ನವ ದೆಹಲಿ: ಟೀಮ್ ಇಂಡಿಯಾದ ಆಲ್ಟೈಮ್ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಕ್ರಿಕೆಟ್ಗಾಗಿ ಶಿಕ್ಷಣವನ್ನು ಮೊಟಕುಗೊಳಿಸಿದವರು. 12ನೇ ತರಗತಿ ಮುಕ್ತಾಯಗೊಂಡ ಬಳಿಕ ಅವರು ವಿದ್ಯಾಭ್ಯಾಸ ಮುಂದುವರಿಸದೇ ಕ್ರಿಕೆಟ್ಗಾಗಿ ಬದುಕು ಮುಡಿಪಾಗಿಟ್ಟಿದ್ದರು. ಹೀಗಾಗಿ ಶೈಕ್ಷಣಿಕ ವಿಚಾರಕ್ಕೆ ಹೆಚ್ಚು ಡಿಗ್ರಿಗಳನ್ನೇನೂ ಪಡೆದುಕೊಂಡಿಲ್ಲ. ಇವೆಲ್ಲದರ ನಡುವೆಯೂ ಶಾಲಾ ದಿನಗಳಲ್ಲಿ ವಿರಾಟ್ ಕೊಹ್ಲಿಯ ಕಲಿಕೆ ಮಟ್ಟ ಹೇಗಿದ್ದರಬಹುದು ಎಂಬ ಕುತೂಹಲ ಅಭಿಮಾನಿಗಳಿಗೆ ಇದ್ದೇ ಇದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇದುವರೆಗೆ ಇರಲಿಲ್ಲ. ಇದೀಗ ಸ್ವಯಂ ವಿರಾಟ್ ಕೊಹ್ಲಿಯೇ ತಮ್ಮ 10ನೇ ತರಗತಿಯ ಮಾರ್ಕ್ ಕಾರ್ಡ್ ಅನ್ನು ಶೇರ್ ಮಾಡಿಕೊಂಡಿದ್ದಾರೆ. ಅದರಲ್ಲಿ ವಿರಾಟ್ ಕೊಹ್ಲಿ ಯಾವುದೆಲ್ಲ ವಿಷಯದಲ್ಲಿ ಎಷ್ಟೆಷ್ಟು ಮಾರ್ಕ್ ತೆಗೆದಕೊಂಡಿದ್ದಾರೆ ಎಂಬುದು ಗೊತ್ತಾಗಿದೆ.
ವಿರಾಟ್ ಕೊಹ್ಲಿ ಹಿಂದೊಮ್ಮೆ ಸಂದರ್ಶನದಲ್ಲಿ ತಮಗೆ ಗಣಿತದ ಅಲರ್ಜಿ ಇರುವುದಾಗಿ ಹೇಳಿಕೊಂಡಿದ್ದರು. ಗಣಿತದಲ್ಲಿ ಪಾಸ್ ಆಗುವುದಕ್ಕೆ ತಾವು ಪಟ್ಟ ಕಷ್ಟವನ್ನು ಹೇಳಿಕೊಂಡಿದ್ದಾರೆ. ಇದೇ ವೇಳೆ ಅವರು ಗಣಿತದ ಅಗತ್ಯವೇನು ಎಂಬುದನ್ನೂ ಪ್ರಶ್ನಿಸಿದ್ದರು. ಇದೀಗ ಅವರು ಯಾಕೆ ಗಣಿತವನ್ನು ದ್ವೇಷ ಮಾಡಿದ್ದರು ಎಂಬುದು ಗೊತ್ತಾಗಿದೆ. ಯಾಕೆಂದರೆ 10ನೇ ತರಗತಿಯಲ್ಲಿ ಕೊಹ್ಲಿ ಗಣಿತದಲ್ಲಿ ಪಡೆದ ಮಾರ್ಕ್ 51. ಹೇಗಾದರೂ ಮಾಡಿ ಪಾಸ್ ಮಾಡಬೇಕು ಎಂಬು ಹಠದಲ್ಲಿ ಅವರು ಅಷ್ಟು ಮಾರ್ಕ್ ಪಡೆದುಕೊಂಡಿದ್ದರು.
ಇಂಗ್ಲಿಷ್‌ನಲ್ಲಿ 83, ಹಿಂದಿಯಲ್ಲಿ 75, ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ 55, ಸಮಾಜ ವಿಜ್ಞಾನದಲ್ಲಿ 81, ಇಂಟ್ರಡಕ್ಟರಿ ಐಟಿಯಲ್ಲಿ 74 ಅಂಕಗಳನ್ನು ಪಡೆದಿದ್ದಾರೆ. ಈ ಎಲ್ಲ ವಿಷಯಗಳಲ್ಲಿ ವಿರಾಟ್ಕೊಹ್ಲಿಗೆ ಆಸಕ್ತಿ ಇತ್ತ ಎಂಬುದು ಮಾರ್ಕ್ ಕಾರ್ಡ್ ಮೂಲಕ ಗೊತ್ತಾಗಿದೆ.
ಮೂರು ಪೆಗ್ಗಿನ ಕತೆ ಹೇಳಿದ ವಿರಾಟ್ ಕೊಹ್ಲಿ
ಭಾರತೀಯ ಕ್ರಿಕೆಟ್ ತಂಡದ ಆಟಗಾರ ವಿರಾಟ್ ಕೊಹ್ಲಿ (Virat Kohli) ಮತ್ತು ಅವರ ಪತ್ನಿ, ಬಾಲಿವುಡ್ ನಟಿ ಅನುಷ್ಕಾ ಶರ್ಮಾ(anushka sharma) ಅದೆಷ್ಟೋ ಜನರಿಗೆ ಸ್ಫೂರ್ತಿಯಾಗಿದ್ದಾರೆ. ಕೊಹ್ಲಿಯ ಎಲ್ಲ ಏರಿಳಿತದಲ್ಲಿಯೂ ಪತ್ನಿ ಅನುಷ್ಕಾ ಬೆಂಬಲಕ್ಕೆ ನಿಂತು ಅವರಿಗೆ ಸಾದಾ ಪ್ರೋತ್ಸಾಹವನ್ನು ನೀಡುತ್ತಲೇ ಬಂದಿದ್ದಾರೆ. ಆದರೆ ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಅನುಷ್ಕಾ ಶರ್ಮಾ ಅವರು ವಿರಾಟ್ ಕೊಹ್ಲಿಯ ಕುಡಿತದ ಚಟದ ಬಗ್ಗೆ ರೋಚಕ ಸಂಗತಿಯೊಂದನ್ನು ತಿಳಿಸಿದ್ದಾರೆ.
ಸಾಮಾನ್ಯವಾಗಿ ನೀವಿಬ್ಬರು ಪಾರ್ಟಿಗಳಿಗೆ ಹೋದಾಗ ಯಾರನ್ನು ಹೆಚ್ಚಾಗಿ ಜನ ಗುರುತಿಸುತ್ತಾರೆ? ಎಂಬ ಪ್ರಶ್ನೆಗೆ ಉತ್ತರಿಸಿದ ಅನುಷ್ಕಾ ಶರ್ಮಾ, ಅದು ವಿರಾಟ್ ಕೊಹ್ಲಿ ಎಂದು ಹೇಳಿದ್ದಾರೆ. ಇದಕ್ಕೆ ಕಾರಣವನ್ನು ಅವರು ತಿಳಿಸಿದ್ದಾರೆ. ಕೊಹ್ಲಿ ಮೂರು ಪೆಗ್ ಹಾಕಿದ ಬಳಿಕ ಡ್ಯಾನ್ಸ್ ಮಾಡಲು ಆರಂಭಿಸುತ್ತಾರೆ. ಹೀಗಾಗಿ ಅಲ್ಲಿದ್ದವರು ಕೊಹ್ಲಿಯ ಕಡೆ ಹೆಚ್ಚು ಗಮನ ಕೊಡುತ್ತಾರೆ. ಒಮ್ಮೆ ಅವರು ನೃತ್ಯ ಆರಂಭಿಸಿದರೆ ಇದನ್ನು ಯಾರಿಂದಲೂ ತಡೆಯಲು ಅಸಾಧ್ಯ ಎಂದು ಹೇಳಿದರು.
ಪತ್ನಿಯ ಈ ಮಾತನ್ನು ನಗುತ್ತಲೇ ಒಪ್ಪಿಕೊಂಡ ವಿರಾಟ್, ಇದು ನಿಜ. ನಾನು ಎರಡು ಪೆಗ್ಗಳಿಗಿಂತಲೂ ಹೆಚ್ಚು ಕುಡಿದೆನೆಂದರೆ ಡ್ಯಾನ್ಸ್ ಮಾಡಲು ಆರಂಭಿಸುತ್ತೇನೆ. ಆ ಬಳಿಕ ನಾನು ಏನು ಮಾಡುತ್ತೇನೆ ಎಂಬ ಅರಿವೇ ನನಗಿರುವುದಿಲ್ಲ. ಆದರೆ ಈ ವರ್ತನೆಯನ್ನು ಈಗ ನೆನಪಿಸಿಕೊಂಡರೆ ನನಗೆ ನಾಚಿಕೆಯಾಗುತ್ತದೆ. ಈಗ ನಾನು ಕುಡಿತದಿಂದ ಮುಕ್ತವಾಗಿದ್ದೇನೆ. ಇದಕ್ಕೆ ಒಂದು ರೀತಿಯಲ್ಲಿ ಪತ್ನಿ ಅನುಷ್ಕಾ ಕೂಡ ಕಾರಣ. ಅವಳು ನನ್ನ ಬದುಕಿನಲ್ಲಿ ಬಂದ ಬಳಿಕ ಹಲವು ವಿಚಾರದಲ್ಲಿ ನಾನು ಸುಧಾರಿಸಿಕೊಂಡಿದ್ದೇನೆ ಎಂದು ಕೊಹ್ಲಿ ಹೇಳಿದರು.