ಮುಂಬಯಿ: ಎಲ್ಲ ಮಾದರಿಯ ಕ್ರಿಕೆಟ್ನಲ್ಲಿಯೂ ಸತತ ಶತಕ ಬಾರಿಸಿ ಹಲವು ದಾಖಲೆಗಳನ್ನು ಬರೆಯುತ್ತಾ ಮುನ್ನುಗುತ್ತಿದ್ದ ಶುಭಮನ್ ಗಿಲ್(shubman gill) ಅವರ ಬ್ಯಾಟಿಂಗ್ ಇದೀಗ ಮಂಕಾದಂತೆ ಕಾಣುತ್ತಿದೆ. ವೆಸ್ಟ್ ಇಂಡೀಸ್(IND vs WI) ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅವರು ಸಂಪೂರ್ಣ ಬ್ಯಾಟಿಂಗ್ ವೈಫಲ್ಯ ಕಂಡಿದ್ದಾರೆ.
ಭಾರತದ ಭರವಸೆಯ ಆಟಗಾರ ಎಂದು ಕರೆಯಲ್ಪಟ್ಟ ಗಿಲ್ ಈ ರೀತಿ ಬ್ಯಾಟಿಂಗ್ ವೈಫಲ್ಯ ಅನುಭವಿಸಲು ಕಾರಣವೂ ಇದೆ. ಹೌದು ಅವರ ಬ್ಯಾಟಿಂಗ್ ಕ್ರಮಾಂಕದ ಬದಲಾವಣೆ. ಮೂಲ ಆರಂಭಿಕ ಆಟಗಾರನಾಗಿರುವ ಅವರನ್ನು ಮೂರನೇ ಕ್ರಮಾಂಕದಲ್ಲಿ ಆಡಿಸಿದ್ದೇ ಅವರ ಬ್ಯಾಟಿಂಗ್ ವೈಫಲ್ಯಕ್ಕೆ ಪ್ರಮುಖ ಕಾರಣ ಎನ್ನಬಹುದು. ಜೈಸ್ವಾಲ್ ಅವರ ಆಗಮನದಿಂದ ಮತ್ತು ಚೇತೇಶ್ವರ್ ಪೂಜಾರ ಅವರ ಅನುಪಸ್ಥಿತಿಯಲ್ಲಿ ಬಿಸಿಸಿಐ(BCCI) ಮೂರನೇ ಕ್ರಮಾಂಕದಲ್ಲಿ ಒರ್ವ ಸೂಕ್ತ ಆಟಗಾರ ಹುಡುಕಾಟದಲ್ಲಿತ್ತು. ಈ ಸ್ಥಾನಕ್ಕೆ ಈ ಹಿಂದೆ ಆರಂಭಿಕನಾಗಿ ಆಡುತ್ತಿದ್ದ ಗಿಲ್ ಅವರನ್ನು ಆಯ್ಕೆ ಮಾಡಿ ಅವರಿಗೆ ಈ ಕ್ರಮಾಂಕ ನೀಡಲಾಯಿತು. ಆದರೆ ಗಿಲ್ ಇಲ್ಲಿ ಸಂಪೂರ್ಣ ವಿಫಲರಾದರು. ಮೊದಲ ಪಂದ್ಯದಲ್ಲಿ 6 ಮತ್ತು ದ್ವಿತೀಯ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ 12 ರನ್ ಗಳಿಸಿ ನಿರಾಸೆ ಮೂಡಿಸಿದರು.
ಬಿಸಿಸಿಐ ಕೈಗೊಂಡ ಈ ಒಂದು ನಿರ್ಧಾರದಿಂದ ಗಿಲ್ ಆಟಕ್ಕೆ ಇದೀಗ ಕುತ್ತುಬಂದಿದೆ. ಈ ಹಿಂದೆ ಕನ್ನಡಿಗ ಕೆ.ಎಲ್ ರಾಹುಲ್ ಅವರು ಆರಂಭಿಕನಾಗಿ ಉತ್ತಮ ಆಟ ಪ್ರದರ್ಶಿಸುತ್ತಿದ್ದರು. ಇದೇ ವೇಳೆ ಅವರನ್ನು ದಿಢೀರ್ ಆಗಿ ಮಧ್ಯಮ ಕ್ರಮಾಂಕದಲ್ಲಿ ಆಡಿಸಲಾಯಿತು. ಹೀಗೆ ಹಲವು ಸರಣಿಗಳಲ್ಲಿ ಅವರನ್ನು ವಿವಿಧ ಕ್ರಮಾಂಕದಲ್ಲಿ ಆಡಿಸಿ ಬಿಸಿಸಿಐ ಪ್ರಯೋಗ ನಡೆಸಿತು. ಇದರಿಂದ ರಾಹುಲ್ ಅವರ ನೈಜ ಬ್ಯಾಟಿಂಗ್ ಶೈಲಿಯೇ ಬದಲಾಯಿತು. ಯಾವುದೇ ಕ್ರಮಾಂಕಕ್ಕೆ ಒಗ್ಗಿಕೊಳ್ಳಲಾಗದೆ ಈಗ ರನ್ ಗಳಿಸಲು ಪರದಾಡುವ ಸ್ಥಿತಿ ಬಂದೊದಗಿದೆ. ರಾಹುಲ್ ಬ್ಯಾಟಿಂಗ್ ವೈಫಲ್ಯಕ್ಕೆ ಬಿಸಿಸಿಐಯ ಕೆಲ ನಿರ್ಧಾರವೇ ನೇರ ಕಾರಣ ಎಂದರೂ ತಪ್ಪಗಲಾರದು. ಇದೀಗ ಗಿಲ್ ವಿವಾರದಲ್ಲಿಯೂ ಇದೇ ರೀತಿ ನಡೆದಿದೆ.
ಇದನ್ನೂ ಓದಿ IND vs WI 2nd Test: ರೋಹಿತ್ ಸಿಕ್ಸರ್ಗೆ ರಿಕಿ ಪಾಂಟಿಂಗ್ ದಾಖಲೆ ಉಡೀಸ್
ಉತ್ತಮ ಆಟವಾಡುವ ಆಟಗಾರನ ಮೇಲೆ ಬಿಸಿಸಿಐ ಈ ರೀತಿಯ ಕೆಟ್ಟ ಪ್ರಯೋಗ ನಡೆಸುತ್ತಿರುವುದೇ ಹಲವು ಆಟಗಾರರ ನೈಜ ಆಟಕ್ಕೆ ಅಪಾಯ ಬಂದೊದಗಿದೆ. ಇದೇ ಕಾರಣದಿಂದ ಭಾರತ ಐಸಿಸಿ ಟ್ರೋಫಿಗಳನ್ನು ಗೆಲ್ಲುವಲ್ಲಿ ಎಡವುತ್ತಿರುವುದು. ಒಟ್ಟಾರೆ ಬಿಸಿಸಿಐಯ ತಲೆ ಬುಡವಿಲ್ಲದ ಪ್ರಯೋಗದಿಂದ ಪ್ರತಿಭಾವಂತ ಆಟಗಾರರ ಆಟಕ್ಕೆ ಸಂಕಷ್ಟ ಎದುರಾಗಿದೆ. ವಿಶ್ವಕಪ್ ಟೂರ್ನಿಯ ಹೊಸ್ತಿಲಲ್ಲಿರುವಾಗ ಈ ರೀತಿಯ ಪ್ರಯೋಗ ಅತ್ಯಂತ ಅಪಾಯಕಾರಿ. ಇನ್ನಾದರೂ ಬಿಸಿಸಿಐ ಎಚ್ಚೆತ್ತುಕೊಳ್ಳಲಿ ಎನ್ನುವುದು ಕ್ರಿಕೆಟ್ ಅಭಿಮಾನಿಗಳ ಆಶಯವಾಗಿದೆ.