ಮುಂಬಯಿ : ಬೆಂಗಳೂರು ಬುಲ್ಸ್ ತಂಡದ ಪ್ರೊ ಕಬಡ್ಡಿ ಲೀಗ್ (pro kabaddi league) 2022ನೇ ಅಭಿಯಾನ ಕೊನೆಗೊಂಡಿದೆ. ಗುರುವಾರ ನಡೆದ ಸೆಮಿ ಫೈನಲ್ ಪಂದ್ಯದಲ್ಲಿ ಬಲಿಷ್ಠ ಜೈಪುರ ಪಿಂಕ್ ಪ್ಯಾಂಥರ್ಸ್ ವಿರುದ್ಧದ 49-29 ಅಂಕಗಳಿಂದ ಸೋತ ಬುಲ್ಸ್ ನಿರಾಸೆ ಎದುರಿಸಿತು.
ಇಲ್ಲಿನ ಡೋಮ್ ಎನ್ಎಸ್ಸಿಐ ಎಸ್ವಿಪಿ ಸ್ಟೇಡಿಯಮ್ನಲ್ಲಿ ನಡೆದ ಹಣಾಹಣಿಯಲ್ಲಿ ಜೈಪುರ ತಂಡ ಸಂಪೂರ್ಣ ಪಾರಮ್ಯ ಸಾಧಿಸಿತು. ಅದರಲ್ಲೂ ಪ್ಯಾಂಥರ್ಸ್ ರೇಡರ್ಗಳು ಬೆಂಗಳೂರಿನ ಬಲಿಷ್ಠ ರಕ್ಷಣಾ ವಿಭಾಗವನ್ನು ಚಿಂದಿ ಮಾಡಿದರು. ಒಂದು ಬಾರಿ ಬುಲ್ಸ್ ಪಡೆಯನ್ನು ಆಲ್ಔಟ್ ಮಾಡುವ ಜತೆಗೆ 20 ಅಂಕಗಳ ಮುನ್ನಡೆಯೊಂದಿಗೆ ಜಯ ಸಾಧಿಸಿತು.
ಹಿಂದಿನ ಪಂದ್ಯದಲ್ಲಿ ಹಾಲಿ ಚಾಂಪಿಯನ್ ದಬಾಂಗ್ ಡೆಲ್ಲಿ ವಿರುದ್ಧ ಭರ್ಜರಿ ಜಯ ಸಾಧಿಸಿದ್ದ ಬುಲ್ಸ್ ಪಡೆ ಅದೇ ಮಾದರಿಯ ಪ್ರದರ್ಶನ ಮುಂದುವರಿಸಲು ವಿಫಲಗೊಂಡಿತು. ಸ್ಟಾರ್ ರೇಡರ್ ವಿಕಾಸ್ ಕಂಡೋಲಾ ಐದು ಅಂಕಗಳಿಗೆ ಸೀಮಿತಗೊಂಡರೆ, ಭರತ್ಗೆ ಏಳು ಅಂಕಗಳನ್ನು ಮಾತ್ರ ಸಂಪಾದಿಸಲು ಸಾಧ್ಯವಾಯಿತು. ಪಿಂಕ್ ಪ್ಯಾಂಥರ್ಸ್ ತಂಡದ ಡಿಫೆಂಡರ್ಗಳಾದ ಸಾಹುಲ್ ಕುಮಾರ್ (10 ಅಂಕ) ಹಾಗೂ ಅಂಕುಶ್ (5 ಅಂಕ) ಬೆಂಗಳೂರಿನ ರೇಡರ್ಗಳು ಕೋರ್ಟ್ನಿಂದ ಹೊರಗಿರುವಂತೆ ನೋಡಿಕೊಂಡರು.
ದಿನದ ಇನ್ನೊಂದು ಸೆಮಿಫೈನಲ್ ಪಂದ್ಯದಲ್ಲಿ ತಮಿಳ್ ತಲೈವಾಸ್ ತಂಡವನ್ನು 39-37 ಅಂಕಗಳಿಂದ ಮಣಿಸಿದ ಪುಣೇರಿ ಪಲ್ಟನ್ ತಂಡ ಫೈನಲ್ಗೇರಿತು. ಶನಿವಾರ (ಡಿಸೆಂಬರ್ 17ರಂದು) ಜೈಪುರ ಹಾಗೂ ಪುಣೇರಿ ತಂಡಗಳ ನಡುವೆ ಫೈನಲ್ ನಡೆಯಲಿದೆ.
ಇದನ್ನೂ ಓದಿ | PKL 2022 | ಪ್ರೊ ಕಬಡ್ಡಿಗೆ ಪವನ್ ಸೆಹ್ರಾವತ್ ಎಂಟ್ರಿ; ಅಭಿಮಾನಿಗಳಿಗೆ ಫುಲ್ ಖುಷ್!