Site icon Vistara News

Dinesh Karthik: ಕಾರ್ತಿಕ್​ಗೆ ಟಿ20 ವಿಶ್ವಕಪ್​ನಲ್ಲಿ ಅವಕಾಶ ನೀಡಿ; ದಿಗ್ಗಜ ಕ್ರಿಕೆಟಿಗರ ಒತ್ತಾಯ

Dinesh Karthik

ಬೆಂಗಳೂರು: ಪಂದ್ಯದಿಂದ ಪಂದ್ಯಕ್ಕೆ ವಿಸ್ಫೋಟಕ ಬ್ಯಾಟಿಂಗ್​ ಮೂಲಕ ಈ ಬಾರಿಯ ಐಪಿಎಲ್​ನಲ್ಲಿ(IPL 2024) ಸಂಚಲನ ಮೂಡಿಸುತ್ತಿರುವ ಆರ್​ಸಿಬಿ ತಂಡದ ಹಿರಿಯ ಆಟಗಾರ ದಿನೇಶ್​ ಕಾರ್ತಿಕ್(Dinesh Karthik) ಅವರನ್ನು ಟಿ20 ವಿಶ್ವಕಪ್​(T20 World Cup) ತಂಡಕ್ಕೆ ಪರಿಗಣಿಸುವಂತೆ ಹಲವರು ಒತ್ತಾಯಿಸಿದ್ದಾರೆ. ಟಿ20 ವಿಶ್ವಕಪ್​ ಟೂರ್ನಿ ಇದೇ ವರ್ಷದ ಜೂನ್​ 1 ರಿಂದ ಆರಂಭಗೊಳ್ಳಲಿದೆ. ಅಮೆರಿಕ ಮತ್ತು ವೆಸ್ಟ್​ ಇಂಡೀಸ್​ ಜಂಟಿ ಆತಿಥ್ಯದಲ್ಲಿ ನಡೆಯಲಿದೆ.

ಕಳೆದ ಮುಂಬೈ ಇಂಡಿಯನ್ಸ್​ ವಿರುದ್ಧದ ಪಂದ್ಯದಲ್ಲಿ ಬಿರುಸಿನ ಬ್ಯಾಟಿಂಗ್​ ನಡೆಸಿದ ದಿನೇಶ್​ ಕಾರ್ತಿಕ್​ಗೆ ಟೀಮ್​ ಇಂಡಿಯಾದ ನಾಯಕನಾಗಿರುವ ರೋಹಿತ್​ ಶರ್ಮ ಅವರು ಮೈದಾನದಲ್ಲೇ ಇದೇ ರೀತಿ ಆಡಿದರೆ ವಿಶ್ವಕಪ್​ನಲ್ಲಿ ಆಡಬಹುದು ಎಂದು ಬಿಗ್​ ಆಫರ್​ ನೀಡಿದ್ದರು. ಈ ಆಫರ್​ ಕೇಳಿದ ಕಾರ್ತಿಕ್​ ಹೈದರಾಬಾದ್​ ವಿರುದ್ಧ ನಿನ್ನ(ಸೋಮವಾರ) ವಿಸ್ಫೋಟಕ ಬ್ಯಾಟಿಂಗ್​ ನಡೆಸಿ ಕೇವಲ 35 ಎಸೆತಗಳಿಂದ 83 ರನ್​ ಚಚ್ಚಿದ್ದರು.

ಕಾರ್ತಿಕ್​ ಅವರ ಅಸಾಮಾನ್ಯ ಬ್ಯಾಟಿಂಗ್​ ಕಂಡ ಕ್ರಿಕೆಟ್​ ಅಭಿಮಾನಿಗಳು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಎದ್ದು ನಿಂತು ಪ್ರಶಂಸೆ ವ್ಯಕ್ತಪಡಿಸಿದ್ದರು. ವರ್ಷವಿಡಿ ಕ್ರಿಕೆಟ್​ ಆಡುವ ಆಟಗಾರರು ಕೂಡ ಇವರಂತಹ ಪ್ರದರ್ಶನ ನೀಡುತ್ತಿಲ್ಲ. ಹೀಗಿರುವಾಗ ವರ್ಷಕ್ಕೊಮ್ಮೆ ಐಪಿಎಲ್​ ಮೂಲಕ ಕ್ರಿಕೆಟ್​ ಆಡುತ್ತಿರುವ ಇವರ ಈ ಸಾಹಸಕ್ಕೆ ಇಂದು ಅನೇಕ ಕ್ರಿಕೆಟ್​ ದಿಗ್ಗಜರು ಕೂಡ ಸಲಾಂ ಹೇಳಿದ್ದಾರೆ. ಜತೆಗೆ ಈ ಬಾರಿಯ ಟಿ20 ವಿಶ್ವಕಪ್​ನಲ್ಲಿ ಅವರಿಗೆ ಭಾರತ ತಂಡದ ಪರ ಅವಕಾಶ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಈ ಬಾರಿಯ ಟೂರ್ನಿಯಲ್ಲಿ ಕಾರ್ತಿಕ್​ 7 ಪಂದ್ಯಗಳನ್ನಾಡಿ 226 ರನ್​ ಬಾರಿಸಿದ್ದಾರೆ. ಇದರಲ್ಲಿ 16 ಬೌಂಡರಿ ಮತ್ತು 18 ಸಿಕ್ಸರ್​ ದಾಖಲಾಗಿದೆ. 2022ರ ಹರಾಜಿನಲ್ಲಿ ಕಾರ್ತಿಕ್​ ಅವರು ಬರೋಬ್ಬರಿ 5.5 ಕೋಟಿ ರೂ. ಪಡೆದು ಆರ್​ಸಿಬಿ ಕ್ಯಾಂಪ್ ಸೇರಿದ್ದರು. ಆ ಆವೃತ್ತಿಯಲ್ಲಿ ಕಾರ್ತಿಕ್ 14 ಇನ್ನಿಂಗ್ಸ್ ಗಳಲ್ಲಿ 287 ರನ್ ಬಾರಿಸಿದ್ದರು. ಜತೆಗೆ ತಂಡದಲ್ಲಿ ಫಿನಿಶರ್ ಪಾತ್ರವನ್ನು ನಿರ್ವಹಿಸಿದ್ದರು. ಇದೇ ಪ್ರದರ್ಶನ ಕಂಡು ಆಸ್ಟ್ರೇಲಿಯಾದಲ್ಲಿ ನಡೆದ ಕಂಡು ಟಿ20 ವಿಶ್ವಕಪ್​ನಲ್ಲಿ ಭಾರತ ತಂಡದ ಆಡಿಸಲಾಗಿತ್ತು. ಆದರೆ ಇಲ್ಲಿ ಕಾರ್ತಿಕ್​ ನಿರೀಕ್ಷಿತ ಮಟ್ಟದ ಪ್ರದರ್ಶನ ತೋರುವಲ್ಲಿ ವಿಫಲರಾಗಿದ್ದರು. ಇದೀಗ ಪ್ರಚಂಡ ಬ್ಯಾಟಿಂಗ್​ ಫಾರ್ಮ್​ನಲ್ಲಿರುವ ಅವರು ಈ ಬಾರಿಯ ಟಿ20 ವಿಶ್ವಕಪ್​ ತಂಡಕ್ಕೆ ಆಯ್ಕೆಯಾದರೂ ಕೂಡ ಅಚ್ಚರಿಯಿಲ್ಲ.

ಐಪಿಎಲ್​ ಟೂರ್ನಿಯಲ್ಲಿ 249* ಪಂದ್ಯಗಳನ್ನು ಆಡಿರುವ ದಿನೇಶ್​ ಕಾರ್ತಿಕ್​, ಅತ್ಯಧಿಕ ಐಪಿಎಲ್​ ಪಂದ್ಯಗಳ್ನಾಡಿದ ಮೂರನೇ ಆಟಗಾರ ಎನಿಸಿಕೊಂಡಿದ್ದಾರೆ. ಐಪಿಎಲ್​ನಲ್ಲಿ 4742 ರನ್​ ಬಾರಿಸಿದ್ದಾರೆ. 2004 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಪದಾರ್ಪಣೆ ಮಾಡಿದ ಕಾರ್ತಿಕ್​ ಭಾರತ ಪರ 26 ಟೆಸ್ಟ್‌ಗಳನ್ನು ಆಡಿ 1025 ರನ್ ಗಳಿಸಿದ್ದಾರೆ. 57 ಕ್ಯಾಚ್‌ಗಳು ಮತ್ತು 6 ಸ್ಟಂಪಿಂಗ್‌ಗಳನ್ನು ಮಾಡಿದ್ದಾರೆ. ಅವರು ತಮ್ಮ ಕೊನೆಯ ಟೆಸ್ಟ್ ಆಡಿದ್ದು 2018 ರಲ್ಲಿ. ಏಕದಿನದಲ್ಲಿ 94 ಪಂದ್ಯಗಳನ್ನು ಆಡಿ 1752 ರನ್ ಗಳಿಸಿದ್ದಾರೆ. 64 ಕ್ಯಾಚ್‌ಗಳು ಮತ್ತು 7 ಸ್ಟಂಪಿಂಗ್‌ಗಳನ್ನು ನಿರ್ವಹಿಸಿದ್ದಾರೆ. 60 ಟಿ20 ಪಂದ್ಯಗಳಿಂದ 686 ರನ್ ಗಳಿಸಿ, 30 ಕ್ಯಾಚ್‌ಗಳು ಮತ್ತು 8 ಸ್ಟಂಪಿಂಗ್‌ಗಳನ್ನು ಮಾಡಿದ್ದಾರೆ.

Exit mobile version