ಮುಂಬಯಿ: ದೇಶಿ ಟೂರ್ನಿಗಳು ಕ್ರಿಕೆಟ್‌ನ ಜೀವಾಳ. ಹಿಂದೆಲ್ಲ ಇಲ್ಲಿ ಉತ್ತಮವಾಗಿ ಆಡಿದವರು ರಾಷ್ಟ್ರೀಯ ತಂಡದಲ್ಲಿ ಅವಕಾಶ ಪಡೆಯುತ್ತಿದ್ದರು. ಈಗ ಸ್ವಲ್ಪ ಬದಲಾವಣೆ ಆಗಿದೆ. ಐಪಿಎಲ್ ಮೂಲಕವೂ ಹಲವಾರು ಪ್ರತಿಭೆಗಳು ಬೆಳಕಿಗೆ ಬಂದಿವೆ. ಆದರೂ ಯುವ ಕ್ರಿಕೆಟಿಗರಿಗೆ ಹೆಚ್ಚಿನ ಅವಕಾಶ ನೀಡುವುದು ದೇಶೀಯ ಪಂದ್ಯಗಳು. ಅಂತೆಯೇ ಬಿಸಿಸಿಐ ಕೂಡ ದೇಶೀಯ ಟೂರ್ನಿಗಳಿಗೆ ಉತ್ತೇಜನ ನೀಡಲು ನಾನಾ ಕ್ರಮಗಳನ್ನು ಕೈಗೊಳ್ಳುತ್ತಿವೆ. ಇದೇ ನಿಟ್ಟಿನಲ್ಲಿ ಮುಂದಿನ ಬಾರಿಯಿಂದ ರಣಜಿ ಟ್ರೋಫಿಯ ಬಹುಮಾನ ಮೊತ್ತವನ್ನು ಎರಡು ಪಟ್ಟು ಏರಿಕೆ ಮಾಡಲಾಗಿದೆ.
ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ಏಪ್ರಿಲ್ 16ರಂದು ಈ ಕುರಿತು ಪ್ರಕಟಣೆ ಹೊರಡಿಸಿದ್ದು, ಪುರುಷರ ಹಾಗೂ ಮಹಿಳೆಯರ ಎಲ್ಲ ಮಾದರಿಯ ದೇಶಿಯ ಕ್ರಿಕೆಟ್ ಪಂದ್ಯಗಳ ಬಹುಮಾನ ಮೊತ್ತ ಏರಿಕೆ ಮಾಡಲಾಗಿದೆ. ಅದರ ಪ್ರಕಾರ ಮುಂದಿನ ವರ್ಷದಿಂದ ರಣಜಿ ಟ್ರೋಫಿ ಗೆದ್ದ ತಂಡವು 5 ಕೋಟಿ ರೂಪಾಯಿ ಬಹುಮಾನ ಪಡೆಯಲಿದೆ. ಇಲ್ಲಿಯ ತನಕ ಅದು 2 ಕೋಟಿ ರೂಪಾಯಿಗೆ ಸೀಮಿತವಾಗಿತ್ತು. ಅಂತೆಯೇ ರನ್ನರ್ ಅಪ್ ತಂಡ 3 ಕೋಟಿ ರೂಪಾಯಿ, ಸೆಮಿ ಫೈನಲ್ಸ್ನಲ್ಲಿ ಸೋತ ತಂಡಗಳು ತಲಾ ಒಂದು ಕೋಟಿ ರೂಪಾಯಿ ಬಾಚಿಕೊಳ್ಳಲಿವೆ.
ಇರಾನಿ ಟ್ರೋಫಿಯನ್ನು ಗೆದ್ದ ತಂಡವು ಇನ್ನು 50 ಲಕ್ಷ ರೂಪಾಯಿ ಪಡೆದುಕೊಳ್ಳಲಿದೆ. ಇಲ್ಲೂ ಎರಡು ಪಟ್ಟು ಏರಿಕೆ ಮಾಡಲಾಗಿದೆ. ರನ್ನರ್ ಅಪ್ ತಂಡಕ್ಕೆ 25 ಲಕ್ಷ ರೂಪಾಯಿ ಬಹುಮಾನ ದೊರೆಯಲಿದೆ. ವಿಜಯ್ ಹಜಾರೆ ಹಾಗೂ ದುಲೀಪ್ ಟ್ರೋಫಿ ಗೆದ್ದ ತಂಡಗಳು ಕ್ರಮವಾಗಿ ಒಂದು ಕೋಟಿ ರೂಪಾಯಿ ಹಾಗೂ ರನ್ನರ್ ಅಪ್ ತಂಡಗಳು ತಲಾ 50 ಲಕ್ಷ ರೂಪಾಯಿ ಜೇಬಿಗಿಳಿಸಲಿವೆ.
ದೇವಧರ್ ಟ್ರೋಫಿ ಗೆದ್ದ ತಂಡಕ್ಕೆ 40 ಲಕ್ಷ ರೂಪಾಯಿ ನಿಗದಿ ಮಾಡಲಾಗಿದೆ. ಸೆಮಿಫೈನಲ್ನಲ್ಲಿ ಸೋಲುವ ತಂಡಕ್ಕೆ 20 ಲಕ್ಷ ರೂಪಾಯಿ ಬಹುಮಾನ ದೊರೆಯಲಿದೆ. ಸೈಯದ್ ಮುಷ್ತಾಕ್ ಅಲಿ ಟೂರ್ನಿಯ ಚಾಂಪಿಯನ್ ತಂಡ 80 ಲಕ್ಷ ರೂಪಾಯಿ ಮತ್ತು ರನ್ನರ್ ಅಪ್ ತಂಡ 40 ಲಕ್ಷ ರೂಪಾಯಿಗಳನ್ನು ಪಡೆದುಕೊಳ್ಳಲಿದೆ.
ಮಹಿಳಾ ಕ್ರಿಕೆಟಿಗರಿಗೂ ದೊಡ್ಡ ಮೊತ್ತದ ಬಹುಮಾನ
ಮಹಿಳೆಯರ ಏಕ ದಿನ ಕ್ರಿಕೆಟ್ ಟೂರ್ನಮೆಂಟ್ನಲ್ಲಿ ಗೆದ್ದ ತಂಡಕ್ಕೆ ಹಿಂದೆ ಕೇವಲ 6 ಲಕ್ಷ ರೂಪಾಯಿ ಬಹುಮಾನ ನೀಡಲಾಗುತ್ತಿತ್ತು. ಇನ್ನು ಮುಂದೆ ಈ ಟ್ರೋಫಿ ಗೆದ್ದವರು 50 ಲಕ್ಷ ರೂಪಾಯಿ ಕೊಂಡೊಯ್ಯಲಿದ್ದಾರೆ. ಅದೇ ರೀತಿ ರನ್ನರ ಅಪ್ ತಂಡ 25 ಲಕ್ಷ ರೂಪಾಯಿ ಪಡೆದುಕೊಳ್ಳಲಿದೆ.
ಅದೇ ರೀತಿ ಹಿರಿಯ ಮಹಿಳೆಯರ ಟಿ20 ಕ್ರಿಕೆಟ್ ಲೀಗ್ನಲ್ಲಿ ಗೆದ್ದ ತಂಡ 40 ಲಕ್ಷ ರೂಪಾಯಿ ಬಹುಮಾನ ಪಡೆದುಕೊಂಡರೆ, ರನ್ನರ್ ಅಪ್ ತಂಡ 20 ಲಕ್ಷ ರೂಪಾಯಿ ಪಡೆದುಕೊಳ್ಳಲಿದೆ. ಇದುವರೆಗೆ ಚಾಂಪಿಯನ್ ಬಳಗ 5 ಲಕ್ಷ ರೂಪಾಯಿ ಪಡೆದುಕೊಳ್ಳುತ್ತಿತ್ತು.
ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ಟ್ವೀಟ್ನಲ್ಲಿ ಈ ರೀತಿ ಬರೆದುಕೊಂಡಿದ್ದಾರೆ. ಬಿಸಿಸಿಐನ ಎಲ್ಲ ದೇಶೀಯ ಪಂದ್ಯಾವಳಿಗಳ ಬಹುಮಾನ ಮೊತ್ತ ಹೆಚ್ಚಳವನ್ನು ಘೋಷಿಸಲು ನನಗೆ ಸಂತೋಷವಾಗಿದೆ. ಭಾರತೀಯ ಕ್ರಿಕೆಟ್‌ನ ಬೆನ್ನೆಲುಬಾಗಿರುವ ದೇಶೀಯ ಕ್ರಿಕೆಟ್‌ನಲ್ಲಿ ಹೂಡಿಕೆ ಮಾಡಲು ನಮ್ಮ ಪ್ರಯತ್ನಗಳನ್ನು ಮುಂದುವರಿಯಲಿವೆ. ರಣಜಿ ವಿಜೇತರಿಗೆ ₹5 ಕೋಟಿ (2 ಕೋಟಿಯಿಂದ), ಸೀನಿಯರ್ ಮಹಿಳಾ ವಿಜೇತರಿಗೆ ₹50 ಲಕ್ಷ ರೂಪಾಯಿ ಸಿಗಲಿದೆ (6 ಲಕ್ಷದಿಂದ).