ಚೆನ್ನೈ: ಟೀಮ್ ಇಂಡಿಯಾ ಆಟಗಾರರು ವಿಶ್ವಕಪ್(icc world cup 2023) ಟೂರ್ನಿಯಲ್ಲಿ ವೈಯಕ್ತಿಕ ದಾಖಲೆಯನ್ನು ಬದಿಗಿಟ್ಟು ದೇಶಕ್ಕಾಗಿ ಒಗ್ಗಟ್ಟಿನಿಂದ ಆಡಬೇಕು ಎಂದು ವಿಶ್ವಕಪ್ ವಿಜೇತ ತಂಡದ ಮಾಜಿ ಆಟಗಾರ ಹರ್ಭಜನ್ ಸಿಂಗ್(Harbhajan Singh) ಹೇಳಿದ್ದಾರೆ. ಜತೆಗೆ ಈ ಬಾರಿ ತವರಿನ ಲಾಭವೆತ್ತಿ ಕಪ್ ಗೆಲ್ಲಬೇಕು ಎಂದು ಹೇಳಿದ್ದಾರೆ.
ವಿಶ್ವಕಪ್ ವಿಶೇಷ ಸಂದರ್ಶನದಲ್ಲಿ ಅಭಿಪ್ರಾಯ ಹಂಚಿಕೊಂಡ ಹರ್ಭಜನ್, “2011ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಮಹೇಂದ್ರ ಸಿಂಗ್ ಧೋನಿ ಸಾರಥ್ಯದ ಭಾರತ ತಂಡ 2ನೇ ಬಾರಿ ವಿಶ್ವಕಪ್ ಟ್ರೋಫಿ ಗೆದ್ದ ವೇಳೆ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್(sachin tendulkar) ಅವರನ್ನು ಹೆಗಲ ಮೇಲೆ ಹೊತ್ತು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಗೌರವ ಸಲ್ಲಿಸಲಾಗಿತ್ತು. ಆದರೆ ಆ ಬಳಿಕ ಇಂತಹ ಕ್ಷಣ ಕಂಡುಬಂದಿಲ್ಲ ಎಂದರು.
“2011ರ ವಿಶ್ವಕಪ್ ಟೂರ್ನಿಯಲ್ಲಿ ಸಚಿನ್ ಮತ್ತು ಮಹೇಂದ್ರ ಸಿಂಗ್ ಧೋನಿಗೆ(ms dhoni) ಸಿಕ್ಕ ಗೌರವ ಆ ಬಳಿಕ ಇಂತಹ ಗೌರವ ಪಡೆದ ಬೇರೆ ಆಟಗಾರರನ್ನು ನಾನು ನೋಡಿಲ್ಲ” ನಾನು ದೇಶಕ್ಕಾಗಿ ಆಡಿದ್ದೆ , ವೈಯಕ್ತಿಕ ದಾಖಲೆಗಾಗಿ ಅಲ್ಲ” ಎಂದರು. ಎಲ್ಲ ಆಟಗಾರರು ದೇಶದ ಧ್ವಜಕ್ಕೆ ಗೌರವ ಸಲ್ಲಿಸುವ ದೃಷ್ಟಿಯಿಂದ ಆಡಬೇಕು ಎಂದರು.
ಇದ್ನನೂ ಓದಿ IND vs AUS: ವಿಶ್ವ ದಾಖಲೆ ನಿರ್ಮಿಸಲು ಸಜ್ಜಾದ ಹಿಟ್ ಮ್ಯಾನ್ ರೋಹಿತ್ ಶರ್ಮ
ತಂಡಕ್ಕಾಗಿ ಆಡಿದ್ದೆ
“ನಾನು ಯಾವಾಗಲೂ ಭಾರತಕ್ಕಾಗಿ ಆಡಿದ್ದೇನೆಯೇ ಹೊರತು ವೈಯಕ್ತಿಕ ದಾಖಲೆಗಳ ಬಗ್ಗೆ ಕನಸಿನಲ್ಲೂ ಚಿಂತಿಸಿರಲಿಲ್ಲ. ದಿಗ್ಗಜ ನಾಯಕರಾದ ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್, ಕುಂಬ್ಳೆ ಮತ್ತು ಧೋನಿ ಅವರಂತಹ ನಾಯಕತ್ವದಡಿ ಆಡಿದ್ದೇನೆ. ಆದರೆ ನನಗೆ ನಾಯಕರು ಯಾರು ಎಂಬುದು ಮುಖ್ಯ ಆಗಿರಲಿಲ್ಲ, ಬದಲಿಗೆ ನನ್ನ ಆಟದ ಮತ್ತು ದೇಶದ ಬಗ್ಗೆ ಗೌರವ ಇಟ್ಟು ಆಡಿದೆ” ಎಂದು ಹೇಳಿದರು.
“ತವರಿನ ಅಂಗಳದಲ್ಲಿ ನಡೆಯುತ್ತಿರುವ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ನಮ್ಮ ತಂಡ ಗೆಲ್ಲಬೇಕು. ಅದು ಬಿಟ್ಟು ವಿರಾಟ್ ಕೊಹ್ಲಿಗಾಗಿ ಆಗಲಿ, ರಾಹುಲ್ ದ್ರಾವಿಡ್‍ಗೋಸ್ಕರ ಗೆಲ್ಲುವುದಲ್ಲ. ಎಲ್ಲರು ಒಗ್ಗಟಿನಿಂದ ಆಡಿ ದೇಶದ ಕೀರ್ತಿ ಪತಾಕೆಯನ್ನು ಎತ್ತಿ ಹಿಡಿಯಬೇಕು” ಎಂದರು.
ಸಚಿನ್ ಆಯ್ಕೆಯ ನಾಲ್ಕು ಸೆಮಿಫೈನಲ್ ತಂಡಗಳು
ಸಚಿನ್ ತೆಂಡೂಲ್ಕರ್(Sachin Tendulkar) ಅವರು ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸುವ 4 ತಂಡಗಗಳನ್ನು ಆಯ್ಕೆ ಮಾಡಿದ್ದಾರೆ. ಭಾರತ ತಂಡ ಸೆಮಿಫೈನಲ್ ಪ್ರವೇಶ ಪಡೆಯುವುದರಲ್ಲಿ ಯಾವುದೇ ಅನುಮಾನ ಬೇಡ. ಈ ಬಾರಿ ತಂಡ ಹೆಚ್ಚು ಸಮತೋಲನವಾಗಿದೆ. ಯುವ ಆಟಗಾರರು ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ಹೀಗಾಗಿ ನನ್ನ ಮೊದಲ ಆಯ್ಕೆ ಭಾರತ ಎಂದು ಹೇಳಿದರು. ದ್ವಿತೀಯ ಆಯ್ಕೆಯ ತಂಡವೆಂದರೆ ಅದು ಆಸ್ಟ್ರೇಲಿಯಾ. ಈ ತಂಡದಲ್ಲಿಯೂ ಅನುಭವಿ ಆಟಗಾರರು ಹೆಚ್ಚಾಗಿ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಆಸೀಸ್ ಕೂಡ ಸೆಮಿಫೈನಲ್ ಪ್ರವೇಶ ಪಡೆಯಲಿದೆ ಎಂದರು.
ಹಾಲಿ ಚಾಂಪಿಯನ್ ಇಂಗ್ಲೆಂಡ್ ಕೂಡ ಈ ಬಾರಿ ಸೆಮಿ ಪ್ರವೇಶ ಪಡೆಯುವ ಸಾಧ್ಯತೆ ಅಧಿಕವಾಗಿದೆ. ಬೆನ್ ಸ್ಟೋಕ್ಸ್ ಆಗಮನ ತಂಡಕ್ಕೆ ಹೆಚ್ಚು ಆತ್ಮವಿಶ್ವಾಸ ನೀಡಿದೆ. ನಾಲ್ಕನೇ ತಂಡವಾಗಿ ನ್ಯೂಜಿಲ್ಯಾಂಡ್ ಸೆಮಿಫೈನಲ್ ಪ್ರವೇಶ ಪಡೆಯಲಿದೆ ಎಂದು ಸಚಿನ್ ತಮ್ಮ ಆಯ್ಕೆಯ ನಾಲ್ಕು ಸೆಮಿಫೈನಲ್ ತಂಡವನ್ನು ಆಯ್ಕೆ ಮಾಡಿದ್ದಾರೆ. ಸಚಿನ್ ಹೆಸರಿಸಿದ ತಂಡಗಳು ಸೆಮಿಫೈನಲ್ಗೆ ಬರಲಿದೆಯಾ ಎಂದು ಕಾದು ನೋಡಬೇಕಿದೆ.