ಅವರು ಆಡುವ ಬಳಗದಿಂದ ಡ್ರಾಪ್​ ಔಟ್​ ಆಗುವುದು ಬಹುತೇಕ ಖಚಿತ ಎನ್ನುವಂತೆ ತೋರುತ್ತಿದೆ. ಇವರ ಬದಲು ಧೃವ್​ ಜುರೆಲ್ ಆಯ್ಕೆಯಾಗಬಹುದು.

ಇದನ್ನೂ ಓದಿ IND vs ENG: ಉಳಿದ ಮೂರು ಟೆಸ್ಟ್ ಪಂದ್ಯಗಳಿಗೂ ಕೊಹ್ಲಿ, ಜಡೇಜಾ, ಶಮಿ ಅಲಭ್ಯ!

23 ವರ್ಷದ ಧೃವ್​ ಜುರೆಲ್ ಕಳೆದ ವರ್ಷದ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) ಆವೃತ್ತಿಯಲ್ಲಿ ರಾಜಸ್ಥಾನ ರಾಯಲ್ಸ್ (RR) ತಂಡದ ಪರ ಗಮನಾರ್ಹ ಪ್ರದರ್ಶನ ತೋರುವ ಮೂಲಕ ವಿಶ್ವ ಕ್ರಿಕೆಟ್‌ಗೆ ಪರಿಚಿತರಾದರು. ಇಂಪ್ಯಾಕ್ಟ್ ಪ್ಲೇಯರ್ ಆಗಿ ಹೆಚ್ಚಾಗಿ ಆಡುತ್ತಿದ್ದ ಅವರು​ 13 ಪಂದ್ಯಗಳನ್ನು ಆಡಿ 152 ರನ್​ ಬಾರಿಸಿದ್ದಾರೆ. ಜುರೆಲ್ ಟೀಮ್​ ಇಂಡಿಯಾದ ಮಾಜಿ ಆಟಗಾರ ಮಹೇಂದ್ರ ಸಿಂಗ್​ ಧೋನಿ ಅವರ ಅಪ್ಪಟ ಅಭಿಮಾನಿಯಾಗಿದ್ದಾರೆ. ಐಪಿಎಲ್​ ಆಡುವ ವೇಳೆ ಧೋನಿ ಅವರೊಂದಿಗೆ ಫೋಟೊ ಕೂಡ ತೆಗಿಸಿಕೊಂಡಿದ್ದ ಜುರೆಲ್ ತಾನು ಕೂಡ ಧೋನಿಯಂತೆ ವಿಕೆಟ್​ ಕೀಪರ್​ ಆಗಲು ಶ್ರಮಿಸುತ್ತೇನೆ ಎಂದಿದ್ದರು.

ಜುರೆಲ್ 2020ರಲ್ಲಿ ಭಾರತ ಪರ ಅಂಡರ್​-19 ವಿಶ್ವಕಪ್ ಆಡಿದ್ದರು. ಈ ಟೂರ್ನಿಯಲ್ಲಿ 6 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದ ಜುರೆಲ್, 89 ರನ್ ಗಳಿಸಿದ್ದರು. ಇದರಲ್ಲಿ ಒಂದು ಅರ್ಧಶತಕ ಒಳಗೊಂಡಿದೆ. 2022ರಲ್ಲಿ ಉತ್ತರ ಪ್ರದೇಶ ತಂಡದ ಪರ ಪ್ರಥಮ ದರ್ಜೆ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ಜುರೆಲ್​ ಇದುವರೆಗೆ ಒಟ್ಟು 15 ಪಂದ್ಯಗಳಲ್ಲಿ 46.47ರ ಸರಾಸರಿಯಲ್ಲಿ 790 ರನ್ ಗಳಿಸಿದ್ದಾರೆ. ಒಂದು ಶತಕವನ್ನೂ ಸಿಡಿಸಿದ್ದಾರೆ. ಜುರೆಲ್ ಕಳೆದ ತಿಂಗಳು ದಕ್ಷಿಣ ಆಫ್ರಿಕಾಕ್ಕೆ ಪ್ರವಾಸ ಕೈಗೊಂಡಿದ್ದ ಭಾರತ-ಎ ತಂಡದ ಭಾಗವಾಗಿದ್ದರು. ಆದರೆ, ಆಡುವ ಅವಕಾಶ ಸಿಕ್ಕಿರಲಿಲ್ಲ. ಮೂರನೇ ಪಂದ್ಯದಲ್ಲಿ ಕಣಕ್ಕಿಳಿದರೆ ಅವರು ಭಾರತ ತಂಡಕ್ಕೆ ಪದಾರ್ಪಣೆ ಮಾಡಿದಂತಾಗುತ್ತದೆ.

Exit mobile version