Site icon Vistara News

ಮುಂಬೈ ಇಂಡಿಯನ್ಸ್​ ತೊರೆದರೇ ಸಚಿನ್​ ತೆಂಡೂಲ್ಕರ್​? ಪೋಸ್ಟ್​ನಲ್ಲಿದೆ ಅಸಲಿಯತ್ತು!

sachin tendulkar

ಮುಂಬಯಿ: 5 ಬಾರಿ ತಂಡಕ್ಕೆ ಕಪ್​ ಗೆಲ್ಲಿಸಿಕೊಟ್ಟ ರೋಹಿತ್‌ ಶರ್ಮಾ ಅವರನ್ನು ಅಚ್ಚರಿ ಎಂಬಂತೆ ಮುಂಬೈ ಫ್ರಾಂಚೈಸಿ(Mumbai Indians), ತಂಡದ ನಾಯಕತ್ವದಿಂದ ಕೆಳಗಿಳಿಸಿತ್ತು. ಅವರ ಸ್ಥಾನಕ್ಕೆ ನೂತನ ನಾಯಕನನ್ನಾಗಿ ಹಾರ್ದಿಕ್​ ಪಾಂಡ್ಯ ಅವರನ್ನು ನೇಮಿಸಲಾಗಿದೆ. ಫ್ರಾಂಚೈಸಿಯ ಈ ನಿರ್ಧಾರದ ವಿರುದ್ಧ ಅನೇಕರು ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ರೋಶ ಹೊರಹಾಕುತ್ತಿದ್ದಾರೆ. ಇದರ ಬೆನ್ನಲ್ಲೇ, ದಿಗ್ಗಜ ಸಚಿನ್‌ ತೆಂಡೂಲ್ಕರ್‌(Sachin Tendulkar) ಅವರನ್ನೂ ಮುಂಬೈ ತಂಡದ ಮೆಂಟರ್‌(MI mentor) ಸ್ಥಾನದಿಂದ ಕೆಳಗಿಳಿಸಲಾಗಿದೆ ಎಂಬ ಸುದ್ದಿ ಎಲ್ಲಡೆ ಸದ್ದು ಮಾಡಲಾರಂಭಿಸಿದೆ.

ಅಭಿಷೇಕ್​ ಎನ್ನುವ ಟ್ವಿಟರ್​ ಎಕ್ಸ್​ ಖಾತೆಯಲ್ಲಿ ಸಚಿನ್​ ತೆಂಡೂಲ್ಕರ್​ ಅವರನ್ನು ಮುಂಬೈ ಇಂಡಿಯನ್ಸ್​ ತಂಡದ ಮೆಂಟರ್‌ ಸ್ಥಾನದಿಂದ ಕೆಳಗಿಳಿಸಲಾಗಿದೆ ಎನ್ನುವ ಪೋಸ್ಟ್​ ಶೇರ್​ ಆಗಿದೆ. ಇದರ ಬೆನ್ನಲೇ ಈ ಪೋಸ್ಟನ್ನು ಅನೇಕ ನೆಟ್ಟಿಗರು ಶೇರ್​ ಮಾಡಿ ಇದನ್ನು ವೈರಲ್​ ಮಾಡಲಾರಂಭಿಸಿದ್ದಾರೆ.

ತೆಂಡೂಲ್ಕರ್​ ಅವರನ್ನು ವಜಾ ಮಾಡಲಾಗಿದೆ ಎಂಬ ಮಾಹಿತಿಯನ್ನೊಳಗೊಂಡ ಚಿತ್ರಗಳನ್ನು ಹಂಚಿಕೊಂಡಿರುವ ಕೆಲವರು, ರೋಹಿತ್‌ ಬದಲು ಹಾರ್ದಿಕ್‌ಗೆ ನಾಯಕತ್ವ ನೀಡಿದ್ದು, ಸಚಿನ್‌ಗೆ ಇಷ್ಟವಿರಲಿಲ್ಲ ಹೀಗಾಗಿ ಅವರು ಫ್ರಾಂಚೈಸಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಇದೇ ಕಾರಣಕ್ಕೆ ಅವರನ್ನು ಮೆಂಟರ್‌ ಸ್ಥಾನದಿಂದ ಕೆಳಗಿಳಿಸಲಾಗಿದೆ ಎಂದು ಬರೆದುಕೊಂಡಿದ್ದಾರೆ.

ಮಂಗಳವಾರ ದುಬೈನಲ್ಲಿ ನಡೆದಿದ್ದ ಆಟಗಾರರ ಮಿನಿ ಹರಾಜಿನ ವೇಳೆಯೂ ಸಚಿನ್​ ತೆಂಡೂಲ್ಕರ್​ ಅವರು ಮುಂಬೈ ಫ್ರಾಂಚೈಸಿ ಜತೆ ಕಾಣಿಸಿಕೊಂಡಿರಲಿಲ್ಲ. ಮಹೇಲಾ ಜಯವರ್ಧನೆ ಮಾತ್ರ ಕಾಣಿಸಿಕೊಂಡಿದ್ದರು. ಹೀಗಾಗಿ ಸಚಿನ್​ ಅವರು ಮುಂಬೈ ಇಂಡಿಯನ್ಸ್​ ತೊರೆದಿರುವು ಖಚಿತ ಎಂದು ನೆಟ್ಟಿಗರು ಸುದ್ದಿ ಹಬ್ಬಿಸಿದ್ದಾರೆ.

ಅಸಲಿಯತ್ತು ಇಲ್ಲಿದೆ

ಈ ಸುದ್ದಿ ಎಲ್ಲಡೆ ವೈರಲ್ ಆಗುತ್ತಿದ್ದಂತೆ ಈ ಕುರಿತು ಫ್ಯಾಕ್ಟ್‌ಚೆಕ್‌ ಮಾಡಿರುವ ಇಂಡಿಯಾ.ಕಾಂ (India.com), ಇದೊಂದು ಸುಳ್ಳು ಸುದ್ದಿ. ಮುಂಬೈ ಇಂಡಿಯನ್ಸ್​ ಇಂತಹ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಸಚಿನ್​ ಮುಂಬರುವ ಆವೃತ್ತಿಗಳಿಗೂ ಮುಂಬೈ ಇಂಡಿಯನ್ಸ್‌ ಜತೆಗೆ ಇರಲಿದ್ದಾರೆ ಎಂದು ವರದಿ ಮಾಡಿದೆ. ರೋಹಿತ್​ ಅವರನ್ನು ನಾಯಕತ್ವದಿಂದ ಕೆಳಗಿಳಿಸಿದ ಕಾರಣ ಅವರ ಅಭಿಮಾನಿಗಳು ಸಿಟ್ಟಿನಲ್ಲಿ ಫ್ರಾಂಚೈಸಿಯ ಹೆಸರನ್ನು ಕಡಿಸಲು ಈ ರೀತಿಯ ಸುಳ್ಳು ಸುದ್ದಿ ಹಬ್ಬಿದ್ದಾರೆ ಎಂದು ಇಂಡಿಯಾ.ಕಾಂ(India.com) ತನ್ನ ವರದಿಯಲ್ಲಿ ತಿಳಿಸಿದೆ.

ಇದನ್ನೂ ಓದಿ IPL 2024: 8.4 ಕೋಟಿಗೆ ಚೆನ್ನೈ ಸೇರಿದ ಸಮೀರ್ ರಿಜ್ವಿ ಯಾರು?, ಈತನ ಹಿನ್ನೆಲೆ ಏನು?

ಐಪಿಎಲ್‌ನ ಮೊದಲ ಆವೃತ್ತಿಯಿಂದಲೂ ಸಚಿನ್​ ತೆಂಡೂಲ್ಕರ್ ಅವರು ಮುಂಬೈ ಇಂಡಿಯನ್ಸ್​ ತಂಡದ ಪರವಾಗಿಯೇ ಕಾರ್ಯನಿರ್ವಹಿಸುತ್ತಿದ್ದಾರೆ. ಮೊದಲು ಆಟಗಾರನಾಗಿ ಹಾಗೂ ನಾಯಕನಾಗಿ ನೀವೃತ್ತಿ ಬಳಿಕ ಮೆಂಟರ್​ ಆಗಿ ತಂಡದ ಜತೆಗಿದ್ದಾರೆ. ಮುಂಬೈ ಪರ 78 ಪಂದ್ಯಗಳನ್ನು ಆಡಿರುವ ಸಚಿನ್‌, 14 ಅರ್ಧಶತಕ ಹಾಗೂ ಒಂದು ಶತಕ ಒಳಗೊಂಡಂತೆ ಒಟ್ಟು 2,334 ರನ್‌ ಗಳಿಸಿದ್ದಾರೆ. ಸಚಿನ್​ ಅವರ ಪುತ್ರ ಅರ್ಜುನ್​ ತೆಂಡೂಲ್ಕರ್​ ಕೂಡ ಇದೇ ಫ್ರಾಂಚೈಸಿಯಲ್ಲಿ ಆಡುವ ಮೂಲಕ ಐಪಿಎಲ್​ಗೆ ಪದಾರ್ಪಣೆ ಮಾಡಿದ್ದರು.

ಫಾಲೋವರ್ಸ್​ ನಷ್ಟ

ರೋಹಿತ್‌ ಶರ್ಮ ಅವರನ್ನು ನಾಯಕತ್ವ ಸ್ಥಾನದಿಂದ ಕೈಬಿಟ್ಟು ಪಾಂಡ್ಯ ಅವರಿಗೆ ಪಟ್ಟ ಕಟ್ಟಿದ ಕೆಲವೇ ಕ್ಷಣದಲ್ಲಿ ಮಂಬೈ ಇಂಡಿಯನ್ಸ್‌ ಫ್ರಾಂಚೈಸಿಯು ಟ್ವಿಟರ್‌ನಲ್ಲಿ (ಎಕ್ಸ್‌) ನಾಲ್ಕು ಲಕ್ಷಕ್ಕೂ ಹೆಚ್ಚು ಫಾಲೋವರ್ಗಳನ್ನು ಕಳೆದುಕೊಂಡಿದೆ. ಒಂದೊಮ್ಮೆ ರೋಹಿತ್​ ಮುಂಬೈ ತಂಡ ತೊರೆದರೆ ಮತ್ತಷ್ಟು ಫಾಲೋವರ್ಗಳ ಸಂಖ್ಯೆ ಕುಸಿತ ಕಾಣಬಹುದು.

Exit mobile version