ಮುಂಬಯಿ: 16ನೇ ಆವೃತ್ತಿಯ ಐಪಿಎಲ್ನಲ್ಲಿ ಬ್ಯಾಟಿಂಗ್ ನಡೆಸಲು ಪರದಾಡಿ ತೀವ್ರ ಟೀಕೆಗೆ ಗುರಿಯಾಗಿದ್ದ ಆರ್ಸಿಬಿ ತಂಡದ ಆಟಗಾರ ದಿನೇಶ್ ಕಾರ್ತಿಕ್ ಅವರು ಮತ್ತೆ ಕ್ರಿಕೆಟ್ ಕ್ಷೇತ್ರಕ್ಕೆ ಮರಳಲು ಸಜ್ಜಾಗಿದ್ದಾರೆ. ಇದೇ ಜೂನ್ 7ರಿಂದ ಆರಂಭಗೊಳ್ಳಲಿರುವ ಭಾರತ ಮತ್ತು ಆಸ್ಟ್ರೇಲಿಯಾ ವಿರುದ್ಧದ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಲ್ಲಿ ಅವರು ಕಾಮೆಂಟ್ರಿ ಪ್ಯಾನಲ್ನಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ.
ಕಳೆದ ಬಾರಿಯೂ ಭಾರತ ಮತ್ತು ನ್ಯೂಜಿಲ್ಯಾಂಡ್ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ದಿನೇಶ್ ಕಾರ್ತಿಕ್ ಅವರು ಕಾಮೆಂಟ್ರಿ ಮಾಡಿದ್ದರು. ಇದೀಗ ಮತ್ತೆ ಸಜ್ಜಾಗಿದ್ದಾರೆ. ದಿನೇಶ್ ಪಾರ್ತಿಕ್ ಅವರು ಕಾಮೆಂಟ್ರಿ ಮಾಡುಲು ಮುಂದಾದ ವಿಚಾರ ತಿಳಿಯುತ್ತಿದ್ದಂತೆ ಆರ್ಸಿಬಿ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಕಳಕಳಿಯ ಮನವಿಯೊಂದನ್ನು ಮಾಡುವ ಮೂಲಕ ಅವರನ್ನು ಟ್ರೋಲ್ ಮಾಡಿದ್ದಾರೆ. “ಆಲ್ ದಿ ಬೆಸ್ಟ್. ಇದೇ ಕರ್ತವ್ಯದಲ್ಲಿ ಮುಂದುವರಿಯಿರಿ. ಇದರಲ್ಲಿ ನಿಮಗೆ ಉತ್ತಮ ಭವಿಷ್ಯವಿದೆ” ಎಂದು ಹೇಳುವ ಮೂಲಕ ಮುಂದಿನ ಬಾರಿಯ ಐಪಿಎಲ್ನಲ್ಲಿ ಆರ್ಸಿಬಿ ಪರ ಆಡದಂತೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.
ಇದನ್ನೂ ಓದಿ WTC Final 2023: ಬ್ಯಾಟಿಂಗ್ ಅಭ್ಯಾಸ ಆರಂಭಿಸಿದ ವಿರಾಟ್,ರೋಹಿತ್
ಈ ಬಾರಿಯ ಐಪಿಎಲ್ನಲ್ಲಿ ಆರ್ಸಿಬಿ ಪರ ದಿನೇಶ್ ಕಾರ್ತಿಕ್ ಅವರು ತೀರಾ ಕಳಪೆ ಮಟ್ಟದ ಬ್ಯಾಟಿಂಗ್ ಪ್ರದರ್ಶನ ತೋರಿದ್ದರು. ಈ ಕಾರಣದಿಂದ ಅವರ ಮೇಲೆ ಆರ್ಸಿಬಿ ಅಭಿಮಾನಿಗಳು ಸಿಟ್ಟುಗೊಂಡಿದ್ದರು. ಸ್ವತಃ ನಾಯಕ ಡು ಪ್ಲೆಸಿಸ್ ಕೂಡ ಕಾರ್ತಿಕ್ ಬ್ಯಾಟಿಂಗ್ ವಿಚಾರದಲ್ಲಿ ಬಹಿರಂಗವಾಗಿ ಬೇಸರ ಹೊರಹಾಕಿದ್ದರು. ಈ ಬಾರಿ ಅವರು ಆಡಿದ 13 ಇನಿಂಗ್ಸ್‌ಗಳಲ್ಲಿ ಗಳಿಸಿದ್ದು ಕೇವಲ 140 ರನ್ ಮಾತ್ರ. ಜತೆಗೆ ನಿರೀಕ್ಷಿತ ಮಟ್ಟದ ವಿಕೆಟ್ ಕೀಪಿಂಗ್ ನಡೆಸುವಲ್ಲಿಯೂ ವಿಫಲರಾಗಿದ್ದರು. ಹೀಗಾಗಿ ಅವರು ಮುಂದಿನ ಆವೃತ್ತಿಯಲ್ಲಿ ಆರ್ಸಿಬಿ ಪರ ಆಡುವುದು ಬಹುತೇಕ ಅನುಮಾನ ಅವರನ್ನು ತಂಡದಿಂದ ಕೈಬಿಡುವುದು ಖಚಿತ ಎನ್ನಲಡ್ಡಿಯಿಲ್ಲ.
ಅಭ್ಯಾಸ ಆರಂಭಿಸಿದ ಟೀಮ್ ಇಂಡಿಯಾ
ಆಸ್ಟ್ರೇಲಿಯಾ ವಿರುದ್ಧದ ಫೈನಲ್ ಪಂದ್ಯಕ್ಕೆ ಭಾರತ ತಂಡದ ಆಟಗಾರರು ಅಭ್ಯಾಸ ಆರಂಭಿಸಿದ್ದಾರೆ. ಬುಧವಾರ ತಂಡದ ಕೋಚ್ ರಾಹುಲ್ ದ್ರಾವಿಡ್ ಅವರ ಉಪಸ್ಥಿತಿಯಲ್ಲಿ ರೋಹಿತ್ ಶರ್ಮ, ವಿರಾಟ್ ಕೊಹ್ಲಿ, ಚೇತೇಶ್ವರ್ ಪುಜಾರ ಸೇರಿ ಹಲವರು ಬ್ಯಾಟಿಂಗ್ ಅಭ್ಯಾಸ ನಡೆಸಿದ್ದಾರೆ. ಉಳಿದಂತೆ ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್ ಕೂಡ ಬೌಲಿಂಗ್ ಅಭ್ಯಾಸ ಮಾಡಿದ್ದಾರೆ.