ನವ ದೆಹಲಿ: ಪಾಕಿಸ್ತಾನ ಏಷ್ಯಾ ಕಪ್ ಆತಿಥ್ಯ ವಹಿಸಿಕೊಳ್ಳದಿದ್ದರೆ ನಾವು ಆಯೋಜಿಸಿತ್ತೇವೆ ಎಂದು ಹೇಳಿಕೆ ಕೊಟ್ಟಿರುವ ಶ್ರೀಲಂಕಾ ಕ್ರಿಕೆಟ್ ಸಂಸ್ಥೆ ಬಗ್ಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಬೇಸರಗೊಂಡಿದೆ ಎಂಬುದಾಗಿ ವರದಿಯಾಗಿದೆ. ಇದೇ ರೀತಿ ಭಾರತಕ್ಕೆ ಸಪೋರ್ಟ್ ಮಾಡಿದರೆ ನಿಮ್ಮ ಜತೆ ಏಕ ದಿನ ಕ್ರಿಕೆಟ್ ಸರಣಿಯಲ್ಲಿ ಆಡುವುದಿಲ್ಲ ಎಂದು ಬೆದರಿಕೆ ಒಡ್ಡಿದೆ ಎಂಬುದಾಗಿಯೂ ವರದಿಯಾಗಿದೆ.
ನಜಾಮ್ ಸೇಥಿ ಪ್ರಸ್ತಾಪಿಸಿದ ಹೈಬ್ರಿಡ್ ಮಾದರಿಯನ್ನು ಬಿಸಿಸಿಐ ತಿರಸ್ಕರಿಸಿತ್ತು. ಈ ವೇಳೆ ನಾವು ಟೂರ್ನಿ ನಡೆಸುತ್ತೇವೆ ಎಂಬುದಾಗಿ ಶ್ರೀಲಂಕಾ ಕ್ರಿಕೆಟ್ ಸಂಸ್ಥೆ ಹೇಳಿಕೆ ಕೊಟ್ಟಿತು. ಇದು ಪಿಸಿಬಿ ಮತ್ತು ಶ್ರೀಲಂಕಾ ಕ್ರಿಕೆಟ್ (ಎಸ್ಎಲ್ಸಿ) ನಡುವಿನ ಸಂಬಂಧಗಳನ್ನು ಹದಗೆಡಿಸಿವೆ. ಹೇಳಿಕೆಗೆ ಪ್ರತಿಕಾರ ಎಂಬಂತೆ ಮುಂದಿನ ತಿಂಗಳು ಶ್ರೀಲಂಕಾದಲ್ಲಿ ಏಕದಿನ ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿಸುವ ಲಂಕಾ ಕ್ರಿಕೆಟ್ ಸಂಸ್ಥೆಯ ಪ್ರಸ್ತಾಪವನ್ನು ಪಿಸಿಬಿ ತಿರಸ್ಕರಿಸಿದೆ. ಹೀಗಾಗಿ ಉಭಯ ಮಂಡಳಿಗಳ ಸಂಬಂಧ ಸಂಪೂರ್ಣವಾಗಿ ಹದಗೆಡುವ ಲಕ್ಷಣಗಳು ಎದ್ದು ಕಾಣುತ್ತಿವೆ.
ಮುಂದಿನ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ನ ಎರಡು ಟೆಸ್ಟ್ ಪಂದ್ಯಗಳನ್ನು ಆಡಲು ಪಾಕಿಸ್ತಾನ ತಂಡ ಜುಲೈನಲ್ಲಿ ಶ್ರೀಲಂಕಾಕ್ಕೆ ಪ್ರವಾಸ ಮಾಡಲಿದೆ. ಜಿಂಬಾಬ್ವೆಯಲ್ಲಿ ನಡೆಯಲಿರುವ ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯದಲ್ಲಿ ಲಂಕಾ ತಂಡ ಆಡಬೇಕಾಗಿದೆ. ಅದಕ್ಕಿಂತ ಮೊದಲು ಏಕ ದಿನ ಸರಣಿಯನ್ನು ಆಯೋಜಿಸುವ ಪ್ರಸ್ತಾಪ ಶ್ರೀಲಂಕಾ ಕ್ರಿಕೆಟ್ ಸಂಸ್ಥೆಯದ್ದಾಗಿತ್ತು ಈ ಪ್ರಸ್ತಾಪವನ್ನು ಪರಿಗಣಿಸುವುದಾಗಿ ಆರಂಭದಲ್ಲಿ ಹೇಳಿದ್ದ ಪಿಸಿಬಿ ಭಾರತಕ್ಕೆ ಬೆಂಬಲಿಸಿದರು ಎಂಬ ಕಾರಣಕ್ಕೆ ಯೂಟರ್ನ್ ಹೊಡೆದಿದೆ ಎಂದು ಮೂಲಗಳು ತಿಳಿಸಿವೆ.
ಸೆಪ್ಟೆಂಬರ್ನಲ್ಲಿ ಏಷ್ಯಾಕಪ್ ಆತಿಥ್ಯ ವಹಿಸಲು ಶ್ರೀಲಂಕಾ ಕ್ರಿಕೆಟ್ ಮಂಡಳಿಯು ಮುಂದಾಗಿರುವುದು ಪಿಸಿಬಿಗೆ ಹಿತಕರ ಎನಿಸಿಲ್ಲ ಎಂಬುದರ ಸ್ಟಷ್ಟ ಸೂಚನೆ ಇದಾಗಿದೆ. ಇದೇ ವೇಳೆ ಏಷ್ಯಾಕಪ್ ವಿಷಯದ ಬಗ್ಗೆ ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ಮಂಡಳಿಗಳೂ ಭಾರತದ ಬೆಂಬಲಕ್ಕೆ ನಿಂತಿದೆ. ಇದರ ಬಗ್ಗೆಯೂ ಪಿಸಿಬಿ ಅಧ್ಯಕ್ಷ ಸೇಥಿ ಬೇಸರ ವ್ಯಕ್ತಪಡಿಸಿದ್ದಾರೆ ಎಂದು ವರದಿಗಳು ಹೇಳಿವೆ.
ಇದನ್ನು ಓದಿ : WTC Final 2023: ಇಬ್ಬರು ಆಟಗಾರರ ಮೇಲೆ ವಿಶೇಷ ನಿಗಾ ಅಗತ್ಯ; ಪಾಂಟಿಂಗ್ ಹೇಳಿದ ಈ ಟೀಮ್ ಇಂಡಿಯಾದ ಆಟಗಾರರು ಯಾರು?
“ಪಾಕಿಸ್ತಾನದ ಜತೆ ದೀರ್ಘಕಾಲದಿಂದ ಸ್ನೇಹ ಸಂಬಂಧ ಹೊಂದಿರುವ ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನವು ಭಾರತೀಯ ಕ್ರಿಕೆಟ್ ಮಂಡಳಿಗೆ ಬೆಂಬಲ ನೀಡದು ಎಂದು ಪಿಸಿಬಿ ಅಧ್ಯಕ್ಷ ಯೋಚಿಸಿದ್ದರು. ಆದರೆ, ಈ ಮೂರು ಮಂಡಳಿಗಳು ಏಷ್ಯಾ ಕ್ರಿಕೆಟ್ ಕೌನ್ಸಿಲ್ ಯೋಜನೆ ಪ್ರಕಾರ ಭಾರತದ ಬೆಂಬಲಕ್ಕೆ ನಿಂತಿದೆ. ಇದು ಪಿಸಿಬಿ ಅಧ್ಯಕ್ಷ ನಜಾಮ್ ಸೇಥಿಯ ಪಿತ್ತ ನೆತ್ತಿಗೇರುವಂತೆ ಮಾಡಿದೆ.
ನಿರಾಸೆಗೊಳಗಾದ ಪಿಸಿಬಿ ಅಧ್ಯಕ್ಷ
ಇತ್ತೀಚಿನ ದಿನಗಳಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಯಾರೂ ಬೆಂಬಲ ನೀಡದಿರುವುದು ನಜಾಮ್ ಸೇಥಿಯ ವಿಶ್ವಾಸ ಕುಗ್ಗುಂತೆ ಮಾಡಿದೆ. ವಿಶೇಷವಾಗಿ ಎಲ್ಲ ದೇಶಗಳ ಕ್ರಿಕೆಟ್ ಮಂಡಳಿಗಳ ಮುಖ್ಯಸ್ಥರು ಐಪಿಎಲ್ ಫೈನಲ್ ವೇಳೆ ಭಾರತಕ್ಕೆ ಭೇಟಿ ನೀಡಿ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರನ್ನು ಭೇಟಿಯಾಗಿ ಬಂದಿರುವುದು ಸೇಥಿಯ ಬೇಸರಕ್ಕೆ ಕಾರಣವಾಗಿದೆ.
ಸೇಥಿ ಅವರು ಹೇಳಿರುವ ಹೈಬ್ರಿಡ್ ಮಾದರಿ ಪ್ರಸ್ತಾಪವನ್ನು ಬಿಸಿಸಿಐ ಮತ್ತು ಜಯ್ ಶಾ ತಿರಸ್ಕರಿಸಿದ್ದಾರೆ. ಏಷ್ಯಾ ಕಪ್ ಅನ್ನು ಶ್ರೀಲಂಕಾದಲ್ಲಿ ನಡೆಯಲಿ ಎಂದು ಅವರು ಬಯಸಿದ್ದಾರೆ. ಆದರೆ ಏಷ್ಯಾ ಕಪ್ ಬಗ್ಗೆ ಭಾರತೀಯ ಮಂಡಳಿಯು ತನ್ನ ನಿಲುವನ್ನು ಬದಲಿಸದಿದ್ದರೆ ಏಷ್ಯಾ ಕಪ್ ಮತ್ತು ಮುಂಬರುವ ವಿಶ್ವ ಕಪ್ ತಯಾರಿಯಲ್ಲಿ ದೊಡ್ಡ ಸಮಸ್ಯೆ ಉಂಟಾಗಲಿದೆ.