Site icon Vistara News

Dinesh Karthik: ಇಂಗ್ಲೆಂಡ್​ ತಂಡದಲ್ಲಿ ಹೊಸ ಜವಾಬ್ದಾರಿ ವಹಿಸಿಕೊಂಡ ಮಿಸ್ಟರ್ ಫಿನಿಶರ್ ಖ್ಯಾತಿಯ ದಿನೇಶ್ ಕಾರ್ತಿಕ್​

dinesh karthik

2022 ರಲ್ಲಿ ಟಿ20 ವಿಶ್ವಕಪ್​ನಲ್ಲಿ (T20 World Cup) ಭಾರತ ತಂಡದಲ್ಲಿ ಗೇಮ್ ಫಿನಿಶರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ದಿನೇಶ್​ ಕಾರ್ತಿಕ್(Dinesh Karthik) ಅವರ ಕ್ರಿಕೆಟ್ ಕೆರಿಯರ್ ಅಂತ್ಯವಾಯಿತೆ ಎಂಬ ಪ್ರಶ್ನೆ ಇದೀಗ ಅಭಿಮಾನಿಗಳಿಗೆ ಕಾಡುತ್ತಿದೆ. ಇದಕ್ಕೆ ಕಾರಣ ಅವರು ಇಂಗ್ಲೆಂಡ್ ಲಯನ್ಸ್(England Lions) ತಂಡದ ಬ್ಯಾಟಿಂಗ್ ಸಲಹೆಗಾರನ್ನಾಗಿ ಆಯ್ಕೆಯಾದದ್ದು.

ಹೌದು, ಇದೇ ತಿಂಗಳು ಭಾರತ ಮತ್ತು ಇಂಗ್ಲೆಂಡ್​ ನಡುವಣ ತವರಿನ ಟೆಸ್ಟ್​ ಸರಣಿ ಆರಂಭಗೊಳ್ಳಲಿದೆ. ಜನವರಿ 25 ರಿಂದ ಈ ಸರಣಿ ಆರಂಭವಾಗಲಿದೆ. ಸರಣಿಗೂ ಮುನ್ನ ಭಾರತ ಎ ಮತ್ತು ಇಂಗ್ಲೆಂಡ್ ಲಯನ್ಸ್ ನಡುವೆ ಎರಡು ಅಭ್ಯಾಸ ಪಂದ್ಯಗಳು ನಡೆಯಲಿವೆ. ಜನವರಿ 12 ಮತ್ತು 13 ರಂದು ಎರಡು ದಿನಗಳ ಅಭ್ಯಾಸ ಪಂದ್ಯಗಳು ನಡೆಯಲಿದೆ. ಆ ಬಳಿಕ ಜನವರಿ 17ರಿಂದ 20ರವರೆಗೆ ನಾಲ್ಕು ದಿನಗಳ ಪಂದ್ಯ ನಡೆಯಲಿದೆ. ಈ ಪಂದ್ಯಗಳಿಗೆ ದಿನೇಶ್ ಕಾರ್ತಿಕ್ ಅವರು ಇಂಗ್ಲೆಂಡ್ ಲಯನ್ಸ್ ತಂಡದ ಬ್ಯಾಟಿಂಗ್ ಸಲಹೆಗಾರನಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ.

ದಿನೇಶ್​ ಕಾರ್ತಿಕ್​ ಅವರ ಈ ಜವಾಬ್ದಾರಿ ತಾತ್ಕಾಲಿಕವಾಗಿರಲಿದೆ. ಇಂಗ್ಲೆಂಡ್‌ನ ಮಾಜಿ ಆಟಗಾರ ಇಯಾನ್ ಬೆಲ್ ಅವರ ಅನುಪಸ್ಥಿತಿಯಲ್ಲಿ ಕಾರ್ತಿಕ್ ಈ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ. ಇಯಾನ್​ ಬೆಲ್​ ಪ್ರಸ್ತುತ ಬಿಗ್ ಬ್ಯಾಷ್ ಲೀಗ್‌ನಲ್ಲಿ ಮೆಲ್ಬೋರ್ನ್ ರೆನೆಗೇಡ್ಸ್‌ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಹೀಗಾಗಿ ಅವರಿಗೆ ತಂಡ ಸೇರಲು ಸಾಧ್ಯವಾಗಿಲ್ಲ. ಈ ಕಾರಣಕ್ಕೆ ಕಾರ್ತಿಕ್ ಅವರನ್ನು ಬ್ಯಾಟಿಂಗ್ ಸಲಹೆಗಾರರನಾಗಿ ಆಯ್ಕೆ ಮಾಡಲಾಗಿದೆ ಎಂದು ಇಂಗ್ಲೆಂಡ್​ ಮತ್ತು ವೇಲ್ಸ್​ ಕ್ರಿಕೆಟ್ ಮಂಡಳಿ ತನ್ನ ಅಧಿಕೃತ ಪ್ರಕಟನೆಯಲ್ಲಿ ತಿಳಿಸಿದೆ.

ಇದನ್ನೂ ಓದಿ IND vs ENG: ಭಾರತ ಪ್ರವಾಸಕ್ಕೆ ಇಂಗ್ಲೆಂಡ್​ ತಂಡದೊಂದಿಗೆ ಬರಲಿದ್ದಾರೆ ಪ್ರಸಿದ್ಧ ಬಾಣಸಿಗ

ಆರ್​ಸಿಬಿ ಪರ ಐಪಿಎಲ್​ನಲ್ಲಿ ತೋರಿದ ಉತ್ತಮ ಪ್ರದರ್ಶನ ಕಂಡು ದಿನೇಶ್​ ಕಾರ್ತಿಕ್​ ಅವರಿಗೆ 2022ರಲ್ಲಿ ನಡೆದಿದ್ದ ಟಿ20 ವಿಶ್ವಕಪ್​ಗೆ ಅಚ್ಚರಿ ಎಂಬಂತೆ ಭಾರತ ತಂಡದದಲ್ಲಿ ಸ್ಥಾನ ನೀಡಲಾಗಿತ್ತು. ಅಲ್ಲದೆ ಅವರನ್ನು ಭಾರತೀಯ ಟಿ20 ತಂಡದ ಮೊದಲ ಆಯ್ಕೆಯ ವಿಕೆಟ್ ಕೀಪರ್ ಆಗಿ ಸ್ಥಾನ ನೀಡಲಾಗಿತ್ತು. ಆದರೆ, ಅವರು ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲರಾಗಿದ್ದರು. ಎಷ್ಟೋ ವರ್ಷಗಳ ಬಳಿಕ ಸಿಕ್ಕ ಸುವರ್ಣಾವಕಾಶವನ್ನು ಸದುಪಯೋಗಪಡಿಸುವಲ್ಲಿ ಎಡವಿದ್ದರು. ಹೀಗಾಗಿ ಅವರನ್ನು ತಂಡದಿಂದ ಕೈಬಿಡಲಾಗಿತ್ತು. ಬಳಿಕ ಯಾವುದೇ ಸರಣಿಗೂ ಆಯ್ಕೆ ಮಾಡಲಿಲ್ಲ. ಸದ್ಯ ಅವರು ನಿವೃತ್ತಿ ನೀಡದಿದ್ದರೂ ಕ್ರಿಕೆಟ್​ ಕಾಮೆಂಟ್ರಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

ಭಾರತ ಪ್ರವಾಸದಲ್ಲಿ ಇಂಗ್ಲೆಂಡ್​ ಒಟ್ಟು 5 ಪಂದ್ಯಗಳ ಟೆಸ್ಟ್​ ಸರಣಿ ಆಡಲಿದೆ. ಸರಣಿಯ ಮೊದಲ ಪಂದ್ಯ ಜನವರಿ 25ರಿಂದ ಹೈದರಾಬಾದ್​ನಲ್ಲಿ ನಡೆಯಲಿದೆ. ಬಳಿಕದ 4 ಟೆಸ್ಟ್​ಗಳನ್ನು ಕ್ರಮವಾಗಿ ವಿಶಾಖಪಟ್ಟಣ (ಫೆ.2-6), ರಾಜ್​ಕೋಟ್​ (ಫೆ.15-19), ರಾಂಚಿ (ಫೆ. 23-27) ಮತ್ತು ಧರ್ಮಶಾಲಾದಲ್ಲಿ (ಮಾ.7-11) ಆಡಲಿದೆ.

Exit mobile version