Site icon Vistara News

ನಾನೇನು ಶಿಲಾಜಿತ್​ ತಿಂದಿದ್ದೇನಾ?- ಲೈಂಗಿಕ ದೌರ್ಜನ್ಯದ ಆರೋಪಕ್ಕೆ ಬ್ರಿಜ್​ ಭೂಷಣ್ ಸಿಂಗ್​​ ಅಧಿಕ ಪ್ರಸಂಗತನದ ಉತ್ತರ

Did I eat Shilajit with roti says BJP MP Brij Bhushan Sharan Singh

#image_title

ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಭಾರತೀಯ ಕುಸ್ತಿ ಒಕ್ಕೂಟದ ಅಧ್ಯಕ್ಷ, ಬಿಜೆಪಿ ಸಂಸದ ಬ್ರಿಜ್ ಭೂಷಣ್​ ಶರಣ್ ಸಿಂಗ್​​ ಇಂದು ಹೇಳಿಕೆಯೊಂದನ್ನು ನೀಡಿ ಮತ್ತೆ ವಿವಾದಕ್ಕೆ ಗುರಿಯಾಗಿದ್ದಾರೆ. ಟಿವಿ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು ‘ನಾನು 1000ಕ್ಕೂ ಹೆಚ್ಚು ಮಹಿಳೆಯರಿಗೆ ಲೈಂಗಿಕ ದೌರ್ಜನ್ಯ ನಡೆಸಿದ್ದೇನೆ ಎಂದು ಕೆಲವರು ಆರೋಪ ಮಾಡಿದ್ದಾರೆ. ಅಷ್ಟು ಮಹಿಳೆಗೆ ದೌರ್ಜನ್ಯ ಎಸಗಲು ನಾನೇನು ಶಿಲಾಜಿತ್​ನಿಂದ ಮಾಡಿದ ರೊಟ್ಟಿ ತಿಂದಿದ್ದೇನಾ? ಎಂದು ಪ್ರಶ್ನಿಸಿದ್ದಾರೆ. ‘ಮೊದಲು ನಾನು 100 ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿದ್ದೇನೆ ಎಂದರು. ಆಮೇಲೆ ಆ ಸಂಖ್ಯೆ 1000ಕ್ಕೆ ಏರಿಕೆಯಾಯಿತು. ನಾನೇನಾದರೂ ಶಿಲಾಜಿತ್​ ರೊಟ್ಟಿ ತಿಂದಿದ್ದೇನಾ ಎಂದವರು ವ್ಯಂಗ್ಯವಾಡಿದ್ದಾರೆ.

ಅಂದಹಾಗೇ, ಶಿಲಾಜಿತ್​​ನ್ನು ಮುಮಿಜೊ ಎಂದೂ ಕರೆಯುತ್ತಾರೆ. ಇದು ಕಪ್ಪು ಬಣ್ಣದ ಪುಡಿ. ಹಲವು ಆರೋಗ್ಯ ಸಂಬಂಧಿ ಉಪಯೋಗ ಹೊಂದಿರುವ ಶಿಲಾಜಿತ್ ಪುರುಷರಲ್ಲಿ ಟೆಸ್ಟೋಸ್ಟೆರಾನ್ ಹಾರ್ಮೋನು ಉತ್ಪತ್ತಿ ಹೆಚ್ಚಿಸಿ, ವೀರ್ಯಾಣು ಹೆಚ್ಚಳ ಮಾಡಿ, ದೌರ್ಬಲ್ಯವನ್ನು ಕಡಿಮೆ ಮಾಡುತ್ತದೆ ಎಂದೂ ಹೇಳಲಾಗುತ್ತದೆ. ಇದೀಗ ಬ್ರಿಜ್​ ಭೂಷಣ್ ಶರಣ್​ ಸಿಂಗ್ ಅವರು ಶಿಲಾಜಿತ್​ ಹೆಸರು ಹೇಳಿ, ತಮ್ಮ ಮೇಲೆ ಬಂದಿರುವ ಲೈಂಗಿಕ ಆರೋಪವನ್ನು ವ್ಯಂಗ್ಯಮಾಡಿದ್ದಾರೆ.

ಬ್ರಿಜ್​ ಭೂಷಣ್​ ಶರಣ್ ಸಿಂಗ್ ಅವರು ಕಳೆದ 12ವರ್ಷಗಳಿಂದ ಹಲವು ಕುಸ್ತಿಪಟುಗಳು, ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ. ಅವರು ತಮ್ಮ ಅಧ್ಯಕ್ಷ ಸ್ಥಾನಕ್ಕೆ ಮತ್ತು ಸಂಸದನ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಬ್ರಿಜ್ ಭೂಷಣ್​​ಗೆ ಜೈಲು ಶಿಕ್ಷೆಯಾಗಬೇಕು ಎಂದು ಆಗ್ರಹಿಸಿ ಕುಸ್ತಿಪಟುಗಳಾದ ವಿನೇಶ್​ ಫೋಗಟ್​, ಸಾಕ್ಷಿ ಮಲಿಕ್​, ಬಜ್​ರಂಗ್ ಪೂನಿಯಾ ಸೇರಿ ಹಲವರು ದೆಹಲಿಯ ಜಂತರ್​ಮಂತರ್​​ನಲ್ಲಿ ಧರಣಿ ನಡೆಸುತ್ತಿದ್ದಾರೆ. ಇತ್ತೀಚೆಗೆ ಸುದ್ದಿಗೋಷ್ಠಿ ನಡೆಸಿದ್ದ ಬ್ರಿಜ್​ ಭೂಷಣ್​ ಶರಣ್​ ಸಿಂಗ್​ ಅವರು ‘ನಾನು ಯಾವುದೇ ತಪ್ಪು ಮಾಡಿಲ್ಲ. ರಾಜೀನಾಮೆ ಕೊಟ್ಟರೆ, ತಪ್ಪು ಮಾಡಿದ್ದೇನೆ ಎಂದಾಗಿಬಿಡುತ್ತದೆ. ಹಾಗಾಗಿ ಕೊಡುವುದಿಲ್ಲ’ ಎಂದಿದ್ದರು. ಈ ಮಧ್ಯೆ ಬ್ರಿಜ್ ಭೂಷಣ್​ ವಿರುದ್ಧ ಪೊಲೀಸರು ಎರಡು ಎಫ್​ಐಆರ್​ ದಾಖಲು ಮಾಡಿದ್ದಾರೆ.

ಇದನ್ನೂ ಓದಿ: WRESTLERS PROTEST: ಬ್ರಿಜ್‌ಭೂಷಣ್ ವಿರುದ್ಧ ಎಫ್ಐಆರ್‌ ದಾಖಲಿಸದ ದೆಹಲಿ ಪೊಲೀಸರಿಗೆ ನೋಟಿಸ್​ ನೀಡಿದ ಸುಪ್ರೀಂ ಕೋರ್ಟ್

ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಭಾರತೀಯ ಕುಸ್ತಿ ಒಕ್ಕೂಟದ ಅಧ್ಯಕ್ಷ ಬ್ರಿಜ್​ ಭೂಷಣ್​ ಸಿಂಗ್​ ‘ನಾಲ್ಕು ತಿಂಗಳಿಂದ ಕುಸ್ತಿ ಆಟ ನಿಂತಿದೆ. ನನ್ನನ್ನು ಬೇಕಾದರೆ ನೇಣಿಗೆ ಏರಿಸಿ, ಆದರೆ ಈ ಲೈಂಗಿಕ ದೌರ್ಜನ್ಯದ ಆರೋಪದ ಹೆಸರಲ್ಲಿ ಕುಸ್ತಿ ಚಟುವಟಿಕೆಗಳು ನಿಲ್ಲುವಂತಾಗಬಾರದು’ ಎಂದಿದ್ದಾರೆ. ಕಳೆದ ಮೂರ್ನಾಲ್ಕು ತಿಂಗಳುಗಳಿಂದಲೂ ಕುಸ್ತಿಪಟುಗಳು ಬ್ರಿಜ್​ ಭೂಷಣ್​ ಸಿಂಗ್ ವಿರುದ್ಧದ ಪ್ರತಿಭಟನೆಯಲ್ಲಿ ತೊಡಗಿದ್ದಾರೆ. ಹೀಗಾಗಿ ಕುಸ್ತಿಗೆ ಸಂಬಂಧಪಟ್ಟ ಚಾಂಪಿಯನ್​ಶಿಪ್​ಗಳು, ಶಿಬಿರಗಳೆಲ್ಲ ಸ್ಥಗಿತಗೊಂಡಿವೆ. ಈಗ ಅದನ್ನೇ ಉಲ್ಲೇಖಿಸಿದ ಬ್ರಿಜ್ ಭೂಷಣ್ ಸಿಂಗ್​ ಅವರು ‘ಕುಸ್ತಿಗೆ ಸಂಬಂಧಪಟ್ಟ ಚಟುವಟಿಕೆಗಳು ನಿಲ್ಲುವುದರಿಂದ ಕೆಡೆಟ್​ ಮತ್ತು ಕಿರಿಯ ಕುಸ್ತಿಪಟುಗಳಿಗೆ ಅನನುಕೂಲವಾಗಲಿದೆ ಎಂದಿದ್ದಾರೆ.

Exit mobile version