Site icon Vistara News

Dinesh Karthik: ನಿವೃತ್ತಿ ಖಚಿತಪಡಿಸಿದ ಆರ್​ಸಿಬಿ ಬ್ಯಾಟರ್​ ದಿನೇಶ್ ಕಾರ್ತಿಕ್

Dinesh Karthik

ಚೆನ್ನೈ: ಭಾರತ ಕ್ರಿಕೆಟ್​ ತಂಡದ ಹಿರಿಯ ವಿಕೆಟ್‌ ಕೀಪರ್ ಕಮ್​ ಬ್ಯಾಟರ್ ದಿನೇಶ್ ಕಾರ್ತಿಕ್(Dinesh Karthik) ಅವರು ಐಪಿಎಲ್​ಗೆ(IPL 2024) ನಿವೃತ್ತಿ ಹೇಳಲಿದ್ದಾರೆ ಎಂದು ಟೂರ್ನಿ ಆರಂಭಕ್ಕೂ ಮುನ್ನವೇ ಸುದ್ದಿಯಾಗಿತ್ತು. ಇದೀಗ ಕಾರ್ತಿಕ್​ ಅವರೇ ತಮ್ಮ ನಿವೃತ್ತಿ ವಿಚಾರವನ್ನು(Dinesh Karthik IPL retirement) ಖಚಿತಪಡಿಸಿದ್ದಾರೆ.

ಚೆನ್ನೈ ಸೂಪರ್​ ಕಿಂಗ್ಸ್(Chennai Super Kings)​ ತಂಡದ ವಿರುದ್ಧ ಮಾರ್ಚ್ 22 ರಂದು ನಡೆದ 17ನೇ ಆವೃತ್ತಿಯ ಉದ್ಘಾಟನ ಪಂದ್ಯದ ಬಳಿಕ ಮಾತನಾಡಿದ ಕಾರ್ತಿಕ್​, ‘ಚೆಪಾಕ್​ನಲ್ಲಿ ಪ್ಲೇ ಆಫ್ ಪಂದ್ಯವನ್ನು ಆಯೋಜಿಸುವ ಸಾಧ್ಯತೆ ಇರುವುದರಿಂದ ನಾನು ಇಲ್ಲಿ ಇನ್ನೊಂದು ಪಂದ್ಯ ಆಡಬಹುದು. ಒಂದು ವೇಳೆ ನಮ್ಮ ತಂಡ ಪ್ಲೇ ಆಫ್‌ಗೆ ಅರ್ಹತೆ ಪಡೆಯದಿದ್ದರೆ, ಇದುವೇ ಈ ಮೈದಾನದಲ್ಲಿ ನನ್ನ ಕೊನೆಯ ಪಂದ್ಯ ಎಂದಿದ್ದಾರೆ. ಈ ಮೂಲಕ ತಮ್ಮ ನಿವೃತ್ತಿಯನ್ನ ಸ್ಪಷ್ಟಪಡಿಸಿದ್ದಾರೆ.

“2024 ರ ಆವೃತ್ತಿಯು ದಿನೇಶ್ ಕಾರ್ತಿಕ್ ಅವರ ಕೊನೆಯ ಐಪಿಎಲ್ ಆಗಿರುತ್ತದೆ. ಅವರು ಐಪಿಎಲ್ ವಿದಾಯದ ಬಳಿಕ ಕೆಲವೇ ದಿನಗಳಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಹೇಳಲು ನಿರ್ಧರಿಸಿದ್ದಾರೆ” ಎಂದು ಬಿಸಿಸಿಐ ಮೂಲಗಳು ಪಿಟಿಐಗೆ ತಿಳಿಸಿರುವುದಾಗಿ ವರದಿಯಾಗಿತ್ತು. 38 ವರ್ಷದ ದಿನೇಶ್​ ಕಾರ್ತಿಕ್​ ಅವರು 2008 ರಿಂದ ಆರಂಭಗೊಂಡ ಐಪಿಎಲ್‌ನಿಂದ ಹಿಡಿದು ಎಲ್ಲಾ 16 ಆವೃತ್ತಿಗಳಲ್ಲಿ ಆಡಿದ್ದಾರೆ. ಮತ್ತು 16 ಋತುಗಳಲ್ಲಿ ಕೇವಲ ಎರಡು ಪಂದ್ಯಗಳನ್ನು ಮಾತ್ರ ಕಳೆದುಕೊಂಡಿದ್ದಾರೆ.

2022ರ ಹರಾಜಿನಲ್ಲಿ ಕಾರ್ತಿಕ್​ ಅವರು ಬರೋಬ್ಬರಿ 5.5 ಕೋಟಿ ರೂ. ಪಡೆದು ಆರ್​ಸಿಬಿ(Royal Challengers Bengaluru) ಕ್ಯಾಂಪ್ ಸೇರಿದ್ದರು. ಆ ಆವೃತ್ತಿಯಲ್ಲಿ ಕಾರ್ತಿಕ್ 14 ಇನ್ನಿಂಗ್ಸ್ ಗಳಲ್ಲಿ 287 ರನ್ ಬಾರಿಸಿದ್ದರು. ಜತೆಗೆ ತಂಡದಲ್ಲಿ ಫಿನಿಶರ್ ಪಾತ್ರವನ್ನು ನಿರ್ವಹಿಸಿದ್ದರು. ಇದೇ ಪ್ರದರ್ಶನ ಕಂಡು ಆಸ್ಟ್ರೇಲಿಯಾದಲ್ಲಿ ನಡೆದ ಕಂಡು ಟಿ20 ವಿಶ್ವಕಪ್​ನಲ್ಲಿ ಭಾರತ ತಂಡದ ಆಡಿಸಲಾಗಿತ್ತು. ಆದರೆ ಇಲ್ಲಿ ಕಾರ್ತಿಕ್​ ನಿರೀಕ್ಷಿತ ಮಟ್ಟದ ಪ್ರದರ್ಶನ ತೋರುವಲ್ಲಿ ವಿಫಲರಾಗಿದ್ದರು. ಜತೆಗೆ ಕಳೆದ ಐಪಿಎಲ್​ ಟೂರ್ನಿಯಲ್ಲಿ ಘೋರ ವೈಫಲ್ಯ ಎದುರಿಸಿದ್ದರು. ಈ ಬಾರಿಯ ಐಪಿಎಲ್​ನಲ್ಲಿ ವಿದಾಯ ಘೋಷಿಸಿ ತಮ್ಮ ನರಚ್ಚಿನ ಕಾಮೆಂಟ್ರಿ ಕ್ಷೇತ್ರದಲ್ಲೇ ಮುಂದುವರಿಯಲಿದ್ದಾರೆ ಎಂದು ಹೇಳಲಾಗಿದೆ.

ಇದನ್ನೂ ಓದಿ IPL 2024: ಉದ್ಘಾಟನಾ ಪಂದ್ಯದಲ್ಲೇ ದಾಖಲೆ ಬರೆದ ಮಹೇಂದ್ರ ಸಿಂಗ್​ ಧೋನಿ

ಚೆನ್ನೈ ವಿರುದ್ಧದ ಪಂದದ್ಯದಲ್ಲಿ ಇಂಪ್ಯಾಕ್ಟ್​ ಆಟಗಾರನಾಗಿ ಕಣಕ್ಕಿಳಿದಿದ್ದ ದಿನೇಶ್ ಕಾರ್ತಿಕ್​ ಅವರು ಜವಾಬ್ದಾರಿಯುತ ಆಟವಾಡಿದ ಪರಿಣಾಮ ಆರ್​ಸಿಬಿ ಸ್ಪರ್ಧಾತ್ಮಕ ಮೊತ್ತ ಪೇರಿಸಿತ್ತು. 26 ಎಸೆತ ಎದುರಿಸಿದ ಅವರು 3 ಬೌಂಡರಿ ಮತ್ತು 2 ಸಿಕ್ಸರ್​ ನೆರವಿನಿಂದ ಅಜೇಯ 38 ರನ್​ ಬಾರಿಸಿದ್ದರು. ಐಪಿಎಲ್​ ಟೂರ್ನಿಯಲ್ಲಿ 243 ಪಂದ್ಯಗಳನ್ನು ಆಡಿರುವ ದಿನೇಶ್​ ಕಾರ್ತಿಕ್​, ಅತ್ಯಧಿಕ ಐಪಿಎಲ್​ ಪಂದ್ಯಗಳ್ನಾಡಿದ ಮೂರನೇ ಆಟಗಾರ ಎನಿಸಿಕೊಂಡಿದ್ದಾರೆ.

2004 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಪದಾರ್ಪಣೆ ಮಾಡಿದ ಕಾರ್ತಿಕ್​ ಭಾರತ ಪರ 26 ಟೆಸ್ಟ್‌ಗಳನ್ನು ಆಡಿ 1025 ರನ್ ಗಳಿಸಿದ್ದಾರೆ. 57 ಕ್ಯಾಚ್‌ಗಳು ಮತ್ತು 6 ಸ್ಟಂಪಿಂಗ್‌ಗಳನ್ನು ಮಾಡಿದ್ದಾರೆ. ಅವರು ತಮ್ಮ ಕೊನೆಯ ಟೆಸ್ಟ್ ಆಡಿದ್ದು 2018 ರಲ್ಲಿ. ಏಕದಿನದಲ್ಲಿ 94 ಪಂದ್ಯಗಳನ್ನು ಆಡಿ 1752 ರನ್ ಗಳಿಸಿದ್ದಾರೆ. 64 ಕ್ಯಾಚ್‌ಗಳು ಮತ್ತು 7 ಸ್ಟಂಪಿಂಗ್‌ಗಳನ್ನು ನಿರ್ವಹಿಸಿದ್ದಾರೆ. 60 ಟಿ20 ಪಂದ್ಯಗಳಿಂದ 686 ರನ್ ಗಳಿಸಿ, 30 ಕ್ಯಾಚ್‌ಗಳು ಮತ್ತು 8 ಸ್ಟಂಪಿಂಗ್‌ಗಳನ್ನು ಮಾಡಿದ್ದಾರೆ.

Exit mobile version