ಬೆಂಗಳೂರು: ಬಹುನಿರೀಕ್ಷಿತ ಭಾರತ ಹಾಗೂ ಪಾಕಿಸ್ತಾನ ನಡುವಿನ ಏಕದಿನ ವಿಶ್ವಕಪ್(ind vs pak world cup) ಕ್ರಿಕೆಟ್ ಪಂದ್ಯ ನಿಗದಿತ ವೇಳಾಪಟ್ಟಿಯ ಒಂದು ದಿನ ಮೊದಲು ನಡೆಯುತ್ತದೆ ಎಂಬ ಸುದ್ದಿ ಹೊರಬಿದ್ದ ಬೆನ್ನಲ್ಲೇ ಇದೀಗ ಉಭಯ ತಂಡಗಳ ನಡುವಿನ ಪಂದ್ಯದ ವೇಳೆ ಪ್ರಸಾರಗೊಳ್ಳುವ ಜಾಹೀರಾತಿನ ಮೌಲ್ಯವೊಂದು ಪ್ರಕಟಗೊಂಡಿದ್ದು ಎಲ್ಲರ ಅಚ್ಚರಿಗೆ ಕಾರಣವಾಗಿದೆ.
ಟೂರ್ನಿಯ ಪ್ರಸಾರಕರಾದ ಡಿಸ್ನಿ ಸ್ಟಾರ್ ಸಂಸ್ಥೆಯು ಸಂಪೂರ್ಣ ಲಾಭ ಪಡೆಯಲು ಯೋಜನೆಯೊಂದನ್ನು ರೂಪಿಸಿದೆ. ಇತ್ತಂಡಗಳ ನಡುವಿನ ಪಂದ್ಯದ ವೇಳೆ ಪ್ರತಿ 10 ಸೆಕೆಂಡ್ ಜಾಹೀರಾತಿಗೆ ಬರೋಬ್ಬರಿ 30 ಲಕ್ಷ ನಿಗದಿಪಡಿಸಿದೆ ಎನ್ನಲಾಗಿದೆ. ಭಾರತದ ಇತರ ಪಂದ್ಯಗಳ ವೇಳೆ 10 ಸೆಕೆಂಡ್ ಜಾಹೀರಾತಿನ ಸ್ಲಾಟ್‌ಗಳನ್ನು ಅಂದಾಜು 10 ಲಕ್ಷಗೆ ಮಾರಾಟ ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ.
ಆರಂಭಿಕ ಹಂತದಲ್ಲಿ ಉಭಯ ತಂಡಗಳ ಈ ಪಂದ್ಯದ ವೇಳೆ ಪ್ರತಿ 10 ಸೆಕೆಂಡ್ ಜಾಹೀರಾತಿಗೆ 17ರಿಂದ 18 ಲಕ್ಷ ಮೊತ್ತವನ್ನು ನಿಗದಿ ಪಡಿಸಲಾಗಿತ್ತು. ಆದರೆ ಪಂದ್ಯದ ಬೇಡಿಕೆ ಹೆಚ್ಚಾದದ್ದನ್ನು ಕಂಡ ಡಿಸ್ನಿ ಸ್ಟಾರ್ ಸಂಸ್ಥೆಯು ಇದರ ಸಂಪೂರ್ಣ ಲಾಭವೆತ್ತಲು ಮೌಲ್ಯವನ್ನು 30 ಲಕ್ಷಕ್ಕೆ ಏರಿಸಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ Pakistan Cricket : ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ವಿರುದ್ಧವೇ ತಿರುಗಿ ಬಿದ್ದ ಅಲ್ಲಿನ ಆಟಗಾರರು!
ಪೂರ್ವ ನಿಗದಿಯಂತೆ ಭಾರತ ಹಾಗೂ ಪಾಕಿಸ್ತಾನ ನಡುವಿನ ಏಕದಿನ ವಿಶ್ವಕಪ್ ಪಂದ್ಯ ಅಕ್ಟೋಬರ್ 15ರ ಬದಲು ಅಕ್ಟೋಬರ್ 14ರಂದು ನಡೆಯುವ ಸಾಧ್ಯತೆ ಇದೆ. ಅಕ್ಟೋಬರ್ 15ರಂದು ಅಹಮದಾಬಾದ್‌ನಲ್ಲಿ ನವರಾತ್ರಿ ಸಂಭ್ರಮಾಚರಣೆ ಆರಂಭಗೊಳ್ಳಲಿರುವ ಕಾರಣ ಭದ್ರತಾ ಸಮಸ್ಯೆ ಎದುರಾಗಬಹುದು ಎಂದು ಭದ್ರತಾ ಏಜೆನ್ಸಿಗಳು ಸಲಹೆ ನೀಡಿದ ಕಾರಣದಿಂದ ಈ ಪಂದ್ಯದ ದಿನಾಂಕವನ್ನು ಬದಲಿಸುವ ಸಾಧ್ಯತೆ ಇದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದರೆ ಇದು ಅಧಿಕೃತಗೊಂಡಿಲ್ಲ. ಈ ಸಂಬಂಧ ಐಸಿಸಿ ಹಾಗೂ ಬಿಸಿಸಿಐ ಶೀಘ್ರದಲ್ಲೇ ಚರ್ಚಿಸಿ ಅಧಿಕೃತ ನಿರ್ಧಾರ ಕೈಗೊಳ್ಳಲಿವೆ ಎನ್ನಲಾಗಿದೆ.
ಈಗಾಗಲೇ ಈ ಪಂದ್ಯವನ್ನು ಕಣ್ತುಂಬಿಕೊಳ್ಳುವ ನಿಟ್ಟಿನಲ್ಲಿ ಅಭಿಮಾನಿಗಳು ತುದಿಗಾಲಲ್ಲಿ ನಿಂತು ಕಾಯುತ್ತಿದ್ದಾರೆ. ಅಹಮದಾಬಾದ್ನ ಬಹುತೇಕ ಹೋಟೆಲ್ಗಳು ಬುಕ್ ಆಗಿವೆ. ವಿಶ್ವ ಕಪ್ ಟೂರ್ನಿ(ICC World Cup 2023) ಅಕ್ಟೋಬರ್ 5 ರಿಂದ ಆರಂಭಗೊಂಡು ನವೆಂಬರ್ 19 ತನಕ ನಡೆಯಲಿದೆ. ಒಟ್ಟು 48 ಪಂದ್ಯಗಳು ನಡೆಯಲಿದ್ದು 10 ತಂಡಗಳು ಸೆಣಸಾಟ ನಡೆಸಲಿವೆ. ದೇಶದ ಪ್ರಮುಖ 10 ತಾಣಗಳಲ್ಲಿ ಈ ಪಂದ್ಯ ನಡೆಯಲಿದೆ. ಉದ್ಘಾಟನ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಮತ್ತು ನ್ಯೂಜಿಲ್ಯಾಂಡ್ ತಂಡಗಳು ಮುಖಾಮುಖಿಯಾಗಲಿವೆ. ಭಾರತ ತಂಡ ತನ್ನ ಮೊದಲ ಪಂದ್ಯವನ್ನು ಅಕ್ಟೋಬರ್ 8ರಂದು ಆಡುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿದೆ.