Site icon Vistara News

IND vs AUS | ರೋಹಿತ್‌ ಶರ್ಮ ಮೈದಾನದಲ್ಲೇ ದಿನೇಶ್‌ ಕಾರ್ತಿಕ್‌ ಕತ್ತು ಹಿಡಿದಿದ್ದು ಯಾಕಪ್ಪಾ?

ind vs aus

ಮೊಹಾಲಿ : ಪ್ರವಾಸಿ ಆಸ್ಟ್ರೇಲಿಯಾ ತಂಡ ದುರ್ಬಲಗೊಂಡಿದೆ. ಮೊದಲಿನಂತೆ ಇಲ್ಲ. ಅವರನ್ನು ಸುಲಭದಲ್ಲಿ ಮಟ್ಟಹಾಕಬಹುದು ಅಂದುಕೊಂಡಿದ್ದ ಟೀಮ್ ಇಂಡಿಯಾಗೆ ಮಂಗಳವಾರ ನಿರಾಸೆ ಉಂಟಾಗಿದೆ. ಟಿ೨೦ ಸರಣಿಯಲ್ಲಿ ಮೊದಲ ಪಂದ್ಯದಲ್ಲಿ ಆರೋನ್‌ ಫಿಂಚ್‌ ಬಳಗಕ್ಕೆ ೪ ವಿಕೆಟ್‌ಗಳಿಂದ ತಲೆ ಬಾಗುವಂತಾಗಿದೆ. ಭಾರತ ಬಳಗವೂ ಚೆನ್ನಾಗಿಯೇ ಆಡಿತ್ತು. ಆದರೆ, ಬೌಲಿಂಗ್‌ ಮತ್ತು ಫೀಲ್ಡಿಂಗ್‌ನಲ್ಲಿ ಸ್ವಲ್ಪ ಯಾಮಾರಿದರು.

oಪಂದ್ಯದ ಸೋಲು ತಂಡದ ನಾಯಕನಿಗೆ ಸಹಜವಾಗಿ ಬೇಸರ ತರಿಸುತ್ತದೆ. ಆಸೀಸ್‌ ವಿರುದ್ಧದ ಹಣಾಹಣಿಯಲ್ಲಿ ಕೊನೆಕೊನೆಗೆ ರೋಹಿತ್ ಶರ್ಮ ಕೂಡ ಅಂಥದ್ದೇ ಸ್ಥಿತಿ ತಲುಪಿದ್ದರು. ಎರಡೂ ಕೈಗಳಿಂದ ಮುಖ ಮುಚ್ಚಿಕೊಂಡು ಆಕ್ರೋಶ ವ್ಯಕ್ತಪಡಿಸಿದ್ದು ಕಂಡು ಬಂತು. ಆಗಾಗ ಗೊಣಗಾಡುತ್ತಿದ್ದರು. ಇವೆಲ್ಲದರ ಮಧ್ಯೆ ಅವರು ದಿನೇಶ್‌ ಕಾರ್ತಿಕ್ ಅವರ ಕತ್ತು ಹಿಡಿದು, ಗದ್ದವನ್ನು ಗಿಂಡಿದ ಪ್ರಸಂಗವೂ ನಡೆಯಿತು. ರೋಹಿತ್‌ ಯಾಕೆ ಹೀಗೆ ಮಾಡುತ್ತಾರೆ ಎಂಬುದು ಎಲ್ಲರ ಪ್ರಶ್ನೆಯಾಗಿದೆ. ಆದರೆ, ಕತ್ತು ಹಿಡಿದಿದ್ದು ಖುಷಿಯಲ್ಲಿ.

ಇನಿಂಗ್ಸ್‌ನ ೧೨ನೇ ಓವರ್‌ನಲ್ಲಿ ನಡೆದ ಪ್ರಸಂಗವಿದು. ೩೫ ರನ್‌ ಬಾರಿಸಿದ್ದ ಸ್ಟೀವ್ ಸ್ಮಿತ್‌ ಕ್ರೀಸ್‌ನಲ್ಲಿ ತಳವೂರುವ ಲಕ್ಷಣ ತೋರಿದ್ದರು. ಈ ವೇಳೆ ಉಮೇಶ್‌ ಯಾದವ್‌ ಎಸೆದ ಚೆಂಡು ಅವರ ಬ್ಯಾಟ್‌ಗೆ ತಗುಲಿ ವಿಕೆಟ್‌ಕೀಪರ್‌ ದಿನೇಶ್‌ ಕಾರ್ತಿಕ್‌ ಕೈ ಸೇರಿತ್ತು. ಅಂಪೈರ್‌ ಔಟ್‌ ಕೊಡಲಿಲ್ಲ. ರೋಹಿತ್‌ ಅಂಪೈರ್‌ ತೀರ್ಪು ಮರುಪರಿಶೀಲನೆ ವ್ಯವಸ್ಥೆ (ಡಿಆರ್‌ಎಸ್‌) ಆಯ್ಕೆ ಬಯಸಿದರು. ಮೂರನೇ ಅಂಪೈರ್‌ ಔಟ್ ಕೊಟ್ಟರು. ಅದೇ ಓವರ್‌ನ ಮತ್ತೊಂದು ಎಸೆತ ಆಸೀಸ್‌ ಬ್ಯಾಟರ್‌ ಗ್ಲೆನ್‌ ಮ್ಯಾಕ್ಸ್‌ವೆಲ್ ಅವರ ಬ್ಯಾಟ್‌ ಸವರಿ ಮತ್ತೆ ದಿನೇಶ್‌ ಕಾರ್ತಿಕ್ ಕೈ ಸೇರಿತು. ಅಂಪೈರ್‌ಗೆ ಈಗಲೂ ಔಟ್‌ ಕೊಡಲಿಲ್ಲ.

ನಾಯಕ ರೋಹಿತ್‌ ಶರ್ಮ ಅವರು ವಿಕೆಟ್‌ ಕೀಪರ್ ಕಾರ್ತಿಕ್‌ ಅವರಲ್ಲಿ ಏನೆಂದು ಕೇಳಿದ ತಕ್ಷಣ ಅವರ ಡಿಆರ್‌ಎಸ್‌ ಬಳಸಲು ಸೂಚನೆ ಕೊಟ್ಟರು. ಫಲಿತಾಂಶ ಬಂತು. ಗ್ಲೆನ್‌ ಔಟ್‌. ದಿನೇಶ್‌ ಕಾರ್ತಿಕ್‌ ನಿಖರ ಸಲಹೆ ಕೊಟ್ಟ ಖುಷಿಗೆ ರೋಹಿತ್‌ ಶರ್ಮ ಅವರು ಅವರ ಕುತ್ತಿಗೆ ಹಿಡಿದು ಪ್ರೀತಿಯಿಂದ ಜಗ್ಗಿದರಲ್ಲದೆ, ಗದ್ದಕ್ಕೆ ಗಿಂಡಿದರು. ಈ ದೃಶ್ಯ ಮೈದಾನದಲ್ಲಿರುವ ಕ್ಯಾಮೆರಾಗಳಲ್ಲಿ ದಾಖಲಾದವು. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವಿಭಿನ್ನ ಅಭಿಪ್ರಾಯಗಳು ವ್ಯಕ್ತಗೊಂಡಿವೆ. ಕೆಲವರು ಇದು ಬೇಕಿತ್ತಾ ಎಂದು ಪ್ರಶ್ನಿಸಿದ್ದರೆ, ಇನ್ನು ಹಲವರು ಇವೆಲ್ಲ ಮಾಮೂಲಿ ಎಂದಿದ್ದಾರೆ.

ಈ ಓವರ್‌ನಲ್ಲಿ ಎರಡು ವಿಕೆಟ್‌ ಬಿದ್ದ ಹೊರತಾಗಿಯೂ ಭಾರತಕ್ಕೆ ಜಯ ಲಭಿಸಲಿಲ್ಲ. ಟಿಮ್‌ ಡೇವಿಡ್‌ (೧೮) ಹಾಗೂ ಮ್ಯಾಥ್ಯೂ ವೇಡ್‌ (೪೫*) ಭಾರತ ತಂಡದ ಗೆಲುವು ಕಸಿದರು.

ಇದನ್ನೂ ಓದಿ | IND vs AUS | ಸೋಲಿನ ನಡುವೆಯೂ ಹೊಸ ಮೈಲುಗಲ್ಲು ಸೃಷ್ಟಿಸಿದ ಕನ್ನಡಿಗ ಕೆ. ಎಲ್‌ ರಾಹುಲ್‌

Exit mobile version