ಕರಾಚಿ : ಚೇತನ್ ಶರ್ಮ ನೇತೃತ್ವದ ಬಿಸಿಸಿಯ ಹಿರಿಯರ ಕ್ರಿಕೆಟ್ ತಂಡದ ಆಯ್ಕೆ ಸಮಿತಿಯನ್ನು ಇತ್ತೀಚೆಗೆ ವಜಾ ಮಾಡಲಾಗಿದೆ. ಆಟಗಾರರ ಆಯ್ಕೆಯಲ್ಲಿ ಎಡವಿದ್ದಾರೆ ಎಂಬುದೇ ಅವರ ಅವರ ಮೇಲಿನ ಆರೋಪ. ಏಷ್ಯಾ ಕಪ್ ಮತ್ತು ಟಿ೨೦ ವಿಶ್ವ ಕಪ್‌ನಲ್ಲಿ ಭಾರತ ತಂಡ ಟ್ರೋಫಿ ಗೆಲ್ಲದಿರುವುದು ಈ ಆರೋಪಕ್ಕೆ ಸೂಕ್ತ ಉದಾಹರಣೆ ಕೂಡ. ಆದರೆ, ಚೇತನ್ ಶರ್ಮ ನೇತೃತ್ವದ ಆಯ್ಕೆ ಸಮಿತಿ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿಯ ವೃತ್ತಿಯನ್ನೇ ಹಾಳುಗೆಡವಲು ಯತ್ನಿಸಿದ್ದರು ಎಂಬ ಆರೋಪ ಕೇಳಿ ಬಂದಿದೆ. ಈ ಆರೋಪವನ್ನು ಮಾಡಿದ್ದು ಪಾಕಿಸ್ತಾನ ತಂಡದ ಮಾಜಿ ಸ್ಪಿನ್ನರ್ ದ್ಯಾನಿಶ್ ಕನೇರಿಯಾ.
ದ್ಯಾನಿಶ್ ಪ್ರಕಾರ ವಿರಾಟ್ ಕೊಹ್ಲಿ ಸುಮಾರು ಮೂರು ವರ್ಷಗಳ ಕಾಲ ಮಾನಸಿಕ ಹಿಂಸೆಯನ್ನು ಎದುರಿಸಲು ಚೇತನ್ ಶರ್ಮ ನೇತೃತ್ವದ ಆಯ್ಕೆ ಸಮಿತಿಯೇ ಕಾರಣವಂತೆ. ಪ್ರಮುಖವಾಗಿ ಚೇತನ್ ಶರ್ಮ ಅವರು ವಿರಾಟ್ ಕೊಹ್ಲಿ ಫಾರ್ಮ್ ಕಳೆದುಕೊಂಡು ಒದ್ದಾಡುತ್ತಿದ್ದ ಸಮಯದಲ್ಲಿ ಹಲವಾರು ಸರಣಿಗಳಿಂದ ಹೊರಕ್ಕೆ ಇಡುವ ಮೂಲಕ ಅವಕಾಶ ನಷ್ಟ ಮಾಡಿದ್ದರು. ಹೀಗಾಗಿ ಅವರಿಗೆ ಸೂಕ್ತ ಸಮಯಕ್ಕೆ ಪ್ರದರ್ಶನ ಕಂಡುಕೊಳ್ಳುವುದಕ್ಕೆ ಸಾಧ್ಯವಾಗಿಲ್ಲ ಎಂಬುದಾಗಿ ಅವರು ಆರೋಪಿಸಿದ್ದಾರೆ.
ವಿರಾಟ್ ಕೊಹ್ಲಿಯನ್ನು ಅನಗತ್ಯವಾಗಿ ನಾಯಕತ್ವದಿಂದ ಕೆಳಕ್ಕೆ ಇಳಿಸಲಾಯಿತು. ಅದಕ್ಕೆ ಸೂಕ್ತ ಕಾರಣವೂ ಕೊಡಲಿಲ್ಲ. ನಾಯಕತ್ವದಿಂದ ಕೆಳಕ್ಕೆ ಇಳಿಸುವ ಬಗ್ಗೆ ಅವರಿಗೂ ಮಾಹಿತಿ ಕೊಡಲಿಲ್ಲ. ಜನರಿಗೂ ಸುಳ್ಳು ನೆಪಗಳನ್ನು ಹೇಳಲಾಯಿತು ಎಂಬುದಾಗಿ ಕನೇರಿಯಾ ಹೇಳಿದ್ದಾರೆ.
ಚೇತನ್ ಶರ್ಮ ನೇತೃತ್ವದ ಸಮಿತಿ ತಂಡದಲ್ಲಿ ಅನಗತ್ಯ ಗೊಂದಲಗಳನ್ನು ಸೃಷ್ಟಿಸಿತು. ಬೇಕಾಬಿಟ್ಟಿ ಬದಲಾವಣೆಗಳನ್ನು ಮಾಡಿತು. ಇದರಿಂದಾಗಿ ಟೀಮ್ ಇಂಡಿಯಾದಲ್ಲಿ ಸ್ಥಿರತೆ ಕಡಿಮೆಯಾಯಿತು ಎಂಬುದಾಗಿ ಕನೇರಿಯಾ ಆರೋಪಿಸಿದ್ದಾರೆ.
ಇದನ್ನೂ ಓದಿ | BCCI: ಚೇತನ್ ಶರ್ಮಾ ಸಾರಥ್ಯದ ಟೀಮ್ ಇಂಡಿಯಾ ಆಯ್ಕೆ ಸಮಿತಿಗೆ ಗೇಟ್ಪಾಸ್ ನೀಡಿದ ಬಿಸಿಸಿಐ!