Site icon Vistara News

DP Manu: ಡೋಪಿಂಗ್ ಸುಳಿಯಲ್ಲಿ ಸಿಲುಕಿದ ಜಾವೆಲಿನ್‌ ತಾರೆ ಮನು; ಒಲಿಂಪಿಕ್ಸ್​ಗೆ ಹಿನ್ನಡೆ

DP Manu

DP Manu: National Anti-Doping Agency suspends javelin thrower DP Manu, Paris hopes lost

ಬೆಂಗಳೂರು: ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುವ ವಿಶ್ವಾಸದಲ್ಲಿದ, ಕನ್ನಡಿಗ, ಜಾವೆಲಿನ್‌ ಥ್ರೊ ಸ್ಪರ್ಧಿ ಡಿ.ಪಿ. ಮನು(DP Manu) ಅವರಿಗೆ ಆಘಾತವೊಂದು ಎದುರಾಗಿದೆ. ಅವರು ಉದ್ದೀಪನ ಮದ್ದು ಸೇವನೆ ಬಲೆಯಲ್ಲಿ ಸಿಲುಕಿರುವ ಸಾಧ್ಯತೆಯೊಂದು ಕಂಡುಬಂದಿದೆ. ರಾಷ್ಟ್ರೀಯ ಉದ್ದೀಪನ ಮದ್ದುಸೇವನೆ ತಡೆ ಘಟಕ (National Anti-Doping Agency) ಸೂಚನೆಯ ಮೇರೆಗೆ ಮನು ಅವರಿಗೆ ಸ್ಪರ್ಧೆಗಳಿಂದ ದೂರ ಉಳಿಯುವಂತೆ ಅಥ್ಲೆಟಿಕ್ಸ್‌ ಫೆಡರೇಷನ್ ಆಫ್‌ ಇಂಡಿಯಾ (ಎಎಫ್‌ಐ) ಹೇಳಿದೆ. ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ವಿಶ್ವಾಸದಲ್ಲಿದ್ದ

ಕಳೆದ ವರ್ಷ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಪದಕ, ಮತ್ತು ಕಳೆದ ತಿಂಗಳು ಭುವನೇಶ್ವರದಲ್ಲಿ ನಡೆದ ಫೆಡರೇಷನ್‌ ಕಪ್‌ ಕೂಟದಲ್ಲಿ ನೀರಜ್​ ಚೋಪ್ರಾಗೆ ಭಾರೀ ಪೈಪೋಟಿ ನೀಡಿ ಬೆಳ್ಳಿ ಗೆದ್ದಿದ್ದ 24 ವರ್ಷ ವರ್ಷದ ಮನು ಅವರು ವಿಶ್ವ ರ‍್ಯಾಂಕಿಂಗ್‌ ಆಧಾರದಲ್ಲಿ ಒಲಿಂಪಿಕ್ಸ್‌ಗೆ ಆಯ್ಕೆಯಾಗುವುದು ಬಹುತೇಕ ಖಚಿತವಾಗಿತ್ತು. ಆದರೆ ಅವರ ವಿರುದ್ಧ ಉದ್ದೀಪನ ಮದ್ದು ಸೇವನೆ ಆರೋಪ ಕೇಳಿ ಬಂದಿರುವ ಕಾರಣ ಅವರಿಗೆ ‘ಪ್ಯಾರಿಸ್‌ ಟಿಕೆಟ್‌’ ಕೈತಪ್ಪುವ ಆತಂಕ ಎದುರಾಗಿದೆ.

ಹರಿಯಾಣದ ಪಂಚಕುಲಾದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಅಂತರ-ರಾಜ್ಯ ಚಾಂಪಿಯನ್‌ಷಿಪ್ಸ್‌ನ ಪ್ರಾಥಮಿಕ ಪಟ್ಟಿಯಲ್ಲಿ ಮನು ಹೆಸರು ಹೆಸರು ಇತ್ತು. ಆದರೆ ನಾಡಾ(NADA) ಸೂಚನೆಯ ಮೇರೆಗೆ ಪರಿಷ್ಕೃತ ಪಟ್ಟಿಯಿಂದ ಅವರ ಹೆಸರನ್ನು ಕೈಬಿಡಲಾಗಿದೆ. ಸ್ಪರ್ಧಾಕೂಟಗಳಲ್ಲಿ ಭಾಗವಹಿಸದಂತೆ ಮನು ಅವರನ್ನು ತಡೆಯುವಂತೆ ‘ನಾಡಾ’, ಫೆಡರೇಷನ್‌ಗೆ ಸೂಚನೆ ನೀಡಿದೆ.

ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಎಎಫ್‌ಐ ಅಧ್ಯಕ್ಷ ಅದಿಲ್‌ ಸುಮರಿವಾಲಾ, ನಾಡಾ ಸೂಚನೆಯಂತೆ ಅವರನ್ನು ಯಾವುದೇ ಸ್ಪರ್ಧೆಯಲ್ಲಿ ಪಾಲ್ಗೊಳ್ಳದಂತೆ ಹೇಳಲಾಗಿದೆ. ಆದರೆ ಅವರು ಉದ್ದೀಪನ ಮದ್ದು ಸೇವನೆ ಪ್ರಕರಣದಲ್ಲಿ ದೋಷಿಯಾಗಿದ್ದಾರೆಯೇ ಎಂಬುದು ಖಚಿತವಾಗಿಲ್ಲ ಎಂದು ಪಿಟಿಐಗೆ ಹೇಳಿದ್ದಾರೆ.

ಡಿ.ಪಿ. ಮನು ಅವರು ಹಾಸನ(D. P. Manu Hassan) ಜಿಲ್ಲೆ ಬೇಲೂರು ತಾಲೂಕು ಕುಪ್ಪಗೋಡು ಗ್ರಾಮದವರು. ತಂದೆ ಪ್ರಕಾಶ ಹಾಗೂ ತಾಯಿ ಸುಜಾತಾ. ಹೊಯ್ಸಳ ಶಾಲೆಯಲ್ಲಿ ಓದುವಾಗಲೇ ಭರ್ಜಿಯತ್ತ ಆಕರ್ಷಣೆ ಬೆಳೆಸಿಕೊಂಡ ಮನು ಮೂಡುಬಿದಿರೆಯ ಆಳ್ವಾಸ್‌ ಕಾಲೇಜಿನಲ್ಲಿ ಕಠಿಣ ತರಬೇತಿ ಪಡೆದರು. ಇದೇ ವೇಳೆ ಮನು ಅವರು ಅಂತಾರಾಜ್ಯ, ಜೂನಿಯರ್‌ ರಾಷ್ಟ್ರೀಯ ಕೂಟಗಳಲ್ಲಿ ಭಾಗವಹಿಸಿ ಸೈ ಎನಿಸಿಕೊಂಡರು. ಆಳ್ವಾಸ್‌ ಕಾಲೇಜಿನಲ್ಲಿ ಅವರು ಪಡೆದ ತರಬೇತಿ, ನೀಡಿದ ಪ್ರದರ್ಶನವು ಚಿಗುರು ಮೀಸೆ ಹುಡುಗನನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದಿದೆ.

ಕಾಶಿನಾಥ ನಾಯ್ಕ್ ಗರಡಿಯಲ್ಲಿ ಬೆಳೆದ ಪ್ರತಿಭೆ


ಮನು ಅವರು ಕಾಶಿನಾಥ ನಾಯ್ಕ್​ ಅವರ ಗರಡಿಯಲ್ಲಿ ಬೆಳೆದು ಬಂದ ಪ್ರತಿಭೆ. 2020ರಲ್ಲಿ ಡಿ.ಪಿ.ಮನು ಅವರಿಗೆ ಮಹತ್ವದ ತಿರುವು ಸಿಕ್ಕಿತು. ಅವರು ಪುಣೆಯಲ್ಲಿರುವ ಆರ್ಮಿ ಸ್ಪೋರ್ಟ್ಸ್‌ ಇನ್‌ಸ್ಟಿಟ್ಯೂಟ್‌ನಲ್ಲಿ ಹವಾಲ್ದಾರ್‌ ಕೆಲಸಕ್ಕೆ ಸೇರಿದರು. ಇದೇ ವೇಳೆ ಕಾಶಿನಾಥ ನಾಯ್ಕ್​ ಅವರ ಪರಿಚಯವಾಯಿತು. ಕಾಶಿನಾಥ ಅವರ ಬಳಿ ಸತತ ತರಬೇತಿ ಪಡೆದ ಮನು, 65 ಮೀಟರ್‌ ದೂರ ಭರ್ಜಿ ಎಸೆತದಿಂದ 80 ಮೀಟರ್‌ ದಾಟುವಂತಾದರು. ಇದೀಗ ವಿಶ್ವ ಚಾಂಪಿಯನ್​ ನೀರಜ್​ಗೆ ತೀವ್ರ ಪೈಪೋಟಿ ನೀಡುವಷ್ಟರ ಮಟ್ಟಿಗೆ ಬೆಳೆದು ನಿಂತಿದ್ದಾರೆ. ನೀರಜ್​ ಕೂಡ ಕಾಶಿನಾಥ ನಾಯ್ಕ್ ಮಾರ್ಗದರ್ಶನದಲ್ಲೇ ಬೆಳೆದು ಬಂದ ಪ್ರತಿಭೆಯಾಗಿದ್ದಾರೆ. ಒಟ್ಟಿನಲ್ಲಿ ಕನ್ನಡಿಗರೊಬ್ಬರು ಜಾವೆಲಿನ್‌ ಥ್ರೋ ಮೂಲಕ ಜಾಗತಿಕ ಮಟ್ಟದಲ್ಲಿ ಹೆಸರು ಮಾಡುತ್ತಿರುವುದು ಹೆಮ್ಮೆಯ ಸಂಗತಿ.

Exit mobile version