ನವದೆಹಲಿ: ಭಾರತದ ಭರವಸೆಯ ಲಾಂಗ್ ಜಂಪರ್ ಮುರಳಿ ಶ್ರೀಶಂಕರ್(Murali Sreeshankar) ಅವರು ಡೈಮಂಡ್ ಲೀಗ್(Diamond League) ಫೈನಲ್ ಪಂದ್ಯದಿಂದ ಹಿಂದೆ ಸರಿಸಿದ್ದಾರೆ. ಏಷ್ಯನ್ ಕ್ರೀಡಾಕೂಟದತ್ತ(Asian Games) ಗಮನಹರಿಸಲು ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಕಾಮನ್ವೆಲ್ತ್ ಗೇಮ್ಸ್ನಲ್ಲಿ ಬೆಳ್ಳಿ ಗೆದ್ದ ಸಾಧನೆ ಮಾಡಿದ್ದರು. ಇದೀಗ ಏಷ್ಯನ್ ಗೇಮ್ಸ್ನಲ್ಲಿ ಚಿನ್ನದ ಪದಕ ಗೆಲ್ಲುವ ಪಣ ತೊಟ್ಟಿರುವ ಕಾರಣ, ಸೆಪ್ಟೆಂಬರ್ 16, 17ರಂದು ಅಮೆರಿಕದ ಯೂಜಿನ್‌ನಲ್ಲಿ ನಡೆಯಲಿರುವ ಡೈಮಂಡ್ ಲೀಗ್ ಫೈನಲ್‌ನಿಂದ ಹಿಂದೆ ಸರಿದ್ದಾರೆ.
ಕಳೆದ ವಾರ (ಆಗಸ್ಟ್ 31) ನಡೆದಿದ್ದ ಮೂರನೇ ಚರಣದ ಜ್ಯೂರಿಚ್ ಡೈಮಂಡ್ ಲೀಗ್‌ನಲ್ಲಿ ಶ್ರೀಶಂಕರ್ ಅವರು 7.99 ಮೀ. ದೂರ ಜಿಗಿದು ಐದನೇ ಸ್ಥಾನ ಪಡೆದಿದ್ದರು. ಇದಕ್ಕೂ ಮುನ್ನ ನಡೆದ ಲಾಸನ್ನೆ ಚರಣದಲ್ಲಿಯೂ 7.88 ಮೀಟರ್ ಜಿಗಿತದೊಂದಿಗೆ ಐದನೇ ಸ್ಥಾನ ಪಡೆದಿದ್ದರು. ಕಳೆದ ಪ್ಯಾರಿಸ್ ಡೈಮಂಡ್ ಲೀಗ್ ಲಾಂಗ್‌ಜಂಪ್‌ನಲ್ಲಿ 8.09 ಮೀ. ದೂರದ ಸಾಧನೆಯೊಂದಿಗೆ ತೃತೀಯ ಸ್ಥಾನಿಯಾಗಿ ಫೈನಲ್ಗೆ ಪ್ರವೇಶ ಗಿಟ್ಟಿಸಿಕೊಂಡಿದ್ದರು. ನ್ಯಾಶನಲ್ ಇಂಟರ್ ಸ್ಟೇಟ್ ಆ್ಯತ್ಲೆಟಿಕ್ಸ್‌ನಲ್ಲಿ ಅತ್ಯುತ್ತಮ ವೈಯಕ್ತಿಕ ಸಾಧನೆಯನ್ನು ದಾಖಲಿಸಿ(8.42 ಮೀ.) ಮಿಂಚಿದ್ದರು.
ಇಂಗ್ಲೆಂಡ್ನ ಬರ್ಮಿಂಗ್ಹ್ಯಾಮ್ನಲ್ಲಿ ಕಳೆದ ವರ್ಷ ನಡೆದ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಪುರುಷರ ಲಾಂಗ್ ಜಂಪ್ನಲ್ಲಿ ಮುರಳಿ ಶ್ರೀಶಂಕರ್ ಅವರು ಬೆಳ್ಳಿ ಪದಕ ಗೆದ್ದುಕೊಂಡಿದ್ದರು. ಈ ಮೂಲಕ ಭಾರತಕ್ಕೆ ಐತಿಹಾಸಿಕ ಪದಕ ತಂದುಕೊಟ್ಟಿದ್ದರು. ಮುರಳಿ ಶ್ರೀಶಂಕರ್ ಗೆ ಚಿನ್ನ ಗೆಲ್ಲುವ ಅವಕಾಶವಿತ್ತು. ಚಿನ್ನದ ಪದಕ ಗೆದ್ದ ಬಹಾಮಾಸ್ ನ ಲಕ್ವಾನ್ ನಾಯರ್ನ್ ಕೂಡಾ 8.08 ಮೀಟರ್ ಜಂಪ್ ಮಾಡಿದ್ದರು. ನಿಯಮದ ಪ್ರಕಾರ ಇಬ್ಬರ ಬೆಸ್ಟ್ ಜಂಪ್ ಟೈ ಆದರೆ ಅವರ ಸೆಕೆಂಡ್ ಬೆಸ್ಟ್ ಜಂಪ್ ಆಧಾರದಲ್ಲಿ ವಿಜೇತರನ್ನು ಘೋಷಣೆ ಮಾಡಲಾಗುತ್ತದೆ. ಅದರಂತೆ ಮುರಳಿ ಶ್ರೀಶಂಕರ್ ಅವರ ಸೆಕೆಂಡ್ ಬೆಸ್ಟ್ ಜಂಪ್ 7.84 ಆಗಿದ್ದರೆ, ಲಕ್ವಾನ್ ನಾಯರ್ನ್ ಅವರು 7.98 ಮೀ ಜಿಗಿದಿದ್ದರು. ಹೀಗಾಗಿ ಅವರಿಗೆ ಸ್ವರ್ಣ ಪದಕ ಪ್ರಾಪ್ತವಾಗಿತ್ತು.
ಇದನ್ನೂ ಓದಿ Diamond League: ಸೆಂಟಿಮೀಟರ್ ಅಂತರದಲ್ಲಿ ನೀರಜ್ ಕೈತಪ್ಪಿದ ಚಿನ್ನ; ಲಾಂಗ್ ಜಂಪ್ನಲ್ಲಿ ಶ್ರೀಶಂಕರ್ಗೆ 5ನೇ ಸ್ಥಾನ
ಫೈನಲ್ನಲ್ಲಿ ನೀರಜ್ ಮೇಲೆ ಭರವಸೆ
ನೀರಜ್ ಚೋಪ್ರಾ(neeraj chopra) ಈ ಟೂರ್ನಿಯಲ್ಲಿ ಮೇ 5ರಂದು ದೋಹಾದಲ್ಲಿ ನಡೆದಿದ್ದ ಡೈಮಂಡ್ ಲೀಗ್‌ನಲ್ಲಿ(Diamond League) ಮತ್ತು ಲಾಸನ್ನೆ ಚರಣರದಲ್ಲಿಯೂ ಚಿನ್ನದ ಪದಕ್ಕೆ ಕೊರಳೊಡ್ಡಿ ಸತತ 2 ಚಿನ್ನ ಗೆದ್ದ ಸಾಧನೆ ಮಾಡಿದ್ದರು. ಆದರೆ ಜ್ಯೂರಿಚ್‌ನಲ್ಲಿ ನಡೆದ ಮೂರನೇ ಚರಣರದಲ್ಲಿ ಬೆಳ್ಳಿಗೆ ತೃಪ್ತಿಪಟ್ಟರು. ಆದರೆ ಫೈನಲ್ನಲ್ಲಿ ಚಿನ್ನ ಗೆಲ್ಲುವ ವಿಶ್ವಾಸದಲ್ಲಿದ್ದಾರೆ. ವಿಶ್ವ ಚಾಂಪಿಯನ್ಶಿಪ್ನಲ್ಲಿ ಚಿನ್ನ ಗೆದ್ದು ಮಿನುಗಿರುವ ಅವರು ಮುಂದಿನ ವರ್ಷ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿಯೂ ಸ್ವರ್ಣದಿಂದ ಸಂಭ್ರಮಿಸುವ ಇರಾದೆಯಲ್ಲಿದ್ದಾರೆ. ಈ ಮೂಲಕ ಜಾವೆಲಿನ್ ಸ್ಪರ್ಧೆಯಲ್ಲಿ ಭಾರತಕ್ಕೆ ಸತತ ಎರಡು ಚಿನ್ನದ ಪದಕ ಗೆಲ್ಲುವ ಪಣ ತೊಟ್ಟಿದ್ದಾರೆ.