ಭಾರತದ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ದಾಂಪತ್ಯ ಶೀಘ್ರವೇ ಕೊನೆಗೊಳ್ಳಲಿದೆ.. ಸಾನಿಯಾ ಮಿರ್ಜಾ ಮತ್ತು ಆಕೆಯ ಪತಿ ಶೋಯೆಬ್ ಮಲಿಕ್ ವಿಚ್ಛೇದನ ತೆಗೆದುಕೊಳ್ಳಲಿದ್ದಾರೆ ಎಂಬ ಸುದ್ದಿ ಬಲವಾಗಿ ಹರಡುತ್ತಿದೆ ಮತ್ತು ಸಾನಿಯಾ ಮಿರ್ಜಾರ ಕೆಲವು ಸೋಷಿಯಲ್ ಮೀಡಿಯಾ ಪೋಸ್ಟ್ಗಳು ಅದಕ್ಕೆ ಪುಷ್ಟಿ ಕೊಡುವಂತಿದೆ. ಸಾನಿಯಾ ಮಿರ್ಜಾ ಇತ್ತೀಚೆಗೆ ತಮ್ಮ ಇನ್ಸ್ಟಾಗ್ರಾಂನಲ್ಲಿ ಒಂದು ಸ್ಟೋರಿ ಹಾಕಿ, ‘ಒಡೆದು ಹೋದ ಹೃದಯಗಳು ಅಲ್ಲಾನನ್ನು ಅರಿಸುತ್ತ ಹೋಗುತ್ತವೆ’ ಎಂದು ಬರೆದಿದ್ದರು. ಆಗಿನಿಂದಲೂ ಸಾನಿಯಾ ಮಿರ್ಜಾ ದಾಂಪತ್ಯದ ಬಗ್ಗೆ ಇನ್ನಿಲ್ಲದಂತೆ ಚರ್ಚೆ ನಡೆಯುತ್ತಿದೆ.
ಸಾನಿಯಾ ಮಿರ್ಜಾ ಮತ್ತು ಶೋಯೆಬ್ ಮಲ್ಲಿಕ್ ನಡುವೆ ಏನಾಗಿದೆ? ಅವರ ಸಂಬಂಧ ಯಾಕೆ ಹಳಸಿದೆ ಎಂಬ ಬಗ್ಗೆ ಖಚಿತ ಮಾಹಿತಿ ಇಲ್ಲ. ಆದರೆ ಪಾಕಿಸ್ತಾನ ಮಾಧ್ಯಮಗಳೂ ಕೂಡ ಇವರಿಬ್ಬರ ದಾಂಪತ್ಯದಲ್ಲಿ ಬಿರುಕು ಬಂದ ಬಗ್ಗೆ ಈಗಾಗಲೇ ವರದಿ ಮಾಡಿವೆ. ಶೋಯೆಬ್ ಮಲಿಕ್ ಅವರು ಸಾನಿಯಾ ಮಿರ್ಜಾಗೆ ಮೋಸ ಮಾಡಿದ್ದಾರೆ. ಸಾನಿಯಾ ಮತ್ತು ಶೋಯೆಬ್ ಈಗಾಗಲೇ ಪ್ರತ್ಯೇಕವಾಗಿಯೇ ವಾಸಿಸುತ್ತಿದ್ದಾರೆ. ಮಗ ಇಝಾನ್ಗೋಸ್ಕರ ಸಹಿಸಿಕೊಂಡಿದ್ದಾರೆ. ಅವರು ವಿಚ್ಛೇದನದ ಹಂತ ತಲುಪಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.
ಇತ್ತೀಚೆಗೆ ಇಝಾನ್ ಹುಟ್ಟುಹಬ್ಬ ನಡೆದಿತ್ತು. ಅದರಲ್ಲಿ ಸಾನಿಯಾ ಮಿರ್ಜಾ ಮತ್ತು ಶೋಯೆಬ್ ಮಲಿಕ್ ಇಬ್ಬರೂ ಒಟ್ಟಾಗಿ ಮಗನ ಬರ್ತ್ಡೇ ಆಚರಿಸಿದ್ದರು. ಕೇಕ್ ಕೂಡ ಕತ್ತರಿಸಲಾಗಿತ್ತು. ಬಳಿಕ ಸಾನಿಯಾ ಮಿರ್ಜಾ ಮತ್ತು ಶೋಯೆಬ್ ಮಲಿಕ್ ಫೋಟೋಗಳನ್ನು ಹಂಚಿಕೊಂಡಿದ್ದರು. ಇದರಲ್ಲಿ ಗಮನಸೆಳೆದಿದ್ದು ಶೋಯೆಬ್ ಮಲಿಕ್ ಫೋಟೋದೊಟ್ಟಿಗೆ ಹಾಕಿದ್ದ ಕ್ಯಾಪ್ಷನ್. ‘ನೀನು ಹುಟ್ಟಿದ ಕ್ಷಣ ನಮ್ಮ ಪಾಲಿಗೆ ತುಂಬ ವಿಶೇಷವಾಗಿತ್ತು. ಜೀವನಕ್ಕೊಂದು ಅರ್ಥ ಸಿಕ್ಕಿತ್ತು. ನಾವೆಲ್ಲ ಒಟ್ಟಿಗೆ ಇಲ್ಲದೆ ಇರಬಹುದು, ಪ್ರತಿದಿನ ಭೇಟಿಯಾಗಲೂ ಆಗದೆ ಇರಬಹುದು. ಆದರೆ ನಾನು ಯಾವತ್ತೂ ನಿನ್ನ ಮತ್ತು ನಿನ್ನ ನಗುವಿನ ಬಗ್ಗೆಯೇ ಯೋಚಿಸುತ್ತಿರುತ್ತೇನೆ. ಅದೇ ನನ್ನ ಆದ್ಯತೆಯಾಗಿರುತ್ತದೆ’ ಎಂದು ಶೋಯೆಬ್ ಬರೆದಿದ್ದರು. ಶೋಯೆಬ್ ಮಗನೊಂದಿಗೆ ಇಲ್ಲ ಎಂಬ ಭಾವವನ್ನೇ ಇದು ಸಾರಿತ್ತು.
ಹಾಗೇ, ಇನ್ನೊಂದು ದಿನ ಸಾನಿಯಾ ಮಿರ್ಜಾ ಸೋಷಿಯಲ್ ಮೀಡಿಯಾದಲ್ಲಿ ಮಗನೊಂದಿಗೆ ಇರುವ ಫೋಟೋ ಹಾಕಿದ್ದರು ಮತ್ತು ಅದಕ್ಕೆ, ‘ನನ್ನ ಕಷ್ಟದ ದಿನಗಳಲ್ಲಿ ಸಿಕ್ಕ ಕ್ಷಣಗಳಿವು’ ಎಂದು ಕ್ಯಾಪ್ಷನ್ ಬರೆದುಕೊಂಡಿದ್ದರು. ಸಾನಿಯಾ ಮಿರ್ಜಾ ಸೋಷಿಯಲ್ ಮೀಡಿಯಾದಲ್ಲಿ ಇತ್ತೀಚೆಗೆ ಹಾಕಲ್ಪಟ್ಟ ಪೋಸ್ಟ್ಗಳಲ್ಲಿ ಪತಿ ಶೋಯೆಬ್ ಮಲಿಕ್ ಇಲ್ಲ. ಮಗನೊಂದಿಗೆ ಇರುವ ಅಥವಾ ತಾವೊಬ್ಬರೇ ಇರುವ ಫೋಟೋಗಳನ್ನಷ್ಟೇ ಅಪ್ಲೋಡ್ ಮಾಡುತ್ತಿದ್ದಾರೆ. ಅದರಲ್ಲೂ ಈಗಂತೂ ಸಾನಿಯಾ ಮಿರ್ಜಾ ಡಿವೋರ್ಸ್ ಪಕ್ಕಾ ಎಂಬರ್ಥದ ಚರ್ಚೆಗಳೇ ನಡೆಯುತ್ತಿವೆ.
ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಮತ್ತು ಶೋಯೆಬ್ ಮಲಿಕ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು 2010ರಲ್ಲಿ. ಅವರ ವಿವಾಹವಾಗಿ ಈಗ 12 ವರ್ಷಗಳು ಕಳೆದಿವೆ. ನಾಲ್ಕು ವರ್ಷದ ಪುತ್ರನೂ ಇದ್ದಾನೆ.
ಇದನ್ನೂ ಓದಿ: US Open | ಗಾಯದ ಸಮಸ್ಯೆಯಲ್ಲಿ ಸಿಲುಕಿರುವ ಸಾನಿಯಾ ಮಿರ್ಜಾ ಗ್ರ್ಯಾನ್‌ಸ್ಲಾಮ್ ಟೂರ್ನಿಗೆ ಅಲಭ್ಯ