ಬೆಂಗಳೂರು: ಮುಂಬರುವ 17ನೇ ಆವೃತ್ತಿಯ ಐಪಿಎಲ್ನಲ್ಲಿ(IPL 2024) ಕಪ್ ಗೆಲ್ಲಲು ಪಣ ತೊಟ್ಟಿರುವ ಆರ್ಸಿಬಿ(RCB) ಫ್ರಾಂಚೈಸಿ ತಂಡದಲ್ಲಿ ಮಹತ್ವದ ಬದಲಾವಣೆ ಮಾಡಿದೆ. ತಂಡದ ಕೋಚ್ ಮತ್ತು ಹಲವು ಸಿಬ್ಬಂದಿಗಳನ್ನು ಕೈಬಿಡಲಾಗಿದೆ. ಕಳೆದ ನಾಲ್ಕು ವರ್ಷಗಳಿಂದ ಆರ್ಸಿಬಿ ತಂಡದ ಕ್ರಿಕೆಟ್ ನಿರ್ದೇಶಕರಾಗಿದ್ದ ಮೈಕ್ ಹೆಸ್ಸನ್(Mike Hesson) ಅವರನ್ನು ಕೂಡ ಫ್ರಾಂಚೈಸಿಯಿಂದ ಕೈಬಿಡಲಾಗಿದೆ. ಇದೇ ವಿಚಾರವಾಗಿ ಮೈಕ್ ಹೆಸ್ಸನ್ ಮೌನ ಮುರಿದಿದ್ದಾರೆ.
ಮುಂದಿನ ಆವೃತ್ತಿಗೆ ಲಕ್ನೋ ತಂಡದ ಕೋಚ್ ಆಗಿದ್ದ ಜಿಂಬಾಬ್ವೆಯ ಆ್ಯಂಡಿ ಫ್ಲವರ್ ಅವರನ್ನು ತಂಡದ ಮುಖ್ಯ ಕೋಚ್ ಆಗಿ ನೇಮಿಸಿದೆ. ಈ ಹಿಂದೆ ಆರ್ಸಿಬಿ ಕೋಚ್ ಆಗಿದ್ದ ಸಂಜಯ್ ಬಂಗಾರ್ ಅವರನ್ನು ಕೈ ಬಿಟ್ಟಿದೆ. ಆರ್ಸಿಬಿಯಿಂದ ಬೇರ್ಪಟ ವಿಚಾರವಾಗಿ ಮೈಕ್ ಹೆಸ್ಸನ್ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಆರ್ಸಿಬಿ ಜತೆಗಿನ ಭಾಂದವ್ಯದ ಬಗ್ಗೆ ಸುರ್ದೀಘ ಪತ್ರವೊಂದನ್ನು ಬರೆದಿದ್ದಾರೆ.
‘ಕಳೆದ 4 ಆವೃತ್ತಿಗಳಲ್ಲಿ ಆರ್ಸಿಬಿ ತಂಡವನ್ನು 3 ಬಾರಿ ಪ್ಲೇಆಫ್ ಹಂತಕ್ಕೇರಿಸುವಲ್ಲಿ ಯಶಸ್ವಿಯಾಗಿದ್ದರೂ ಕಪ್ ಗೆಲ್ಲಿಸಲು ಸಾಧ್ಯವಾಗಲಿಲ್ಲವಲ್ಲ ಎಂಬ ಬೇಸರ ಎಂದಿಗೂ ಕಾಡಲಿದೆ. ಆರ್ಸಿಬಿ ತೊರೆಯಲು ಹೃದಯ ಭಾರವಾಗುತ್ತಿದೆ. ಈ ತಂಡಕ್ಕಿರುವ ಅಭಿಮಾನಿಗಳ ಬೆಂಬಲ ಬೇರೆ ಯಾವ ತಂಡಕ್ಕೂ ಸಿಗಲು ಸಾಧ್ಯವಿಲ್ಲ. ಆರ್ಸಿಬಿ ಎನ್ನುವುದು ಕೇಲವ ಒಂದು ತಂಡವಲ್ಲ. ಇದೊಂದು ಕುಟುಂಬ ಇದ್ದಂತೆ, ಇಂತಹ ಒಳ್ಳೆಯ ಕುಟುಂಬದಿಂದ ಬೇರ್ಪಡುತ್ತಿರುವುದಕ್ಕೆ ಖಂಡಿತ ಬೇಸರವಿದೆ. ಇಲ್ಲಿ ಕಳೆದ ನೆನಪು ಎಂದುಗೂ ಮರೆಯಲು ಅಸಾಧ್ಯ” ಎಂದು ಮೈಕ್ ಹೆಸ್ಸನ್ ಭಾವುಕ ಪತ್ರವೊಂದನ್ನು ಬರೆದಿದ್ದಾರೆ.
ಇದನ್ನೂ ಓದಿ RCB: ಆರ್ಸಿಬಿ ತಂಡಕ್ಕೆ ಆ್ಯಂಡಿ ಫ್ಲವರ್ ನೂತನ ಕೋಚ್; ಬದಲಾದೀತೇ ಲಕ್!
“ಆರ್ಸಿಬಿ ಮ್ಯಾನೇಜ್ ಮೆಂಟ್ಗೆ ಧನ್ಯವಾದಗಳು. ಹೊಸ ಕೋಚಿಂಗ್ ತಂಡಕ್ಕೆ ಆಲ್ ದಿ ಬೆಸ್ಟ್. ಮುಂದಿನ ಬಾರಿ ಆರ್ಸಿಬಿ ಕಪ್ ಗೆಲ್ಲುವ ಮೂಲಕ ಅಭಿಮಾನಿಗಳ ಕನಸು ನನಸಾಗುತ್ತದೆ. ಇಚ್ಟು ವರ್ಷ ಈ ತಂಡದಲ್ಲಿ ಕರ್ತವ್ಯ ನಿರ್ವಹಿಸಲು ಸಹಕರಿಸಿದ ಎಲ್ಲ ತಂಡದ ಆಟಗಾರರಿಗೂ, ಅಭಿಮಾನಿಗಳಿಗೂ ಧನ್ಯವಾದ ಹೇಳುತ್ತೇನೆ’ ಎಂದು ಮೈಕ್ ಹೆಸ್ಸನ್ ಹೇಳಿದರು.
ಮುಂದಿನ ಆವೃತ್ತಿಯಲ್ಲಿ ಮಾಜಿ ಆಟಗಾರ ಐಪಿಎಲ್ ದಂತಕಥೆ ಎಬಿ ಡಿವಿಲಿಯರ್ಸ್ ಅವರು ಆರ್ಸಿಬಿ ತಂಡದ ಮಾರ್ಗದರ್ಶಕರಾಗಿ ನೇಮಗೊಳ್ಳುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ. ತಂಡದೊಳಗೆ ಈ ಬೆಳವಣಿಗೆ ಆರಂಭವಾಗಿದೆ. ಆದರೆ, ಅಧಿಕೃತ ಮಾಹಿತಿ ಪ್ರಕಟಗೊಂಡಿಲ್ಲ. ಫ್ರಾಂಚೈಸಿಯ ಯಶಸ್ಸಿಗೆ ಗಮನಾರ್ಹ ಕೊಡುಗೆ ನೀಡಿದ ಎಬಿ ಡಿವಿಲಿಯರ್ಸ್ ಆ್ಯಂಡಿ ಫ್ಲವರ್ ಅವರೊಂದಿಗೆ ಮಾರ್ಗದರ್ಶಕರಾಗಿ ಕೆಲಸ ಮಾಡುವ ಸಾಧ್ಯತೆಯಿದೆ ಎಂದು ಇನ್ಸೈಡ್ ಸ್ಪೋರ್ಟ್ಸ್ ವರದಿ ಮಾಡಿದೆ.