ಬೆಂಗಳೂರು: ಭಾರತ ಕ್ರಿಕೆಟ್ ತಂಡದ ಹಿರಿಯ ವಿಕೆಟ್ ಕೀಪರ್ ಕಮ್ ಬ್ಯಾಟರ್ ದಿನೇಶ್ ಕಾರ್ತಿಕ್(Dinesh Karthik) ಅವರು ಐಪಿಎಲ್ಗೆ(IPL 2024) ನಿವೃತ್ತಿ ಹೇಳಲಿದ್ದಾರೆ ಎಂದು ವರದಿಯಾಗಿದೆ. ಮಾರ್ಚ್ 22 ರಂದು ನಡೆಯುವ 18ನೇ ಆವೃತ್ತಿಯ ಉದ್ಘಾಟನ ಪಂದ್ಯವೇ ಕಾರ್ತಿಗೆ ಕೊನೆಯ ಪಂದ್ಯವಾಗಲಿದೆ ಎಂದು ಮೂಲಗಳು ತಿಳಿಸಿವೆ.
2024ರ ಆವೃತ್ತಿಯ ಐಪಿಎಲ್ ಉದ್ಘಾಟನ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ಮತ್ತು ಚೆನ್ನೈ ಸೂಪರ್ ಕಿಂಗ್ಸ್(CSK) ಮುಖಾಮುಖಿಯಾಗಲಿದೆ. ಈ ಪಂದ್ಯ ಚೆನ್ನೈಯ ಎಂ.ಎ. ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿದೆ. ಇದು ದಿನೇಶ್ ಕಾರ್ತಿಗೆ ತವರಿನ ಮೈದಾನ ಹೀಗಾಗಿ ಅವರು ತವರಿನ ಅಭಿಮಾನಿಗಳ ಮುಂದೆಯೇ ವಿದಾಯ ಹೇಳಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಕಾರ್ತಿಕ್ ಆರ್ಸಿಬಿ ತಂಡದ ಆಟಗಾರನಾಗಿದ್ದಾರೆ.
“2024 ರ ಆವೃತ್ತಿಯು ದಿನೇಶ್ ಕಾರ್ತಿಕ್ ಅವರ ಕೊನೆಯ ಐಪಿಎಲ್ ಆಗಿರುತ್ತದೆ. ಅವರು ಐಪಿಎಲ್ ವಿದಾಯದ ಬಳಿಕ ಕೆಲವೇ ದಿನಗಳಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಹೇಳಲು ನಿರ್ಧರಿಸಿದ್ದಾರೆ” ಎಂದು ಬಿಸಿಸಿಐ ಮೂಲಗಳು ಪಿಟಿಐಗೆ ತಿಳಿಸಿರುವುದಾಗಿ ವರದಿಯಾಗಿದೆ. 38 ವರ್ಷದ ದಿನೇಶ್ ಕಾರ್ತಿಕ್ ಅವರು 2008 ರಿಂದ ಆರಂಭಗೊಂಡ ಐಪಿಎಲ್‌ನಿಂದ ಹಿಡಿದು ಎಲ್ಲಾ 16 ಆವೃತ್ತಿಗಳಲ್ಲಿ ಆಡಿದ್ದಾರೆ. ಮತ್ತು 16 ಋತುಗಳಲ್ಲಿ ಕೇವಲ ಎರಡು ಪಂದ್ಯಗಳನ್ನು ಮಾತ್ರ ಕಳೆದುಕೊಂಡಿದ್ದಾರೆ.
ಇದನ್ನೂ ಓದಿ IPL 2024: ಆರ್ಸಿಬಿಗೆ ಮತ್ತೆ ಆತಂಕ ಸೃಷ್ಟಿಸಿದ ರಜತ್ ಪಾಟಿದಾರ್ ಗಾಯ
JUST IN :
— Cric Point (@RealCricPoint) March 7, 2024
Dinesh Karthik will be playing his last IPL in 2024.
– One of the rare player to feature in every season of IPL is set to retire this year. pic.twitter.com/C7gnpjkI25
2022ರ ಹರಾಜಿನಲ್ಲಿ ಕಾರ್ತಿಕ್ ಅವರು ಬರೋಬ್ಬರಿ 5.5 ಕೋಟಿ ರೂ. ಪಡೆದು ಆರ್ಸಿಬಿ ಕ್ಯಾಂಪ್ ಸೇರಿದ್ದರು. ಆ ಆವೃತ್ತಿಯಲ್ಲಿ ಕಾರ್ತಿಕ್ 14 ಇನ್ನಿಂಗ್ಸ್ ಗಳಲ್ಲಿ 287 ರನ್ ಬಾರಿಸಿದ್ದರು. ಜತೆಗೆ ತಂಡದಲ್ಲಿ ಫಿನಿಶರ್ ಪಾತ್ರವನ್ನು ನಿರ್ವಹಿಸಿದ್ದರು. ಇದೇ ಪ್ರದರ್ಶನ ಕಂಡು ಆಸ್ಟ್ರೇಲಿಯಾದಲ್ಲಿ ನಡೆದ ಕಂಡು ಟಿ20 ವಿಶ್ವಕಪ್ನಲ್ಲಿ ಭಾರತ ತಂಡದ ಆಡಿಸಲಾಗಿತ್ತು. ಆದರೆ ಇಲ್ಲಿ ಕಾರ್ತಿಕ್ ನಿರೀಕ್ಷಿತ ಮಟ್ಟದ ಪ್ರದರ್ಶನ ತೋರುವಲ್ಲಿ ವಿಫಲರಾಗಿದ್ದರು. ಜತೆಗೆ ಕಳೆದ ಐಪಿಎಲ್ ಟೂರ್ನಿಯಲ್ಲಿ ಘೋರ ವೈಫಲ್ಯ ಎದುರಿಸಿದ್ದರು. ಹೀಗಾಗಿ ಅವರು ಈ ಬಾರಿಯ ಐಪಿಎಲ್ನಲ್ಲಿ ವಿದಾಯ ಘೋಷಿಸಲಿದ್ದಾರೆ ಎನ್ನಲಾಗಿದೆ. ಕ್ರಿಕೆಟ್ ವಿದಾಯದ ಬಳಿಕ ಕಾಮೆಂಟ್ರಿ ಕ್ಷೇತ್ರದಲ್ಲೇ ಮುಂದುವರಿಯಲಿದ್ದಾರೆ ಎಂದು ವರದಿಯಾಗಿದೆ.
2004 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಪದಾರ್ಪಣೆ ಮಾಡಿದ ಕಾರ್ತಿಕ್ ಭಾರತ ಪರ 26 ಟೆಸ್ಟ್‌ಗಳನ್ನು ಆಡಿ 1025 ರನ್ ಗಳಿಸಿದ್ದಾರೆ. 57 ಕ್ಯಾಚ್‌ಗಳು ಮತ್ತು 6 ಸ್ಟಂಪಿಂಗ್‌ಗಳನ್ನು ಮಾಡಿದ್ದಾರೆ. ಅವರು ತಮ್ಮ ಕೊನೆಯ ಟೆಸ್ಟ್ ಆಡಿದ್ದು 2018 ರಲ್ಲಿ. ಏಕದಿನದಲ್ಲಿ 94 ಪಂದ್ಯಗಳನ್ನು ಆಡಿ 1752 ರನ್ ಗಳಿಸಿದ್ದಾರೆ. 64 ಕ್ಯಾಚ್‌ಗಳು ಮತ್ತು 7 ಸ್ಟಂಪಿಂಗ್‌ಗಳನ್ನು ನಿರ್ವಹಿಸಿದ್ದಾರೆ. 60 ಟಿ20 ಪಂದ್ಯಗಳಿಂದ 686 ರನ್ ಗಳಿಸಿ, 30 ಕ್ಯಾಚ್‌ಗಳು ಮತ್ತು 8 ಸ್ಟಂಪಿಂಗ್‌ಗಳನ್ನು ಮಾಡಿದ್ದಾರೆ.
ಐಪಿಎಲ್ ಟೂರ್ನಿಯಲ್ಲಿ 242 ಪಂದ್ಯಗಳನ್ನು ಆಡಿರುವ ದಿನೇಶ್ ಕಾರ್ತಿಕ್, ಅತ್ಯಧಿಕ ಐಪಿಎಲ್ ಪಂದ್ಯಗಳ್ನಾಡಿದ ಮೂರನೇ ಆಟಗಾರ ಎನಿಸಿಕೊಂಡಿದ್ದಾರೆ. 250 ಪಂದ್ಯಗಳನ್ನಾಡಿರುವ ಧೋನಿ ಅಗ್ರಸ್ಥಾನದಲ್ಲಿದ್ದಾರೆ. ಐಪಿಎಲ್ನಲ್ಲಿ 4516 ರನ್ ಬಾರಿಸಿದ್ದಾರೆ.